ಮಂಗಳವಾರ, ಜನವರಿ 28, 2020
19 °C
ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ಅಭಿಪ್ರಾಯ

ಸಮನ್ವಯತೆಯೇ ದೇಶದ ಯಶಸ್ಸಿನ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಸಮನ್ವಯತೆಯೇ ದೇಶದ ಯಶಸ್ಸಿನ ಸೂತ್ರವಾಗಿದೆ. ಒಂದು ಸಮುದಾಯ ಇನ್ನೊಂದು ಸಮುದಾಯಕ್ಕೆ ಬೆಂಬಲ ನೀಡಿದರೆ ಭಾರತ ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಿದೆ’ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ಅಭಿಪ್ರಾಯಪಟ್ಟರು.

ನಗರದ ಬಿ.ವಿ.ಬಿ.ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ಯುವ ಚಿಂತನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಯುವ ಶಕ್ತಿ ಸದೃಢವಾಗಿದ್ದರೆ, ದೇಶವೂ ಸದೃಢವಾಗಿರುತ್ತದೆ. ಇಂದು ನಾವು ಯುವ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯ ಇದೆ’ ಎಂದು ತಿಳಿಸಿದರು.

‘ಪ್ರಸ್ತುತ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳು ಇವೆ. ವಿಶ್ವವಿದ್ಯಾಲಯಗಳಲ್ಲಿ ಹೆಣ್ಣುಮಕ್ಕಳೇ ಸಾಧನೆ ಮಾಡುತ್ತಿದ್ದಾರೆ. ಆದರೆ, ಯುವಕರು ದಾರಿ ತಪ್ಪುತ್ತಿದ್ದಾರೆ. ಇಂದು ಹೆಣ್ಣುಮಕ್ಕಳಿಗಿಂತಲೂ ಗಂಡು ಮಕ್ಕಳ ಮೇಲೆ ಹೆಚ್ಚು ನಿಗಾ ಇಡುವ ಅಗತ್ಯ ಇದೆ’ ಎಂದು ಹೇಳಿದರು.

‘ಶಿಕ್ಷಣ ಕೈಗಾರಿಕೆ ಅಲ್ಲ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಕೊಟ್ಟು ಕಳಿಸುವ ಕೇಂದ್ರಗಳಾಗಬಾರದು. ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸುವ ತಾಣಗಳಾಗಬೇಕು’ ಎಂದು ಗದಗಿನ ಪ್ರೊ. ಸಿದ್ದು ಯಾಪಲಪರವಿ ಹೇಳಿದರು.

‘ನಮ್ಮ ವ್ಯಕ್ತಿತ್ವವನ್ನು ಬೇರೆಯವರಿಂದ ರೂಪಿಸಲಾಗದು. ಅದನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಯಾರೋ ಒಬ್ಬರ ಒಂದು ತಾಸಿನ ಭಾಷಣದಿಂದ ಪರಿವರ್ತನೆ ತರಲು ಸಾಧ್ಯವಾಗದು. ಜ್ಞಾನ ವೃದ್ಧಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಪರಿವರ್ತಿಸಿಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

‘ಇಂದಿನ ಯುವಕರಿಗೆ ರವಿ ಚೆನ್ನಣ್ಣನವರ್‌ ಹಾಗೂ ‘ಡ್ರೋಣ್‌’ ಪ್ರತಾಪ ಅವರೇ ಆದರ್ಶವಾಗಿದ್ದಾರೆ. ಬಡತನದ ನಡುವೆಯೂ ಕಷ್ಟಪಟ್ಟು ಅಧ್ಯಯನ ಮಾಡಿ ಬದುಕಿನಲ್ಲಿ ಅಚ್ಚಳಿಯದಂತಹ ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.

‘ಹಣ ಗಳಿಸಿದವರು ಬುದ್ಧ, ಬಸವ ಹಾಗೂ ಅಬ್ದುಲ್‌ ಕಲಾಂ ಆಗಲು ಸಾಧ್ಯವಿಲ್ಲ. ವಿಜ್ಞಾನಿಗಳು ಹಾಗೂ ಅಧ್ಯಾತ್ಮ ಸಾಧಕರಿಂದಾಗಿ ದೇಶ ಪ್ರಗತಿಯತ್ತ ಸಾಗಿದೆ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳು ಮನಸ್ಸು ಕತ್ತರಿಸುವ ವೈದ್ಯರು ಹಾಗೂ ವಕೀಲರು ಆಗಬಾರದು. ಮೌಲ್ಯಯುತ ಶಿಕ್ಷಣ ಪಡೆದು ಸಮಾಜದ ಸೇವೆ ಮಾಡಬೇಕು’ ಎಂದರು.

‘ಕೇವಲ ಪದವಿ ಪಡೆಯುವುದೇ ಶಿಕ್ಷಣ ಅಲ್ಲ. ಸಂಸ್ಕೃತಿ ಹಾಗೂ ಸಂಸ್ಕಾರ ನಮ್ಮ ಶಿಕ್ಷಣದ ಭಾಗವಾಗಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ, ಯುವ ಬಸವ ಕೇಂದ್ರದ ಅಧ್ಯಕ್ಷ ಸುರೇಶ ಚೆನಶೆಟ್ಟಿ, ದತ್ತಗಿರಿ ಮಹಾರಾಜ್‌ ಕನ್ನಡ ಮಾಧ್ಯಮ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಜಯದೇವಿ ಯದಲಾಪೂರೆ, ವಂದೇ ಮಾತರಂ ಶಾಲೆಯ ಪ್ರಾಚಾರ್ಯೆ ರತ್ನಾ ಪಾಟೀಲ, ಸರಸ್ವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಬಿರಾದಾರ, ಉದ್ಯಮಿ ವಿಜಯಕುಮಾರ ಪಾಟೀಲ ಖಾಜಾಪೂರ, ಅನುದಾನಿತ ಶಾಲೆಗಳ ಸಂಘದ ಅಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ ಇದ್ದರು.

ಉಮೇಶ ಪಾಟೀಲ ಸ್ವಾಗತಿಸಿದರು. ವೈಜಿನಾಥ ಸಜ್ಜನಶೆಟ್ಟಿ, ಆನಂದ ಪಾಟೀಲ ವಂದಿಸಿದರು.

ಪ್ರತಿಕ್ರಿಯಿಸಿ (+)