ಶನಿವಾರ, ಜನವರಿ 18, 2020
25 °C

ಖೂಬಾ ಹೇಳಿಕೆ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ಜಾಬಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನವನ್ನು ಬೆಂಬಲಿಸಿ ಸಂಸದ ಭಗವಂತ ಖೂಬಾ ನೀಡಿರುವ ಹೇಳಿಕೆಯು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಟೀಕಿಸಿದ್ದಾರೆ.

ದೇಶದ ಸಂವಿಧಾನದಲ್ಲಿ ಎಲ್ಲ ಜಾತಿ, ಧರ್ಮ, ಭಾಷೆ ಮತ್ತು ಎಲ್ಲ ಪ್ರಾಂತಗಳ ನಾಗರಿಕರಿಗೆ ಸ್ವಾತಂತ್ರ್ಯ, ಸಮಾನತೆ ಜತೆಗೆ ಸಾಮಾಜಿಕ ನ್ಯಾಯದ ಹಕ್ಕನ್ನೂ ಕೊಡಲಾಗಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರವು ಧರ್ಮದ ಆಧಾರದ ಮೇಲೆ ಕಾಯ್ದೆಗಳನ್ನು ಮಾಡಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಜಾತಿ, ಜಾತಿಗಳಲ್ಲಿ ಮತ್ತು ಧರ್ಮ ಧರ್ಮಗಳಲ್ಲಿ ಸಂಘರ್ಷವನ್ನುಂಟು ಮಾಡುತ್ತಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಪಾಕಿಸ್ತಾನ್, ಅಪಘಾನಿಸ್ತಾನ, ಬಾಂಗ್ಲಾದೇಶ ಹಾಗೂ ನೆರೆ ದೇಶಗಳ ಎಲ್ಲ ಧರ್ಮದ ದಮನಿತ ನಿರಾಶ್ರಿತರಿಗೆ ಆಶ್ರಯ ನೀಡಲು ವಿರೋಧ ಮಾಡಿಲ್ಲ. ಆದರೆ, ಕೇಂದ್ರ ಸರ್ಕಾರ ಮುಸ್ಲಿಮ್ ಸಮುದಾಯವನ್ನು ದೂರವಿಟ್ಟು ಈ ಕಾಯ್ದೆಯನ್ನು ತರಲು ಹೊರಟಿರುವುದು ಸಂವಿಧಾನ ಬದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ನೆರೆಯ ಶ್ರೀಲಂಕಾ ಧರ್ಮಾಧಾರಿತ ರಾಷ್ಟ್ರವಾಗಿದೆ. ಅಲ್ಲಿಯೂ ತಮಿಳು ಹಿಂದೂಗಳು ಗಣಿನೀಯ ಪ್ರಮಾಣದಲ್ಲಿದ್ದಾರೆ. ಶ್ರೀಲಂಕಾದ ಅಪಾರ ತಮಿಳು ಹಿಂದೂ ನಿರಾಶ್ರಿತರನ್ನು ಇದರಿಂದ ಹೊರಗಡೆ ಇಟ್ಟಿದ್ದು ಏಕೆ, ಚೀನಾದ ಶೋಷಿತ ಟಿಬೇಟಿಯನ್ನರನ್ನು ಮತ್ತು ಹಿಂದೂಗಳನ್ನು ಈ ಕಾಯ್ದೆಯಲ್ಲಿ ಪರಿಗಣನೆಗೆ ಏಕೆ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಖೂಬಾ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ಈ ಯಾವ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡದೇ ತನ್ನ ಸ್ವಂತಿಕೆಯನ್ನು ಬಿಟ್ಟು ಕೇಂದ್ರದ ತಮ್ಮ ನಾಯಕರು ಮಾಡಿದ ಆದೇಶವನ್ನು ಯಥಾವತ್ತಾಗಿ ಗಿಳಿ ಪಾಠದಂತೆ ಒಪ್ಪಿಸುವ ಮೂಲಕ ಸಂವಿಧಾನ ಮತ್ತು ಪ್ರಜ್ಞಾವಂತ ಮತ್ತು ಸಮ ಸಮಾಜ ನಿರ್ಮಾಣದ ಎಲ್ಲ ಮಹಾಪುರುಷರ ಆದರ್ಶಗಳನ್ನು ವಿರೋಧಿಸುವ ಕೆಲಸ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಖೂಬಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನವನ್ನು ದೇಶದ 130 ಕೋಟಿ ಜನರಿಗೆ ಜಾರಿಗೆ ತರಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಇದರಿಂದ ಇಡೀ ದೇಶ ಹೊತ್ತಿ ಉರಿಯುತ್ತಿದೆ. ಸರ್ಕಾರ ದೇಶದಲ್ಲಿ ಈ ರೀತಿಯ ಅಘೋಷಿತವಾದ ತುರ್ತು ಪರಿಸ್ಥಿತಿಯಂತಹ ವಾತಾವರಣವನ್ನು ನಿರ್ಮಾಣ ಮಾಡಿ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

ಈಗಲಾದರೂ ಕೇಂದ್ರ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ದೇಶದ ಜನರಿಗೆ ಕ್ಷಮೆ ಕೋರಿ, ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನ ಹಿಂಪಡೆದು, ದೇಶದ ಏಕತೆ ಮತ್ತು ಐಕ್ಯತೆಯನ್ನು ಎತ್ತಿ ಹಿಡಿಯುವುದನ್ನು ಬಿಟ್ಟು, ವಿನಾಕಾರಣ ಸುಳ್ಳಿನ ಕಂತೆ ಮತ್ತು ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು