ಶುಕ್ರವಾರ, ಜನವರಿ 24, 2020
16 °C
ಮರೂರ: ಹಾಳುಬಿದ್ದ ಉಗ್ರಾಣ, ಮೈದಾನವಿಲ್ಲದ ಶಾಲೆ

ಸಮಸ್ಯೆಗಳ ಮಧ್ಯೆ ‘ಸೋರುತ್ತಿದೆ’ ಬದುಕು

ಬಸವರಾಜ್ ಎಸ್.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಮರೂರ ಗ್ರಾಮದ ಬಸವನಗರದಲ್ಲಿ ಗ್ರಾಮೀಣ ಭಾಗದ ರೈತರು ಬೆಳೆದ ಬೆಳೆಗಳನ್ನು ಸಂಗ್ರಹಿಸಿಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2015-16ರಲ್ಲಿ ₹13.26 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಗ್ರಾಮೀಣ ಕೃಷಿ ಉತ್ಪನ್ನ ಆಹಾರ ಧಾನ್ಯಗಳ ಉಗ್ರಾಣ ಸಂಬಂಧಿಸಿ ದವರ ನಿರ್ಲಕ್ಷ್ಯದಿಂದ ದನ-ಕುರಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ಇದು ಸಿದ್ದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮದ ಕೆಲವೆಡೆ ಇನ್ನೂ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಬಹುತೇಕ ಕಡೆ ರಸ್ತೆ ಇದ್ದರೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ, ಮನೆಗಳ, ದೇವಸ್ಥಾನದ ಅಕ್ಕಪಕ್ಕ, ಗ್ರಾಮದ ಹೊರಗಿನ ಸ್ಥಳಗಳಲ್ಲಿ ಚರಂಡಿ ನೀರು ಸಂಗ್ರಹಗೊಂಡು ಅಸ್ವಚ್ಛತೆ ತಾಂಡವವಾಡುತ್ತಿದೆ.

‘ಬಸವನಗರದಲ್ಲಿ ಚರಂಡಿ ನಿರ್ಮಿಸಿಲ್ಲ. ಇದರಿಂದ ಕೊಳಚೆ ನೀರು ಸಂಗ್ರಹವಾದ ಸ್ಥಳಗಳಲ್ಲಿ ಹಂದಿಗಳು ಬೀಡು ಬಿಡುತ್ತಿವೆ. ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ’ ಎಂದು ನಿವಾಸಿಗಳಾದ ದಿಲೀಪ ಗುಪ್ತಾ, ಧನರಾಜ ಹಾಸಗೊಂಡ, ಕುಪೇಂದ್ರ ಹಾಸಗೊಂಡ, ಲಕ್ಷ್ಮಣರಾವ್ ರತ್ನಾಕರ ಅಳಲು ತೋಡಿಕೊಂಡರು.

ಕೊಳವೆಬಾವಿ ಮೋಟಾರ್ ಸುಟ್ಟು ಮೂರು ತಿಂಗಳಾದರೂ ದುರಸ್ತಿ ಆಗಿಲ್ಲ. ಹಾಗಾಗಿ, ಎರಡು ಮೂರು ದಿನಕ್ಕೊಮ್ಮೆ ನೀರು ಬರುತ್ತಿದೆ. ಎಲ್ಲ ಮನೆಗಳಿಗೆ ನಳಗಳ ವ್ಯವಸ್ಥೆ ಮಾಡಿಲ್ಲ. ಇನ್ನೂ ಎರಡು ಸಣ್ಣ ನೀರಿನ ಟ್ಯಾಂಕ್ ಇದ್ದು ಇಲ್ಲದಂತಾಗಿವೆ. ಅವುಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಗ್ರಾಮದಲ್ಲಿರುವ ಚರಂಡಿಗಳನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿಲ್ಲ. ಮನೆ-ಮನೆಗೂ ನಿರ್ಮಿಸಿರುವ ಹೆಚ್ಚಿನ ಶೌಚಾಲಯಗಳು ಬಳಕೆಯಾಗದೆ ಇರುವುದರಿಂದ ಗ್ರಾಮದ ಸಮೀಪದ ರಸ್ತೆ-ಅಕ್ಕಪಕ್ಕವೇ ಜನರು ಬಯಲು ಶೌಚ ಮಾಡುತ್ತಿದ್ದಾರೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವಂತಾಗಿದೆ ಎಂದು ಜನರು ದೂರಿದರು.

ಗ್ರಾಮದ ಸರ್ಕಾರಿ ಶಾಲೆಯ ಕೆಲ ವರ್ಗ ಕೋಣೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳ ಜೀವ ಅಪಾಯದಲ್ಲಿದೆ. ವಿದ್ಯಾರ್ಥಿಗಳ ದೈಹಿಕ ವಿಕಾಸಕ್ಕೆ ಅಗತ್ಯವಾಗಿ ಬೇಕಾಗಿರುವ ಆಟದ ಮೈದಾನ ಇಲ್ಲ. ಹಾಗಾಗಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಪೆಟ್ಟು ಬೀಳುತ್ತಿದೆ. ಈ ಎಲ್ಲ ಸಮಸ್ಯೆಗಳು ಜನಪ್ರತಿನಿಧಿ, ಅಧಿಕಾರಿಗಳ ಗಮನದಲ್ಲಿದ್ದರೂ ತಮಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲದಂತೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಶೀಘ್ರದಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ವಾಸಿಗಳು ಒತ್ತಾಯಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು