ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿರುವ ಬೀದರ್ ಜಿಲ್ಲೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಪ್ರದೇಶ ಹೊಂದಿದೆ. ಹೈದರಾಬಾದ್, ಸೊಲ್ಲಾಪುರ ಹಾಗೂ ಲಾತೂರ್ ಮಹಾನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೂ ಜಿಲ್ಲೆಯ ಕೈಗಾರಿಕೆಗಳು ಪೂರಕವಾಗಿವೆ. ಆದರೆ, ಸರ್ಕಾರದ ಸೌಲಭ್ಯಗಳ ಕೊರತೆಯಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿಲ್ಲ.
ಬೀದರ್ ನಗರ, ಗ್ರಾಮೀಣ, ಹುಮನಾಬಾದ್ ಹಾಗೂ ಬಸವಕಲ್ಯಾಣ ಸೇರಿ ಒಟ್ಟು ನಾಲ್ಕು ಕೈಗಾರಿಕಾ ಪ್ರದೇಶಗಳು ಜಿಲ್ಲೆಯಲ್ಲಿ ಇವೆ. ನಾಲ್ಕೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇವೆ. ಕೈಗಾರಿಕೆ ಪ್ರದೇಶಗಳಲ್ಲಿ ನೀರು ಹಾಗೂ ದಾರಿದೀಪಗಳ ಸಮಸ್ಯೆ ಮುಂದುವರಿದಿದೆ.
ಬೀದರ್ ನಗರದಲ್ಲಿರುವ ಕೈಗಾರಿಕೆ ಪ್ರದೇಶಕ್ಕೆ 5 ಎಂ.ಎಲ್.ಡಿ ನೀರಿನ ಅಗತ್ಯವಿದೆ. ಕೈಗಾರಿಕೆ ಪ್ರದೇಶಕ್ಕೆ ಕಾರಂಜಾ ಜಲಾಶಯದಿಂದ ನೀರು ಪೂರೈಸಲು ₹25 ಕೋಟಿ ಬೇಕಿದೆ. ಜಿಲ್ಲಾ ಕೈಗಾರಿಕೆ ಕೇಂದ್ರದ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಕಳಿಸಿದ್ದು, ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.
ಕೈಗಾರಿಕೆ ಪ್ರದೇಶದ ಸಮೀಪದಲ್ಲೇ ವಾಯುಪಡೆ ತರಬೇತಿ ಕೇಂದ್ರ ಇದೆ. ವಾಯುಪಡೆಯವರು ಚಿಮಣಿ(ಬಾಯ್ಲರ್) ಅಳವಡಿಸಲು ಅನುಮತಿ ಕೊಡುತ್ತಿಲ್ಲ. ಹೊಸ ವಿಧಾನದ ಚಿಮಣಿ ಅಳವಡಿಸುವಂತೆ ಸೂಚಿಸುತ್ತಿದ್ದಾರೆ. ಕೈಗಾರಿಕೆ ಆರಂಭಿಸಲು ವಾಯುಪಡೆ ತರಬೇತಿ ಕೇಂದ್ರದಿಂದಲೂ ಅನುಮತಿ ಪಡೆಯುವ ಅಗತ್ಯ ಇದೆ. ಹೀಗಾಗಿ ಹೊಸ ಕೈಗಾರಿಕೆಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ ಎಂದು ನೌಬಾದ್ ಕೈಗಾರಿಕೆ ಪ್ರದೇಶದ ಉದ್ಯಮಿಗಳು ಹೇಳುತ್ತಾರೆ.
ಬೀದರ್ ತಾಲ್ಲೂಕಿನ ಕೊಳಾರ ಕೈಗಾರಿಕೆ ಪ್ರದೇಶದಲ್ಲಿರುವ ಕೆಲ ನಿವೇಶನಗಳಲ್ಲಿ ಇಂದಿಗೂ ಕೈಗಾರಿಕೆಗಳು ಆರಂಭವಾಗಿಲ್ಲ. ಕೆಲವರು ಯಾವ ಉದ್ದೇಶಕ್ಕೆ ನಿವೇಶನ ಪಡೆದುಕೊಂಡಿದ್ದಾರೆಯೋ ಆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲ.
ಅಧಿಕಾರಿಗಳು ಬಾಗಿಲು ಮುಚ್ಚಿರುವ ಕೈಗಾರಿಕೆಗಳ ಮಾಹಿತಿ ಪಡೆಯಬೇಕು. ಕೈಗಾರಿಕೆಗಳು ನಡೆಯದಿದ್ದರೆ ಬೇರೆಯವರಿಗೆ ನಡೆಸಲು ಅವಕಾಶ ಕಲ್ಪಿಸಬೇಕು ಅಥವಾ ಹೊಸ ಉದ್ಯಮಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಚುನಾಯಿತ ಪ್ರತಿನಿಧಿಗಳು ಹಲವು ಬಾರಿ ಸಭೆಗಳಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಈ ದಿಸೆಯಲ್ಲಿ ಕ್ರಮ ಕೈಗೊಂಡಿಲ್ಲ.
ಕೇಂದ್ರ ಸಚಿವರೂ ಆಗಿರುವ ಸಂಸದ ಭಗವಂತ ಖೂಬಾ ಅವರು 2020ರ ಫೆಬ್ರುವರಿಯಲ್ಲಿ ಸಹಾರ್ದ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆಸಿದ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಕುರಿತ ಸಭೆಯಲ್ಲಿ ಉದ್ಯಮಿಗಳು ಕೈಗಾರಿಕೆ ಪ್ರದೇಶದಲ್ಲಿ ಇರುವ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿದ್ದರು.
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಅಧಿಕಾರಿಗಳು ಸಿದ್ಧಪಡಿಸುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಜಿಲ್ಲೆಯ ಭಗವಂತ ಖೂಬಾ ಅವರೇ ಕೇಂದ್ರದ ಸಚಿವರಾಗಿದ್ದಾರೆ. ಕೆಮಿಕಲ್ ಫ್ಯಾಕ್ಟರಿಗಳ ಸಮಸ್ಯೆಗೆ ಪರಿಹಾರ ದೊರಕಲಿದೆ ಎನ್ನುವ ಆಶಾಭಾವ ಮೂಡಿದೆ.
ಜಿಲ್ಲೆಯಲ್ಲಿ ನೂರಾರು ಸಣ್ಣ ಕೈಗಾರಿಕೆಗಳು ಇದ್ದರೂ ಫ್ಯಾಕ್ಟರಿಗಳ ಮಾಲೀಕರು ಸ್ಥಳೀಯರಿಗೆ ಉದ್ಯೋಗ ಅವಕಾಶ ಕೊಡುತ್ತಿಲ್ಲ. ಉತ್ತರಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶದ ಕಾರ್ಮಿಕರೇ ಇದ್ದಾರೆ. ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ಕೊಳಾರ ಗ್ರಾಮದ ವಿಕಾಸ ಹಾಗೂ ಪ್ರಶಾಂತ ಅವರ ಮನವಿಯಾಗಿದೆ.
ಕೈಗಾರಿಕೆ ಪ್ರದೇಶದಲ್ಲಿ ಕತ್ತಲು; ಬೀದರ್ ತಾಲ್ಲೂಕಿನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ರಸ್ತೆಯನ್ನು ಹೊರತುಪಡಿಸಿ ಒಳಗಡೆ ದಾರಿದೀಪಗಳು ಇಲ್ಲ. ಎರಡನೇ ಪಾಳಿ ಮುಗಿಸಿ ಮನೆಗೆ ಹೋಗುವ ಹಾಗೂ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವ ಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ.
1986ರಲ್ಲಿ ಕೇಂದ್ರ ಸರ್ಕಾರ ಬೀದರ್ ಕೈಗಾರಿಕಾ ರಹಿತ ಪ್ರದೇಶ ಎಂದು ಘೋಷಿಸಿ ವಿಶೇಷ ಅನುದಾನ ಕೊಟ್ಟು ಕೊಳಾರ ಮತ್ತು ನೌಬಾದ್‌ನಲ್ಲಿ ಕೈಗಾರಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, 35 ವರ್ಷಗಳು ಕಳೆದರೂ ಸರಿಯಾಗಿ ಮೂಲಸೌಕರ್ಯ ಲಭಿಸುತ್ತಿಲ್ಲ ಎಂದು ಬೀದರ್ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಬೇಸರ ವ್ಯಕ್ತಪಡಿಸುತ್ತಾರೆ.
ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕರು ಹಲವು ಬಾರಿ ಜಿಲ್ಲಾ ಕೈಗಾರಿಕೆ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳುತ್ತಾರೆ.
ದಾರಿದೀಪಗಳು ಇಲ್ಲದ ಕಾರಣ ಕಳ್ಳರ ಹಾವಳಿ ಹೆಚ್ಚಾಗಿದೆ. ಕೆಲಸ ಮುಗಿಸಿ ಮನೆಗೆ ಹೋಗುವಾಗ ಕಳ್ಳರು ದಾಳಿ ಮಾಡಿ ಹಣ, ಮೊಬೈಲ್ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ಇಲ್ಲಿ ಒಂದು ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕು ಎಂದು ಕಾರ್ಮಿಕರು ಮನವಿ ಮಾಡುತ್ತಾರೆ.
ಕಾರ್ಮಿಕರಿಗೆ ಸೌಲಭ್ಯವೇ ಇಲ್ಲ; ಕೆಐಎಡಿಬಿ ವತಿಯಿಂದ ಹುಮನಾಬಾದ್ ಪಟ್ಟಣದ ಹೊರ ವಲಯದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದೆ. 25 ಫ್ಯಾಕ್ಟರಿಗಳ ಪೈಕಿ 8 ಕೆಮಿಕಲ್ ಫ್ಯಾಕ್ಟರಿಗಳೇ ಇವೆ. ಕೈಗಾರಿಕಾ ಪ್ರದೇಶದಲ್ಲಿ ನೀರು ಹರಿದು ಹೋಗಲು ಸರಿಯಾಗಿ ಗಟಾರ ನಿರ್ಮಿಸಿಲ್ಲ.
ಫ್ಯಾಕ್ಟರಿಗಳ ಕೊಳಚೆ ನೀರು ರಸ್ತೆ ಮೇಲೆ ಹರಿದು ಬರುತ್ತಿದೆ. ಕೆಮಿಕಲ್ ಫ್ಯಾಕ್ಟರಿಗಳಿಂದ ಹರಿದು ಬರುವ ನೀರು ರೈತರ ಹೊಲಗಳಿಗೆ ನುಗ್ಗುತ್ತಿದೆ.
ಕೈಗಾರಿಕಾ ಪ್ರದೇಶದಲ್ಲಿ ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬೀದಿದೀಪಗಳು ಇಲ್ಲ. ರಾತ್ರಿ ಸಮಯದಲ್ಲಿ ಕಾರ್ಮಿಕರು ಕೆಲಸ ಮುಗಿದ ನಂತರ ಮನೆಗೆ ಹೋಗುವುದು ಕಷ್ಟವಾಗುತ್ತಿದೆ.
ಪೂರಕ ಮಾಹಿತಿ: ನಾಗೇಶ ಪ್ರಭಾ, ಮಾಣಿಕ ಭುರೆ, ಗುಂಡು ಅತಿವಾಳ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.