ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ

ಮನೆಗಳಿಗೆ ನುಗ್ಗಿರುವ ಕಾರಂಜಾ ಜಲಾಶಯದ ಹಿನ್ನೀರು
Last Updated 24 ಫೆಬ್ರುವರಿ 2021, 14:14 IST
ಅಕ್ಷರ ಗಾತ್ರ

ಬೀದರ್: ಕಾರಂಜಾ ಜಲಾಶಯದ ಹಿನ್ನೀರಿನಿಂದಾಗಿ ಹಲವು ಸಮಸ್ಯೆ ಎದುರಿಸುತ್ತಿರುವ ಹುಮನಾಬಾದ್ ತಾಲ್ಲೂಕಿನ ಡಾಕುಳಗಿಯ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಶಾಸಕ ರಾಜಶೇಖರ ಪಾಟೀಲ ಅವರು ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀವ್ರ ಒತ್ತಡ ಹಾಕಿದ್ದರಿಂದ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಬುಧವಾರ ಕಾರಂಜಾ ಯೋಜನೆಯ ಅಧಿಕಾರಿಗಳ ಸಭೆ ನಡೆಸಿದರು.

ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶವನ್ನು ಡ್ರೋನ್‌ ಮೂಲಕ ಸರ್ವೆ ನಡೆಸಿ ಸಿದ್ಧಪಡಿಸಿದ ನೀಲನಕ್ಷೆಯನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ವೀಕ್ಷಿಸಿದರು. ಮೂಲ ಸಮೀಕ್ಷೆಯ ಸಂದರ್ಭದಲ್ಲಿ ಕೆಲ ಪ್ರದೇಶಗಳನ್ನು ಬಿಡಲಾಗಿದೆ ಎನ್ನುವ ದೂರುಗಳು ಬಂದಿವೆ. ಹೀಗಾಗಿ ಅಚ್ಚುಕಟ್ಟಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.

ಕಾರಂಜಾ ಹಿನ್ನೀರು ಕೃಷಿ ಜಮೀನು ಹಾಗೂ ಗ್ರಾಮದೊಳಗೆ ನುಗ್ಗಿದ್ದರೆ ಭೂಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

‘ಜಲಾಶಯದ ಹಿನ್ನೀರಲ್ಲಿ ಜಮೀನು ಮುಳುಗಡೆಯಾಗಿರುವ ಪ್ರದೇಶವನ್ನು ಡ್ರೋನ್‌ ಕ್ಯಾಮೆರಾ ಮೂಲಕ ಪರಿಶೀಲಿಸಲಾಗಿದೆ. ಈಗಾಗಲೇ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಕೃಷಿ ಜಮೀನುಗಳಲ್ಲಿ ನೀರು ನಿಂತಿದ್ದರೆ
ಭೂಸ್ವಾಧೀನಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕಾರಂಜಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ ಫಬ್ಬಾ ತಿಳಿಸಿದರು.

‘ನಾಲ್ಕು ವರ್ಷಕ್ಕೊಮ್ಮೆ ಕಾರಂಜಾ ಜಲಾಶಯ ತುಂಬುತ್ತಿರುವ ಕಾರಣ ಮನೆಗಳಿಗೆ ನೀರು ನುಗ್ಗುತ್ತಿದೆ. ಮಳೆ ಬಂದಾಗ ಮಾತ್ರ ಪರಿಶೀಲನೆ ನಡೆಸುವುದು ಸರಿಯಲ್ಲ. ಅವರಿಗೆ ಶಾಶ್ವತ ಪರಿಹಾರ ಒದಗಿಸುವ ದಿಸೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಜಲಾಶಯದ ಹಿನ್ನೀರಲ್ಲಿ 90 ಮನೆಗಳು ಮುಳುಗಡೆಯಾಗಿವೆ. ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಮೂರು ಎಕರೆ ಜಾಗ ಗುರುತಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಎರಡು ಎಕರೆ ಪ್ರದೇಶವನ್ನು ಗುರುತಿಸಿ ಅವರಿಗೆ ಮನೆಗಳನ್ನು ಕಟ್ಟಿಕೊಡಬೇಕು’ ಎಂದು ರಾಜಶೇಖರ ಪಾಟೀಲ ಒತ್ತಾಯಿಸಿದ್ದರು.

‘ಡಾಕುಳಗಿ ಸಮೀಪ ಐದು ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗುವುದು’ ಎಂದು ಸಚಿವ ಪ್ರಭು ಚವಾಣ್‌ ಭರವಸೆ ನೀಡಿದ್ದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಹೀರಾ ನಸೀಮ್, ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ಕಾರಂಜಾ ಯೋಜನೆಯ ಎಂಜಿನಿಯರ್ ಶಿವಕುಮಾರ ಸ್ವಾಮಿ, ಸಹಾಯಕ ಎಂಜಿನಿಯರ್ ಭರತಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT