ಮಂಗಳವಾರ, ಜೂನ್ 28, 2022
25 °C
ಗ್ರಾಮೀಣ ಜನರು ಮಾಸ್ಕ್, ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಲಹೆ

ನಿರ್ಲಕ್ಷ್ಯ ಬಿಟ್ಟು ಲಸಿಕೆ ಪಡೆಯಲಿ: ಸಿದ್ಧಾರೂಢ ಭಾಲ್ಕೆ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಕೊರೊನಾ ಎಲ್ಲೆಡೆ ತೀವ್ರವಾಗಿ ವ್ಯಾಪಿಸುತ್ತಿದೆ. ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿದೆ. ಇದೆಲ್ಲದರ ಮಧ್ಯೆ ಗ್ರಾಮೀಣ ಜನರು ಸರ್ಕಾರ ಸೂಚಿಸಿರುವ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಸಹ ಹಿಂಜರಿಕೆ ತೋರುತ್ತಿದ್ದಾರೆ.

ಜ್ವರ, ಕೆಮ್ಮು ಕಾಣಿಸಿಕೊಂಡರೆ ಅದಕ್ಕೆ ಔಷಧ ಅಂಗಡಿಗಳಲ್ಲಿ ಮಾತ್ರೆ ಪಡೆದು ಅದರಿಂದ ಸ್ವಲ್ಪ ಚೇತರಿಕೆ ಕಂಡರೆ ‘ನಮಗೇನೂ ಆಗಿಲ್ಲ. ಅದಕ್ಕೆಲ್ಲಾ ಕೊರೊನಾ ಪರೀಕ್ಷೆ ಏಕೆ ಮಾಡಿಸಬೇಕು‌’ ಎಂಬ ಧೋರಣೆ ಗ್ರಾಮಸ್ಥರಲ್ಲಿದೆ.

‘ಜಿಲ್ಲೆಯಲ್ಲಿ ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಹೀಗಾಗಿ ಜನರು ಕೋವಿಡ್‌ ನಿಯಮ ಪಾಲಿಸಬೇಕು. ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಕಿವಿಗೊಡುತ್ತಿಲ್ಲ. ಲಸಿಕೆ ಪಡೆಯುವಂತೆ ತಿಳಿಹೇಳಿದರೂ ಮುಂದೆ ಬರುತ್ತಿಲ್ಲ’ ಎಂದು ಆರೋಗ್ಯ ಇಲಾಖೆಯ ಸಿದ್ಧಾರೂಢ ಭಾಲ್ಕೆ ಬೇಸರ ವ್ಯಕ್ತಪಡಿಸಿದರು.

‘ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಮನೆಮನೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಹೇಳಿದರೂ ಜನ ಸಹಕರಿಸುವುದಿಲ್ಲ. ಬದಲಾಗಿ ಅವಾಚ್ಯ ಪದಗಳಿಂದ ನಿಂದಿಸಿ ಕಳುಹಿಸುತ್ತಾರೆ’ ಎಂದು ಆಶಾ ಕಾರ್ಯಕರ್ತೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಿಗ್ಗೆ 10ರವರೆಗೆ ತೆರೆದಿರುವ ಕಿರಾಣಿ, ದಿನಸಿ ಅಂಗಡಿಗಳ ಎದುರು ಜನರು ಮುಗಿಬೀಳುತ್ತಾರೆ. ಕೆಲವರು ಮಾಸ್ಕ್‌ ಸಹ ಧರಿಸುವುದಿಲ್ಲ. ಕೊರೊನಾ ಭೀಕರತೆ ಹೆಚ್ಚುತ್ತಿದ್ದರೂ ಜನರು ಮಾತ್ರ ಇನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಹಿರಿಯರಾದ ನಿರ್ಮಲಕಾಂತ ಪಾಟೀಲ ತಿಳಿಸಿದರು.

‘ರಸ್ತೆಗಿಳಿದರೆ ಪೊಲೀಸರು ದಂಡ ಹಾಕುವರು ಎಂಬ ಕಾರಣಕ್ಕೆ ಗ್ರಾಮದ ದೇವಸ್ಥಾನ, ಸಮುದಾಯ ಭವನ, ಓಣಿಗಳ ಕಟ್ಟೆಯ ಮೇಲೆ ಕುಳಿತು ಗ್ರಾಮಸ್ಥರು ಹರಟೆ ಹೊಡೆಯುತ್ತಾರೆ. ಇನ್ನು ಕೆಲವರು ಹೊಲಗದ್ದೆಗಳಿಗೆ ತೆರಳಿ ಮದ್ಯ ಸೇವನೆ, ಜೂಜಾಟ ಸೇರಿದಂತೆ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಆದರೆ, ಇವರೆಲ್ಲ ಯಾವುದೇ ರೀತಿ ಮಾಸ್ಕ್ ಧರಿಸುವುದಿಲ್ಲ. ಸುರಕ್ಷಿತ ಅಂತರ ಮೊದಲೇ ಪಾಲಿಸುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ರೇವಣಸಿದ್ದ ಜಾಡರ್ ಹೇಳಿದರು.

‘ಖಟಕಚಿಂಚೋಳಿ ಹೋಬಳಿ ಸುತ್ತಲಿನ ಗ್ರಾಮಗಳಾದ ಚಳಕಾಪುರ, ತುಗಾಂವ್, ಮಾಸಿಮಾಡ್, ದಾಡಗಿ, ಡಾವರಗಾಂವ್, ಮದಕಟ್ಟಿ, ನಾವದಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸೋಂಕಿತರು ಇದ್ದಾರೆ. ಅಲ್ಲದೇ ಕೆಲವರು ಮೃತಪಟ್ಟಿದ್ದಾರೆ. ಇದರ ಬಗ್ಗೆ ಗ್ರಾಮ ಪಂಚಾಯ್ತಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಎಷ್ಟೇ ಜಾಗೃತಿ ಮೂಡಿಸಿದರೂ ಕೋವಿಡ್‌ ನಿಯಮಗಳನ್ನು ಜನರು ಪಾಲಿಸುತ್ತಿಲ್ಲ’ ಎಂದು ನಾವದಗಿ ಗ್ರಾಮದ ನಾಗನಾಥ ಬಿರಾದಾರ ಕಳವಳ ವ್ಯಕ್ತಪಡಿಸಿದರು.

‘ಜನರಲ್ಲಿ ಸ್ವಯಂ ಜಾಗೃತಿ ಮುಖ್ಯ’
‘ಸೋಂಕಿನ ಗುಣಲಕ್ಷಣ ಕಂಡುಬಂದವರು ಮನೆಯಲ್ಲಿಯೇ ಇರುವಂತೆ ಹಾಗೂ ಇತರರಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗುತ್ತದೆ. ಆದರೆ, ಸೋಂಕಿತ ವ್ಯಕ್ತಿ ತನಗೆ ಏನೂ ಆಗಿಲ್ಲ. ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಮಾಸ್ಕ್ ಸಹ ಧರಿಸದೆ ಗ್ರಾಮದ ಇತರರೊಡನೆ ಸುತ್ತಾಡುತ್ತಾರೆ. ಇದರಿಂದ ಸೋಂಕು ಗ್ರಾಮದ ಇತರರಿಗೂ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜನರು ಸ್ವಯಂ ಜಾಗೃತ ಆಗುವವರೆಗೆ ಸರ್ಕಾರ ಏನೇ ಮಾಡಿದರೂ ಸೋಂಕು ನಿಯಂತ್ರಣ ಕಷ್ಟದ ಕೆಲಸವಾಗಿದೆ’ ಎಂದು ಆರೋಗ್ಯ ಇಲಾಖೆಯ ತುಳಜಾರಾಮ್ ಮಚ್ಚೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.