ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ₹10 ಕೋಟಿ ಹಣ ಪಡೆದು ಅಭ್ಯರ್ಥಿ ನಿಲ್ಲಿಸಿದ ಎಚ್‌ಡಿಕೆ: ಜಮೀರ್‌ ಆರೋಪ

ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಆರೋಪ
Last Updated 30 ಮಾರ್ಚ್ 2021, 15:11 IST
ಅಕ್ಷರ ಗಾತ್ರ

ಬೀದರ್: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯಿಂದ ₹ 10 ಕೋಟಿ ಪಡೆದು ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ’ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಗಂಭೀರ ಆರೋಪ ಮಾಡಿದರು.

‘₹ 10 ಕೋಟಿಯಲ್ಲಿ ಅಭ್ಯರ್ಥಿಗೆ ₹ 2 ಕೋಟಿ ಕೊಟ್ಟಿದ್ದಾರೆ’ ಎಂದು ವಿಧಾನಸಭೆ ಉಪ ಚುನಾವಣೆ ಪ್ರಯುಕ್ತ ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಆಪಾದಿಸಿದರು.

‘ನಮ್ಮ ಬಳಿ ಹಣ ಇಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಹೇಳಿದ್ದರು. ಈಗ ಅವರ ಬಳಿ ದುಡ್ಡು ಎಲ್ಲಿಂದ ಬಂದಿದೆ. ಕುಮಾರಸ್ವಾಮಿ ಬಿಜೆಪಿ ಏಜೆಂಟ್ ಆಗಿದ್ದಾರೆ. ಅವರಿಗೆ ಧನದ ಮೋಹ ಇದೆ. ಮಾಜಿ ಮುಖ್ಯಮಂತ್ರಿಯಾಗಿರುವ ಅವರ ಬಗ್ಗೆ ಮಾತನಾಡಲು ನಮಗೆ ನಾಚಿಕೆಯಾಗುತ್ತಿದೆ’ ಎಂದು ವಾಕ್ ಪ್ರಹಾರ ಮಾಡಿದರು.

‘ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವುದಾದರೆ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಹಾಕಬೇಕಿತ್ತು. ಆದರೆ, ಬಸವಕಲ್ಯಾಣದಲ್ಲಿ ಮಾತ್ರ ಕಾಂಗ್ರೆಸ್‍ನಲ್ಲಿದ್ದ ಮುಸ್ಲಿಮ್ ಮುಖಂಡರೊಬ್ಬರನ್ನು ಸೆಳೆದು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಜೆಡಿಎಸ್ ಮುಸ್ಲಿಮರನ್ನು ಬಳಕೆ ಮಾತ್ರ ಮಾಡಿಕೊಳ್ಳುತ್ತ ಬಂದಿದೆ. ಅನೇಕರನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿದೆ. ಹಿಂದೆ ಬೀದರ್ ಉಪ ಚುನಾವಣೆಯಲ್ಲಿ ಅಯಾಜ್‍ಖಾನ್ ಅವರಿಗೆ ಕೈ ಕೊಟ್ಟಿತ್ತು’ ಎಂದು ಟೀಕಿಸಿದರು.

ತೆಲಂಗಾಣದಲ್ಲಿ 220 ವಿಧಾನಸಭಾ ಕ್ಷೇತ್ರಗಳು ಇವೆ. ಎಐಎಂಐಎಂ ಅಲ್ಲಿ ಏಳು ಬಿಟ್ಟು ಎಂಟನೇ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ಬಸವಕಲ್ಯಾಣದಲ್ಲಿ ಏಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ ಎಂದು ಪ್ರಶ್ನಿಸಿದರು.

ಅಸಾದುದ್ದಿನ್ ಒವೈಸಿ ಅವರೂ ಕುಮಾರಸ್ವಾಮಿಯಂತೆ ಬಿಜೆಪಿಯ ದೊಡ್ಡ ದಲ್ಲಾಳಿ ಆಗಿದ್ದಾರೆ. ಬಿಜೆಪಿಗೆ ಅನುಕೂಲ ಆಗಲಿ ಎಂದು ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಹೀಗಾಗಿ ಮತದಾರರು ಜೆಡಿಎಸ್ ಹಾಗೂ ಎಐಎಂಐಎಂಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆಯೇ ಆಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅಪಾರ ಅನುದಾನ ಕೊಟ್ಟಿತ್ತು. ಅದರ ಋಣ ತೀರಿಸುವ ಕಾಲ ಬಂದಿದೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT