ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪಿಆರ್‌ ಇಲ್ಲದೆ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ: ಖಂಡ್ರೆ ಖಂಡನೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕೆ
Last Updated 3 ಜನವರಿ 2021, 15:50 IST
ಅಕ್ಷರ ಗಾತ್ರ

ಬೀದರ್‌: ‘ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸದೇ ಬಸವಕಲ್ಯಾಣ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ತರಾತುರಿಯಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಲು ಹೊರಟಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

‘ಜನವರಿ 6ರಂದು ಹೊಸ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಆದರೆ ಈವರೆಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಡಿಪಿಆರ್‌ ಮಾಡಲು ಟೆಂಡರ್ ಕರೆಯಲಾಗಿದೆಯೇ? ಎಷ್ಟು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಯಾವ ಮಾದರಿಯಲ್ಲಿ ಮಂಟಪ ನಿರ್ಮಾಣವಾಗಲಿದೆ ಎನ್ನುವ ಮಾಹಿತಿಯೇ ಇಲ್ಲ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು, ಶಾಸಕರಾದ ರಾಜಶೇಖರ ಪಾಟೀಲ, ಬಿ.ನಾರಾಯಣರಾವ್ ಸೇರಿ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಿದ್ದೇವು. ಗೊ.ರು.ಚ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಯಿತು. 2018ರ ಆಯವ್ಯಯದಲ್ಲಿ ಘೋಷಣೆ ಮಾಡಿ ₹ 650 ಕೋಟಿ ವೆಚ್ಚದ ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರ ಬಂದು 18 ತಿಂಗಳಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಾಗೂ ಅನುಭವ ಮಂಟಪಕ್ಕೆ ಒಂದು ಪೈಸೆ ಬಿಡುಗಡೆಯಾಗಿಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ಸರ್ಕಾರ ₹600 ಕೋಟಿ ಯೋಜನೆ ರೂಪಿಸಿತ್ತು. ಆದರೆ, ಬಿಜೆಪಿ ಸರ್ಕಾರ ₹400 ಕೋಟಿಗೆ ಇಳಿಸಿದೆ. ಯಾವ ಸ್ಥಳದಲ್ಲಿ ಮಂಟಪ ನಿರ್ಮಿಸುತ್ತಾರೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಬಸವ ಭಕ್ತರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ’ ಎಂದು ಆರೋಪಿಸಿದರು.

‘ಡಿಪಿಆರ್‌ ಸಿದ್ಧಪಡಿಸಲು ಕನಿಷ್ಠ ಆರು ತಿಂಗಳಾದರೂ ಬೇಕಾಗಲಿದೆ. ಗೊರಾಟಾದ ಸ್ಮಾರಕದಂತೆ ಕೆಲಸ ನಡೆದರೆ ಪ್ರಯೋಜನ ಇಲ್ಲ. ಉತ್ತಮ ಕೆಲಸಕ್ಕೆ ಉಪ ಚುನಾವಣೆ ನಿಮಿತ್ತ ಆಗಬಾರದು’ ಎಂದರು.

ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ:
ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ನಿರ್ಲಕ್ಷ್ಯ ಮಾಡಿದೆ. ಕಲ್ಯಾಣ ಕರ್ನಾಟಕದ ಜನರ ಬಗ್ಗೆ
ಮಲತಾಯಿ ಧೋರಣೆ ಮುಂದುವರಿಸಲಾಗಿದೆ. ಮರು ನಾಮಕರಣವನ್ನು ಸ್ವಾಗತಿಸಿದ್ದೇವೆ. ಆದರೆ, ಮರುನಾಮಕರಣವೇ ಅಭಿವೃದ್ಧಿ ಅಲ್ಲ’ ಎಂದು ಟೀಕಿಸಿದರು.

‘ಕಲ್ಯಾಣ ಕರ್ನಾಟಕಕ್ಕೆ ₹1500 ಕೋಟಿ ಕೇಳಿದ್ದೇವೆ. ಆದರೆ, ಆರ್ಥಿಕ ಇಲಾಖೆ ₹952 ಕೋಟಿಗೆ ಸಹಮತ ವ್ಯಕ್ತಪಡಿಸಿದೆ. 10 ತಿಂಗಳಲ್ಲಿ ಒಂದು ಪೈಸೆಯ ಕಾಮಗಾರಿಗೆ ಅನುಮೋದನೆ ಕೊಟ್ಟಿಲ್ಲ. ಹಣ ಲ್ಯಾಪ್ಸ್‌ ಆಗುತ್ತಿದೆ’ ಎಂದರು.

‘ಮೂರು ಹಾಗೂ ಆರು ತಿಂಗಳಿಗೊಮ್ಮೆ ಅಭಿವೃದ್ಧಿ ಮಂಡಳಿಯ ಸಭೆ ನಡೆಯಬೇಕು. ಸರ್ಕಾರ ಬಂದು 18 ತಿಂಗಳಾದರೂ ಒಂದು ಸಭೆ ನಡೆಸಿಲ್ಲ. ಎಂಟು ಶಾಸಕರು, ತಲಾ ಒಬ್ಬ ಸಂಸದರು, ನಗರಸಭೆ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಐವರು ತಜ್ಞರು ಇರಬೇಕು. ಆದರೆ ಸಮಿತಿಯನ್ನೇ ರಚಿಸಿಲ್ಲ. ಅಭಿವೃದ್ಧಿಗೆ ಕೋವಿಡ್‌ ನೆಪ ಹೇಳುತ್ತಿದ್ದಾರೆ. ಬೆಂಗಳೂರಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲವೆ’ ಎಂದು ಪ್ರಶ್ನಿಸಿದರು.

‘ಶಾಸಕರಿಗೆ ಅನುದಾನ ಕೊಡದೆ ಹಿಂದಿನ ವರ್ಷದ ಕಾಮಗಾರಿಯನ್ನೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಪ್ರಸಕ್ತ ವರ್ಷದ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತಿಲ್ಲ. ಕಲ್ಯಾಣ ಕರ್ನಾಟಕದ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ’ ಎಂದು ಆರೋಪಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಿಲ್ಲ. ಮೇಹಕರ ಯೋಜನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿಲ್ಲ. ಜಿಲ್ಲೆಯ ₹325 ಕೋಟಿ ವೆಚ್ಚದ 33 ಕೆರೆ ತುಂಬುವ ಯೋಜನೆ ಆರಂಭವಾಗಿಲ್ಲ. ಬಸವಕಲ್ಯಾಣ ತಾಲ್ಲೂಕಿನಿಂದ ಎರಡು ಟಿಎಂಸಿ ನೀರು ಬಳಕೆ ಮಾಡುವ ಯೋಜನೆಗೂ ಒಪ್ಪಿಗೆ ಕೊಟ್ಟಿಲ್ಲ’ ಎಂದು ಆರೋಪ ಮಾಡಿದರು.

‘ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು. ಚುಳಕಿ ನಾಲಾದ ಮುಖ್ಯ ಕಾಲುವೆ ಹಾಳಾಗಿದೆ. ದುರಸ್ತಿಗೆ ಅನುಮೋದನೆ ಕೊಡಬೇಕು. ನೀರಾವರಿ ಯೋಜನೆಗಳನ್ನು ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಸರ್ಕಾರದ ಖಜಾನೆ ಖಾಲಿ

ಬೀದರ್ ಜಿಲ್ಲೆಯಲ್ಲಿ ಮೂರು ಬಾರಿ ಪ್ರವಾಹ ಬಂದರೂ ಸರ್ಕಾರ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಮನೆ ಕಳೆದು ಕೊಂಡವರು ಎಲ್ಲಿ ಇರಬೇಕು. ಖಜಾನೆ ಖಾಲಿ ಆಗಿದೆಯೇ, ಆರ್ಥಿಕ ದಿವಾಳಿ ಆಗಿದೆಯೇ’ ಎಂದು ಪ್ರಶ್ನಿಸಿದರು.

‘ಒಂದೂವರೆ ವರ್ಷದಿಂದ ಒಂದು ಕಾಮಗಾರಿಯೂ ಆರಂಭವಾಗಿಲ್ಲ. ಮುಖ್ಯಮಂತ್ರಿ ಅವರು ಬೀದರ್ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದರು.

ಹುಮಾಬಾದ್‌ ಶಾಸಕ ರಾಜಶೇಖರ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT