ಮಂಗಳವಾರ, ಮಾರ್ಚ್ 21, 2023
20 °C

ಜನನ, ಮರಣ ದಾಖಲೆ ಮಹತ್ವ ಅರಿಯಿರಿ: ಜಿಲ್ಲಾಧಿಕಾರಿ ರಾಮಚಂದ್ರನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸರ್ಕಾರಿ ನೌಕರರು ಜನನ, ಮರಣ ದಾಖಲೆ ಮಹತ್ವ ಅರಿತುಕೊಳ್ಳಬೇಕು. ಸಾರ್ವಜನಿಕರಿಗೂ ತಿಳಿವಳಿಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಹೇಳಿದರು.

ಇಲ್ಲಿಯ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಇತರರಿಗೆ ಆಯೋಜಿಸಿದ್ದ ಜನನ-ಮರಣ ನೋಂದಣಿ ಕಾಯ್ದೆ 1969ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಜನನ-ಮರಣ ನೋಂದಣಿ 1969 ಕಾಯ್ದೆ ಜಾರಿಯಾಗಿ 51 ವರ್ಷಗಳಾಗಿವೆ. ಇಂತಹ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಕಾಯ್ದೆ ಮಾಹಿತಿಯು ಪ್ರತಿ ಮನೆ ಬಾಗಿಲಿಗೆ ತಲುಪಬೇಕು. ಜನನ, ಮರಣ ನೋಂದಣಿ ಸಕಾಲಕ್ಕೆ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದರು.

‘ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ ಸಕಾಲದಲ್ಲಿ ದೊರಕುವಂತಾಗಬೇಕು ಎನ್ನುವುದು ನ್ಯಾಯಾಲಯ ಹಾಗೂ ಸರ್ಕಾರದ ಉದ್ದೇಶವಾಗಿದೆ. ನೌಕರರು ಇಂತಹ ಕಾನೂನುಗಳ ಬಗ್ಗೆ ತಿಳಿದುಕೊಂಡು ಜನರಿಗೆ ಸಕಾಲಕ್ಕೆ ಸೇವೆ ಕೊಡಲು ಕಾರ್ಯ ಪ್ರವೃತ್ತರಾಗಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ‘ಒಬ್ಬ ವ್ಯಕ್ತಿಯ ಮರಣದ ನಂತರ ಜೀವ ವಿಮೆ, ವಾರಸಾ, ಆಸ್ತಿ ಹಕ್ಕು, ಮುಟೇಶನ್‌ನಂತಹ ಸಾಕಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ತಮ್ಮ ಪ್ರದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಸರಿಯಾಗಿ ನಡೆಯುತ್ತಿದೆಯೇ ಎನ್ನುವುದನ್ನು ಪಿಡಿಒ ಮತ್ತು ಗ್ರಾಮ ಲೆಕ್ಕಿಗರು ಖಾತರಿ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

'ಸರ್ಕಾರದ ನೀತಿ-ನಿರ್ಧಾರಗಳು ಜನನ ಮತ್ತು ಮರಣದ ನೋಂದಣಿಯ ಆಧಾರದ ಮೇಲೆ ಅವಲಂಬಿತವಾಗಿರುತ್ತವೆ. ಜನನ-ಮರಣ ನೋಂದಣಿಯಿಂದ ಲಿಂಗಾನುಪಾತ ಹಾಗೂ ಭ್ರೂಣ ಹತ್ಯೆಯಂತಹ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ’ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಯದಲಾಪೂರೆ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಿಗರು ಜನನ-ಮರಣ ನೋಂದಣಾಧಿಕಾರಿ, ಪಿಡಿಒ ವಿತರಣಾಧಿಕಾರಿ ಹಾಗೂ ವೈದ್ಯಾಧಿಕಾರಿಗಳು ಉಪ ನೋಂದಣಾ ಅಧಿಕಾರಿಯಾಗಿರುತ್ತಾರೆ’ ಎಂದು ಮಾಹಿತಿ ನೀಡಿದರು.

‘ದೇಶದ ಜನಸಂಖ್ಯೆಯನ್ನು ಅಂದಾಜಿಸಲು, ಲಿಂಗಾನುಪಾತ, ವಿವಾಹವಾದ ವಯಸ್ಸು ಹಾಗೂ ತಾಯಿಯ ಗರ್ಭಧಾರಣೆ ಶಕ್ತಿ, ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ನಡೆಸಲು, ಜಿಲ್ಲಾವಾರು ಮರಣ ಪ್ರಮಾಣ ತಿಳಿಯಲು, ವೈದ್ಯಕೀಯ ಸಂಶೋಧನೆಯಂತಹ ಅನೇಕ ಕಾರಣಗಳಿಗೆ ಜನನ ಮತ್ತು ಮರಣ ನೋಂದಣಿ ಅವಶ್ಯವಾಗಿದೆ’ ಎಂದು ತಿಳಿಸಿದರು.

‘ಜನನ ಹಾಗೂ ಮರಣದ ನೋಂದಣಿಯನ್ನು 21 ದಿನಗಳ ಒಳಗೆ ಮಾಡಿ ಉಚಿತ ಪ್ರಮಾಣ ಪತ್ರ ಪಡೆಯಲು ಅವಕಾಶ ಇರುತ್ತದೆ. 21 ರಿಂದ 30 ದಿನಗಳೊಳಗೆ ವಿಳಂಬ ನೋಂದಣಿ ಮಾಡಲು ಅವಕಾಶ ಇದೆ. ಒಂದು ವರ್ಷದ ಬಳಿಕ ಸಂಬಂಧಪಟ್ಟ ತಹಶೀಲ್ದಾರ್ ಹತ್ತಿರ ದಾಖಲೆ ಇರುತ್ತದೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ.ಮಾತನಾಡಿ, ‘ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಅವರ ನಿರ್ದೇಶನದಂತೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮ ಮಟ್ಟದಲ್ಲಿ ಜನರಿಗೆ ಕಾಯ್ದೆಯ ತಿಳಿವಳಿಕೆ ನೀಡಬೇಕು’ ಎಂದು ಹೇಳಿದರು.

ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈಶ್ವರ ಮುಸಲ್ಮಾರಿ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್., ರಮೇಶಕುಮಾರ ಪೆದ್ದೆ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಶರಣಯ್ಯ ಮಠಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.