ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆ: ರಾಜಕೀಯದಲ್ಲಿ ಸಂಚಲನ

2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ ಶುರು
Last Updated 19 ಡಿಸೆಂಬರ್ 2022, 23:30 IST
ಅಕ್ಷರ ಗಾತ್ರ

ಬೀದರ್: ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ 2023ರ ರಾಜ್ಯ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯು ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿ ಬಿಚ್ಚಿಕೊಂಡಿದೆ.

ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

ಬೀದರ್ ದಕ್ಷಿಣದಲ್ಲಿ ನಿರೀಕ್ಷೆಯಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ, ಹಾಲಿ ಶಾಸಕ ಬಂಡೆಪ್ಪ ಕಾಶೆಂಪುರ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಬಂಡೆಪ್ಪ ಅವರು ವಿಧಾನಸಭೆಗೆ ಐದು ಬಾರಿ ಸ್ಪರ್ಧಿಸಿದ್ದಾರೆ. 1999 ಹಾಗೂ 2013ರ ಚುನಾವಣೆಯಲ್ಲಿ ಸೋತರೆ, 2004, 2008 ಹಾಗೂ 2118ರ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ.

ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು. ಬೀದರ್‌ ದಕ್ಷಿಣ ಕ್ಷೇತ್ರದಿಂದ ಕೆಲ ಮುಖಂಡರು ಟಿಕೆಟ್‌ ಬಯಸಿ ಕುಮಾರಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರೂ ಬಂಡೆಪ್ಪ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣಸಿಂಗ್ ಅವರು ಬೀದರ್‌ ದಕ್ಷಿಣ ಕ್ಷೇತ್ರದ ಸಾರ್ವಜನಿಕ ಸಭೆಯೊಂದರಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಅಭ್ಯರ್ಥಿಯಾಗಲಿದ್ದಾರೆ ಎಂದು ಪ್ರಕಟಿಸಿದ್ದರು. ಹೀಗಾಗಿ ಬೆಲ್ದಾಳೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಲವು ಮುಖಂಡರು ಪಕ್ಷದ ಟಿಕೆಟ್‌ ತರಲು ಪ್ರಯತ್ನ ನಡೆಸಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಮೇಶ ಪಾಟೀಲಗೆ ಒಲಿದ ಭಾಗ್ಯ:

ಬೀದರ್‌ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ರಮೇಶ ಪಾಟೀಲ ಸೋಲಪುರ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

2000–2005ರ ವರೆಗೆ ಪಾಟೀಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. 2014ರಿಂದ 2017ರ ವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿದ್ದರು ಚಿಟ್ಟಾ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ರಮೇಶ ಅವರ ಪತ್ನಿ ವಿಜಯಲಕ್ಷ್ಮಿ ಬೀದರ್‌ ನಗರಸಭೆ ಅಧ್ಯಕ್ಷರಾಗಿದ್ದರು. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಆರಂಭಿಸಿ, 2017ರಿಂದ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಪಕ್ಷ ನಿಷ್ಠೆಯಿಂದಾಗಿಯೇ ಅವರಿಗೆ ಟಿಕೆಟ್ ದೊರಕಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಎಸ್‌ಪಿ ರಾಜ್ಯಮಟ್ಟದಲ್ಲಿ ಒಪ್ಪಂದ ಮಾಡಿಕೊಂಡಿದ್ದರಿಂದ ಬೀದರ್‌ ಕ್ಷೇತ್ರದಿಂದ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಬಿಎಸ್‌ಪಿ ಅಭ್ಯರ್ಥಿ ಮಾರಸಂದ್ರ ಮುನಿಯಪ್ಪ ಅವರಿಗೆ ಬೆಂಬಲ ಕೊಟ್ಟಿತ್ತು. ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿ ರಮೇಶ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

‘ಪಕ್ಷ ನಿಷ್ಠೆಗೆ ಮನ್ನಣೆ ನೀಡಿ ವರಿಷ್ಠರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಬೀದರ್ ಜನತೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ಕೊಟ್ಟು ನೋಡಿದ್ದಾರೆ. ಕ್ಷೇತ್ರದ ಜನ ಹೊಸ ಮುಖ ಬಯಸಿದ್ದಾರೆ. ಚುನಾವಣೆಯಲ್ಲಿ ಪಕ್ಷದ ನಿರೀಕ್ಷೆ ಸಹ ಹುಸಿಯಾಗದು’ ಎಂದು ರಮೇಶ ಪಾಟೀಲ ಹೇಳಿದರು.

ಸಿ.ಎಂ. ಇಬ್ರಾಹಿಂ ಪುತ್ರ ಹುಮನಾಬಾದ್ ಅಭ್ಯರ್ಥಿ

ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಪುತ್ರ

ಸಿ.ಎಂ. ಫಯಾಜ್ ಅವರ ಹೆಸರು ಘೋಷಿಸಲಾಗಿದೆ.

38 ವರ್ಷದ ಸಿ.ಎಂ.‌ಫಯಾಜ್ ಬೆಂಗಳೂರಿನ ಎಚ್.ಕೆ.ಬಿ.ಕೆ. ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕು ತಿಂಗಳಿಂದ ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಕ್ಷೇತ್ರದ ಪ್ರಮುಖ ಮಠ, ಮಂದಿರಗಳು ಸೇರಿದಂತೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ಅಧಿಕ ಇವೆ. ಮೆರಾಜೋದ್ದಿನ್ ಪಟೇಲ್ ಅವರ ಕಾಲಾವಧಿಯಲ್ಲಿ ಹುಮನಾಬಾದ್ ವಿಧಾನಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿತ್ತು. ಈ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಅವಕಾಶವಿದೆ ಎನ್ನುವ ವಿಶ್ವಾಸದಿಂದ ಪಕ್ಷ ಮುಸ್ಲಿಂ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.

‘ಪ್ರಜಾಪ್ರಭುತ್ವದಲ್ಲಿ ಎಲ್ಲ ಸಮುದಾಯದ ಮತಗಳು ಬೇಕು. ಒಂದೇ ಸಮುದಾಯಕ್ಕೆ ಸೀಮಿತವಾದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದು. ಹುಮನಾಬಾದ್ ಕ್ಷೇತ್ರದಲ್ಲಿ ಮುಸ್ಲಿಂ, ಹಿಂದುಳಿದ ವರ್ಗಗಳು, ಪರಿಶಿಷ್ಟರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಹಜವಾಗಿಯೇ ಮತದಾರರು ಹೊಸ ಮುಖಕ್ಕೆ ಅವಕಾಶ ಕಲ್ಪಿಸಲಿದ್ದಾರೆ’ ಎಂದು ಜೆಡಿಎಸ್‌ ಅಭ್ಯರ್ಥಿ ಸಿ.ಎಂ.ಫಯಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆಯ ಅಭ್ಯರ್ಥಿಯೇ ಮುಂದುವರಿಕೆ

ಮಾಣಿಕ ಭೂರೆ

ಬಸವಕಲ್ಯಾಣ: 2023ರ ವಿಧಾನಸಭೆ ಚುನಾವಣೆಗೆ ಹುಲಸೂರ- ಬಸವಕಲ್ಯಾಣ ತಾಲ್ಲೂಕುಗಳನ್ನು ಒಳಗೊಂಡಿರುವ ಬಡವಕಲ್ಯಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ 44 ವರ್ಷದ ಸೈಯದ್ಯಶ್ರಬ್ ಅಲಿ ಖಾದ್ರಿ ಅವರ ಹೆಸರು ಘೋಷಿಸಲಾಗಿದೆ.

ಯಶ್ರಬ್‌ಅಲಿ ಅವರು 2021ರ ಉಪ ಚುನಾವಣೆಯಲ್ಲಿ ಇದೇ ಪಕ್ಷದಿಂದ ಸ್ಪರ್ಧಿಸಿ 11,390 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಚುನಾವಣೆಯಲ್ಲಿ ಸೋತರೂ ಸುಮ್ಮನಿರದೆ 18 ತಿಂಗಳಿಂದ ಜನಸೇವೆ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರಿಂದ ಬರುವ ಚುನಾವಣೆಗೆ ಇವರಿಗೇ ಟಿಕೆಟ್ ಘೋಷಿಸಲಾಗಿದೆ.

ಬಸವಕಲ್ಯಾಣದಲ್ಲಿ ಮುಸ್ಲಿಮರು ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮತಗಳು ನಿರ್ಣಾಯಕವಾಗಿವೆ. ಉಪ ಚುನಾವಣೆಯಲ್ಲೇ ಜನ ಇದನ್ನು ನೋಡಿದ್ದಾರೆ. ಮುಸ್ಲಿಂ ಸಮುದಾಯದ ಮತಗಳು ಇಬ್ಭಾಗವಾದರೆ ಕಾಂಗ್ರೆಸ್‌ಗೆ ಹಾನಿಯಾಗುವ ಸಾಧ್ಯತೆಗಳು ಇವೆ. ಹಾಗಂತ ಬಿಜೆಪಿಯ ಹಾದಿಯೂ ಸುಗಮವಿಲ್ಲ. ಬಸವಕಲ್ಯಾಣದಲ್ಲಿ ಬಿಜೆಪಿಯಲ್ಲೂ ಮೂರು ಬಣಗಳಿವೆ ಹೀಗಾಗಿ ಕಾಂಗ್ರೆಸ್‌ ಎಚ್ಚರಿಕೆ ಹೆಜ್ಜೆ ಇಡಲು ಆಲೋಚನೆ ನಡೆಸಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT