ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಟಕಚಿಂಚೋಳಿ | ಕೈಹಿಡಿದ ಸಮಗ್ರ ಕೃಷಿ: ಲಾಭದಲ್ಲಿ ರೈತ

Published 21 ಮೇ 2024, 4:58 IST
Last Updated 21 ಮೇ 2024, 4:58 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ನಾವದಗಿ ಗ್ರಾಮದ ರೈತ ಭೀಮಣ್ಣ ಶೇರಿಕಾರ ಸಾಂಪ್ರಾದಾಯಿಕ ಬೆಳೆಗಳೊಂದಿಗೆ ವಿವಿಧ ಬಗೆಯ ತೋಟಗಾರಿಕೆ ಬೆಳೆ ಬೆಳೆದು ಅಧಿಕ ಲಾಭ ಗಳಿಸುತ್ತಿದ್ದಾರೆ.

ಇವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ 100, ಮಾವಿನ ಗಿಡ, 80 ಜಾಪಳ ಗಿಡ, 100 ಸಿತಾಫಲ, 18 ಲಿಂಬೆ, ಪಪ್ಪಾಯಿ ಸೇರಿದಂತೆ ಇನ್ನಿತರ ಗಿಡಗಳನ್ನು ಬೆಳೆದು ಕೈತುಂಬಾ ಆದಾಯ ಪಡೆಯುತ್ತಿದ್ದಾರೆ.

ಎಲ್ಲ ಗಿಡಗಳು ಉತ್ತಮವಾಗಿ ಫಲ ನೀಡುತ್ತಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಆದಾಯ ಲಭಿಸುತ್ತಿದೆ. ಇನ್ನುಳಿದ ಪ್ರೇಶದಲ್ಲಿ ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿ, ಸಾಂಪ್ರಾದಾಯಿಕ ಬೆಳೆಗಳಾದ ಉದ್ದು, ತೊಗರಿ, ಚಿಯಾ, ಗೋಧಿ, ಜೋಳ, ಕಬ್ಬು ಬೆಳೆಯುತ್ತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವಾರ್ಷಿಕ ₹ 7 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.

ರೈತ ಭೀಮಣ್ಣ ಓದಿದ್ದು ಮಾತ್ರ ಒಂಭತ್ತನೇ ತರಗತಿ. ಆದರೆ ಗಳಿಸುತ್ತಿರುವುದು ಲಕ್ಷ ಲಕ್ಷ. ಕಡಿಮೆ ನಿರ್ವಹಣಾ ವೆಚ್ಚ, ಅತಿ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕ ಬಳಕೆ, ಹೆಚ್ಚು ಪ್ರಮಾಣದಲ್ಲಿ ತಿಪ್ಪೆ ಗೊಬ್ಬರ ಉಪಯೋಗಿಸಿ, ರಾಸಾಯನಿಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ, ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಹೊಲದಲ್ಲಿನ ಗಿಡಗಳಿಂದ ಉರುಳಿದ ಎಲೆಗಳನ್ನು ಒಂದೆಡೆ ಸಂಗ್ರಹಿಸಿ ಅವು ಕೊಳೆತ ನಂತರ ಅದನ್ನು ಗೊಬ್ಬರವಾಗಿ ಬಳಸುತ್ತಿರುವುದು ಬಹಳ ವಿಶೇಷವಾಗಿದೆ.

‘ಕಡಿಮೆ ಕಾರ್ಮಿಕರಿಂದ ತೋಟಗಾರಿಕೆ ಮಾಡಬಹುದು. ಅದಕ್ಕಾಗಿ ಬಾವಿ, ಬೋರ್‌ವೆಲ್‌ ಮೂಲಕ ಕೃಷಿ ಹೊಂಡ ತುಂಬಿಸಿ, ಡ್ರಿಪ್‌ ಮೂಲಕ ಎಲ್ಲ ಗಿಡಗಳಿಗೆ ಸಿಂಪಡಿಸುತ್ತೇನೆ. ಇದರಿಂದ ಕಡಿಮೆ ಖರ್ಚು, ಅಧಿಕ ಆದಾಯ ಹೊಂದಬಹುದು’ ಎನ್ನುತ್ತಾರೆ ರೈತ ಭೀಮಣ್ಣ ಶೇರಿಕಾರ.

ನನಗೆ ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇತ್ತು. ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ತರಕಾರಿ ಬೆಳೆಯಲು ಆರಂಭಿಸಿದೆ. ಕೃಷಿ ಇಲಾಖೆಯ ತರಬೇತಿ ಕಾರ್ಯಕ್ರಮಗಳು ಸಮಗ್ರ ಕೃಷಿ ಕೈಗೊಳ್ಳಲು ಸ್ಫೂರ್ತಿ ನೀಡಿದವು. ತೆಂಗು, ಸಿತಾಫಲ, ಸಪೋಟ, ಮಾವು ನೆಟ್ಟು ಪೋಷಣೆ ಮಾಡಿದ್ದು ಬೆಳೆಗಳು ಹುಲುಸಾಗಿ ಬೆಳೆದಿವೆ' ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.

’ಮುಂದಿನ ದಿನಗಳಲ್ಲಿ 400 ರಕ್ತ ಚಂದನ ಗಿಡಗಳನ್ನು ನೆಡಲು ನಿರ್ಧರಿಸಿದ್ದೇನೆ. ಇದಕ್ಕಾಗಿ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಲಾಗಿದೆ. ಶೀಘ್ರದಲ್ಲಿಯೇ ಗಿಡಗಳನ್ನು ಕೊಡುವ ಭರವಸೆ ನೀಡಿದ್ದಾರೆ' ಎಂದು 'ಪ್ರಜಾವಾಣಿ' ಗೆ ತಿಳಿಸಿದ್ದಾರೆ.

ವಿವಿಧ ಜಾತಿಯ ಗಿಡ ಬೆಳೆದಿರುವ ನಾವದಗಿ ಗ್ರಾಮದ ರೈತ ಭೀಮಣ್ಣ ಶೇರಿಕಾರ
ವಿವಿಧ ಜಾತಿಯ ಗಿಡ ಬೆಳೆದಿರುವ ನಾವದಗಿ ಗ್ರಾಮದ ರೈತ ಭೀಮಣ್ಣ ಶೇರಿಕಾರ

ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಆದಾಯ ಗಳಿಸಬಹುದು. ಇದರಿಂದ ರೈತರಿಗೆ ನಷ್ಟ ಆಗುವುದಿಲ್ಲ

-ಭೀಮಣ್ಣ ಶೇರಿಕಾರ, ರೈತ

ಕೃಷಿ ವಿಜ್ಞಾನ ಕೇಂದ್ರದಿಂದ ರೈತರು ಅಗತ್ಯ ಮಾಹಿತಿ ಪಡೆಯಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬೇಕು

-ಮಲ್ಲಿಕಾರ್ಜುನ ನಿಂಗದಳ್ಳಿ, ತೋಟಗಾರಿಕೆ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT