ಖಟಕಚಿಂಚೋಳಿ: ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳವಾಗಿರುವ ಚಳಕಾಪುರದಲ್ಲಿ ಗುರುವಾರ (ಮಾ.30) ಸಂಜೆ 5ಕ್ಕೆ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸದ್ಗುರು ಸಿದ್ಧಾರೂಢರ 187ನೇ ಜಯಂತಿ ಪ್ರಯುಕ್ತ ರಥೋತ್ಸವ ನಡೆಯಲಿದೆ.
ಪಾವನ ಭೂಮಿ ಚಳಕಾಪುರ ಸಿದ್ಧಾರೂಢರ ಜನ್ಮಸ್ಥಳವೂ ಆಗಿದೆ.
ಅಂದು ಬೆಳಿಗ್ಗೆಯಿಂದಲೇ ಮಠದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ನಡೆಯುವುದು. ಬೆಳಿಗ್ಗೆ 10 ಗಂಟೆಯಿಂದ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಸಿದ್ಧಾರೂಢರ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಗುವುದು. ಅಡ್ಡ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮಠಕ್ಕೆ ತಲುಪುತ್ತದೆ.
ಮಧ್ಯಾಹ್ನ 12 ಗಂಟೆಗೆ ಸಿದ್ಧಾರೂಢ ಅಜ್ಜನ ತೊಟ್ಟಿಲು ಕಾರ್ಯಕ್ರಮ, ಸಂಜೆ ರಥೋತ್ಸವ ನಡೆಯುವುದು ಎಂದು ಮಠದ ಭಕ್ತರಾದ ಕಿಶೋರ ಕುಲಕರ್ಣಿ ತಿಳಿಸಿದ್ದಾರೆ.
ಅದ್ದೂರಿ ರಥೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಈಗಾಗಲೇ ಮಾ.24ರಿಂದ ಪ್ರತಿದಿನ ಬೆಳಿಗ್ಗೆ, ಸಂಜೆ ಪ್ರವಚನ ಕಾರ್ಯಕ್ರಮ ಜರುಗಿದೆ. ಅಲ್ಲದೇ ರಾಜ್ಯದ ಹಾಗೂ ಹೊರ ರಾಜ್ಯಗಳ ಸಂಗೀತಗಾರರಿಂದ ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಭಕ್ತರ ಮನ ರಂಜಿಸಿವೆ.
ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಅನೇಕ ಭಕ್ತರು ವಾಹನಗಳ ಮೂಲಕ, ಇನ್ನೂ ಕೆಲವರು ಪಾದಯಾತ್ರೆಯ ಮೂಲಕ ಗ್ರಾಮಕ್ಕೆ ಬಂದಿದ್ದಾರೆ. ನಾಲ್ಕೈದು ದಿನಗಳ ಮೊದಲೇ ಮಠದ ಆವರಣದ ಸುತ್ತಲೂ ಹಬ್ಬದ ಸಂಭ್ರಮ ಮನೆ ಮಾಡಿದೆ.
‘ನಿತ್ಯ ದಾಸೋಹಕ್ಕಾಗಿ ಭಕ್ತ ಸಮೂಹ ಅಪಾರ ಪ್ರಮಾಣದಲ್ಲಿ ಆಹಾರ ಧಾನ್ಯ ಮುಂತಾದ ವಸ್ತುಗಳನ್ನು ನೀಡುತ್ತಿದ್ದಾರೆ. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ’ ಎಂದು ಶಂಕರಾನಂದ ಸ್ವಾಮೀಜಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.