ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಾಭಿಮಾನ ಮೂಡಿಸಿದ ಬಾವುಟದ ಮೆರವಣಿಗೆ

ಜೆಸಿಬಿಯಿಂದ ತಾಯಿ ಭುವನೇಶ್ವರಿ ಭಾವಚಿತ್ರದ ಮೇಲೆ ಪುಷ್ಪವೃಷ್ಟಿ
Last Updated 30 ನವೆಂಬರ್ 2022, 13:27 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣದಲ್ಲಿ ಬುಧವಾರ 67ನೇ ಕನ್ನಡ ರಾಜ್ಯೋತ್ಸವ, ಗಡಿ ಕನ್ನಡೋತ್ಸವದ ಪ್ರಯುಕ್ತ ಜೈ ಭಾರತ ಮಾತಾ ಸೇವಾ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ ನಡೆದ ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಹಾಗೂ ಅಲಂಕೃತ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯು ಸಾರ್ವಜನಿಕರಲ್ಲಿ ಕನ್ನಡಾಭಿಮಾನ ಮೂಡಿಸಿತು.

ಮೆರವಣಿಗೆಯುದ್ದಕ್ಕೂ ಕನ್ನಡ ಪರ ಹಾಗೂ ತಾಯಿ ಭುವನೇಶ್ವರಿಗೆ ಜೈಕಾರದ ಘೋಷಣೆಗಳು ಮೊಳಗಿದವು. ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಪುರಭವನದವರೆಗೆ ನಡೆಯಿತು.

ವೀರಭದ್ರ ಕುಣಿತ, ಡೊಳ್ಳು ಕುಣಿತ, ತಮಟೆ ವಾದನ, ಹಗಲು ವೇಷ, ವೀರಗಾಸೆ ಮೊದಲಾದ ಕಲಾ ತಂಡಗಳ ಪ್ರದರ್ಶನ ಸಾಂಸ್ಕೃತಿಕ ವೈಭವವನ್ನೇ ಸೃಷ್ಟಿಸಿತು. ಮೆರವಣಿಗೆ ಮಾರ್ಗದಲ್ಲಿನ ವೃತ್ತಗಳಲ್ಲಿರುವ ಮಹಾ ಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ಅಂಬೇಡ್ಕರ್ ವೃತ್ತದಲ್ಲಿ ನಾಲ್ಕು ಜೆಸಿಬಿಗಳಿಂದ ಕನ್ನಡ ಬಾವುಟ, ತಾಯಿ ಭುವನೇಶ್ವರಿ ಹಾಗೂ ಚಿತ್ರನಟ ಪುನೀತ್ ರಾಜಕುಮಾರ ಭಾವಚಿತ್ರದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಲಾಯಿತು.

ರಸ್ತೆ ಬದಿಯಲ್ಲಿನ ಕಂಬಗಳಿಗೆ ಕನ್ನಡ ಬಾವುಟಗಳನ್ನು ಕಟ್ಟಲಾಗಿತ್ತು. ಹೀಗಾಗಿ ಪಟ್ಟಣದಲ್ಲಿ ಕನ್ನಡಮಯ ವಾತಾವರಣ ನಿರ್ಮಾಣಗೊಂಡಿತ್ತು.

ಮೆರವಣಿಗೆಗೆ ಚಾಲನೆ: ತಹಶೀಲ್ದಾರ್ ಕೀರ್ತಿ ಚಾಲಕ್ ಮೆರವಣಿಗೆಗೆ ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷ ಅನಿಲ್ ಸುಂಟೆ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಜೈ ಭಾರತ ಮಾತಾ ಸೇವಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಮಾಮಡಿ, ನಗರ ವೃತ್ತ ಸಿಪಿಐ ಗುರಣ್ಣ ಎಸ್.ಹೆಬ್ಬಾಳೆ, ಗ್ರಾಮೀಣ ಸಿಪಿಐ ವೀರಣ್ಣ ದೊಡ್ಡಮನಿ, ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆ ಹಾಗೂ ಶ್ರೀಮಂತ ಸಪಾಟೆ ಇದ್ದರು.

ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT