‘ಹಡಪದ ಸಮಾಜಕ್ಕೆ ಅವಮಾನ’

ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಮಂಗಳವಾರ ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹಡಪದರು ಶಾಸಕರಾಗಿ ಆಯ್ಕೆಯಾದರೆ ದಾಡಿ, ಕಟಿಂಗ್ ಮಾಡುತ್ತ ತಿರುಗುತ್ತಾರೆಯೇ ಎಂದು ಹೇಳಿ ನಮ್ಮ ಸಮಾಜಕ್ಕೆ ಅವಮಾನ ಮಾಡಿದ್ದಾರೆ’ ಎಂದು ಹಡಪದ ಸಮಾಜ ಸಂಘದ ಕಲಬುರ್ಗಿ ವಿಭಾಗೀಯ ಘಟಕದ ಅಧ್ಯಕ್ಷ ಹಾಗೂ ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಈರಣ್ಣ ಹಡಪದ ಆರೋಪಿಸಿದ್ದಾರೆ.
‘ಕಾಯಕ ಸಮಾಜಕ್ಕೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ. ಸಚಿವರು ತಕ್ಷಣ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ, ವಿಧಾನಸೌಧದ ಎದುರು ಧರಣಿ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.
ಖೂಬಾ ಖಂಡನೆ: ‘ಹಡಪದ ಸಮಾಜದವರೊಬ್ಬರು ಇಲ್ಲಿನ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅಂಥವರು ಆಯ್ಕೆಯಾದರೆ ಏನು ಶೇವಿಂಗ್ ಮಾಡುತ್ತಾರೆಯೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಪಹಾಸ್ಯ ಮಾಡಿರುವುದನ್ನು ಖಂಡಿಸುತ್ತೇನೆ’ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ.
ಸಚಿವರ ಹೇಳಿಕೆ: ‘ಪ್ರಚಾರ ಸಭೆಯಲ್ಲಿ ಹಡಪದ ಸಮಾಜದ ವಿರುದ್ಧ ಮಾತನಾಡಿಲ್ಲ. ಚುನಾವಣೆಯಲ್ಲಿ ರಾಜಕೀಯ ಲಾಭ
ಪಡೆದುಕೊಳ್ಳಲು ಕೆಲ ಕಿಡಿಗೇಡಿಗಳು ತಪ್ಪು ಸಂದೇಶಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿಬಿಡುತ್ತಿದ್ದಾರೆ’ ಎಂದು ಸಚಿವ ಪ್ರಭು ಚವಾಣ್ ಹೇಳಿದ್ದಾರೆ.
‘ಹಡಪದ ಸಮಾಜದ ಬಗ್ಗೆ ನನಗೆ ಅಪಾರ ಗೌರವ ಇದೆ. ಹಿಂದಿಯಲ್ಲಿ ಭಾಷಣ ಮಾಡುವಾಗ ಕೆಲವರಿಗೆ ತಪ್ಪು ಗ್ರಹಿಕೆ ಆಗಿದ್ದರೆ ವಿಷಾದಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.