ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಟೂರಿಸ್ಟ್ ವೀಸಾದಲ್ಲಿ ಬಂದು ಧರ್ಮ ಪ್ರಚಾರ, 8 ತಬ್ಲಿಗಿಗಳ ವಿರುದ್ಧ ಕೇಸು

Last Updated 7 ಏಪ್ರಿಲ್ 2020, 11:27 IST
ಅಕ್ಷರ ಗಾತ್ರ

ಬೀದರ್‌: ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮ ಪ್ರಚಾರ ಕೈಗೊಂಡ ಆರೋಪದ ಮೇಲೆ ಕಿರ್ಗಿಸ್ತಾನದ ಎಂಟು ನಾಗರಿಕರ ವಿರುದ್ಧ ನಗರದ ಗಾಂಧಿಗಂಜ್‌ ಹಾಗೂ ಟೌನ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಎಲ್ಲ ಎಂಟು ಜನರ ಪಾಸ್‌ಪೋರ್ಟ್‌ ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರೊಂದಿಗೆ ಎಷ್ಟು ಜನ ಬೀದರ್‌ ಜಿಲ್ಲೆಗೆ ಬಂದಿದ್ದಾರೆ ಎನ್ನುವ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ಕಿರ್ಗಿಸ್ತಾನದ ಅಕ್ಕಾಟೋವ್ ಮುನಾರ್ಬೆಕ್, ತಷ್ಯಾಟೋವ್ ಟಿಲೆಕ್, ಕಾಲೇವ್ ಚಿಂಗೀಜ್, ತೈಚುಬೆಕ್, ಆಝೀವ್, ಅರ್ನಾಲೀಸ್, ಬೋಟಾಲಿವ್ ಹಾಗೂ ಅಬ್ದುಲ್ದಾ ಬೇಕವ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ವಿದೇಶಿಯರು ಒಡಿಶಾದ ಅಬ್ದುಲ್ ಖುದ್ದೂಸ್ ಖಾನ್ ಹಾಗೂ ಕಮಲ್ ಅಜಗರ್ ಅವರ ಜತೆಗೆ ಬೀದರ್‌ಗೆ ಬಂದಿದ್ದಾರೆ. ಇವರು ಇಂಗ್ಲಿಷ್‌ನ್‌ಲ್ಲಿ ನೀಡುತ್ತಿದ್ದ ಧಾರ್ಮಿಕ ಸಂದೇಶವನ್ನು ಒಡಿಶಾದವರು ಉರ್ದುವಿನಲ್ಲಿ ಅನುವಾದಿಸಿ ಸ್ಥಳೀಯರಿಗೆ ಹೇಳುತ್ತಿದ್ದರು ಎನ್ನಲಾಗಿದೆ.

ದೆಹಲಿಯ ತಬ್ಲೀಗ್‌ ಜಮಾತ್ ಕೇಂದ್ರ ಕಚೇರಿಯಲ್ಲಿನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದಕಿರ್ಗಿಸ್ತಾನದ ಎಂಟು ಜನರು ನಗರದ ರಟಕಲ್‌ಪುರಾ ಮರ್ಕಜ್‌ ಮಸೀದಿಯಲ್ಲಿ ವಾಸವಾಗಿದ್ದರು. ಇವರ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಕೋವಿಡ್ 19 ಸೇರಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದು ಈಗಾಗಲೇ ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ.

ಮಾರ್ಚ್‌ 10ರಿಂದ ನಗರದಲ್ಲಿ ವಾಸವಾಗಿರುವ ಇವರು ಕೆಲ ಮಸೀದಿಗಳಿಗೆ ತೆರಳಿ ಧರ್ಮ ಪ್ರಚಾರ ಮಾಡಿದ್ದಾರೆ. ತಬ್ಲೀಗ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯದ ಗುಪ್ತಚರ ಇಲಾಖೆಯಿಂದ ಇನ್ನಷ್ಟು ಮಾಹಿತಿ ಕೇಳಿದೆ. ಇನ್ನೂ 20 ಜನ ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿರುವ ಮಾಹಿತಿ ಇದೆ. ಅವರು ಎಲ್ಲಿಯವರು ಎನ್ನುವ ಮಾಹಿತಿ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕಿರ್ಗಿಸ್ತಾನದಿಂದ ಬಂದ ಎಂಟು ಜನರ ಪಾಸ್‌ಪೋರ್ಟ್‌ ಹಾಗೂ ವೀಸಾ ಅವಧಿಯನ್ನು ಪರಿಶೀಲಿಸಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ನಾಲ್ಕು ದಿನಗಳ ಹಿಂದೆಯೇ ಪೊಲೀಸರು ತಿಳಿಸಿದ್ದರು. ಆದರೆ, ಪೊಲೀಸ್‌ ಅಧಿಕಾರಿಗಳು ಎಲ್ಲ ಮಗ್ಗಲುಗಳಿಂದಲೂ ತನಿಖೆ ನಡೆಸಿ ವಿದೇಶಿಯರ ಮೇಲೆ ಇದೀಗ ಅನುಮತಿ ಪಡೆಯದೇ ಧರ್ಮ ಪ್ರಚಾರ ನಡೆಸಿರುವ ಆರೋಪ ಹೊರಿಸಿದ್ದಾರೆ.

ಕಿರ್ಗಿಸ್ತಾನದವರು ವೀಸಾ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಕ್ಕೂ ಮಾಹಿತಿ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ಪ್ರಸ್ತುತ ಇವರೆಲ್ಲರೂ ನಗರದ ರಟಕಲ್‌ಪುರಾ ಮರ್ಕಜ್‌ ಮಸೀದಿಯಲ್ಲಿ (ಹೋಮ್‌ ಕ್ವಾರಂಟೈನ್) ಇದ್ದಾರೆ. ಪೊಲೀಸರು ಇವರ ಮೇಲೆ ನಿಗಾ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT