ಸೋಮವಾರ, ಆಗಸ್ಟ್ 2, 2021
27 °C
ಕೊರೊನಾ: ಮನೆಗಳಿಂದ ಹೊರಗೆ ಬರದ ಜನ

ಲಾಕ್‌ಡೌನ್‌ಗೆ ಬೀದರ್‌ ಜಿಲ್ಲೆ ಸಂಪೂರ್ಣ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ 19 ಸೋಂಕು ಕೈಮೀರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಪ್ರಯುಕ್ತ ಭಾನುವಾರದ ಲಾಕ್‌ಡೌನ್‌ಗೆ ಎಲ್ಲೆಡೆ ಬೆಂಬಲ ದೊರೆಯಿತು. ಕರ್ತವ್ಯ ನಿರತ ಪೊಲೀಸರ ಸಂಖ್ಯೆ ಕಡಿಮೆ ಇದ್ದರೂ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿತ್ತು.

ಕೇಂದ್ರ ಬಸ್‌ ನಿಲ್ದಾಣ, ಗ್ರಾಮೀಣ ಸಾರಿಗೆ ಹಾಗೂ ನಗರ ಸಾರಿಗೆ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೊ ಎನ್ನುತ್ತಿದ್ದವು. ದೂರದ ನಗರಗಳಿಂದ ಜಿಲ್ಲೆಗೆ ಬಂದ ಬಸ್‌ಗಳು ಬೆಳಿಗ್ಗೆಯೇ ಡಿಪೊ ಸೇರಿದವು.
ನಗರ ಸಾರಿಗೆ ಬಸ್‌ಗಳ ಸಂಚಾರವನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಟ್ಯಾಕ್ಸಿ, ಕಾರು, ಕ್ರೂಸರ್‌, ಜೀಪ್‌ ಹಾಗೂ ಆಟೊರಿಕ್ಷಾಗಳ ರಸ್ತೆಗೆ ಇಳಿಯಲಿಲ್ಲ.

ಆಸ್ಪತ್ರೆ, ಮೆಡಿಕಲ್‌ ಹೊರತು ಪಡಿಸಿ ಹೋಟೆಲ್‌, ಖಾನಾವಳಿ, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತರಕಾರಿ ಅಂಗಡಿಗಳೂ ಸಹ ತೆರೆದಿರಲಿಲ್ಲ.

ದಿನಪತ್ರಿಕೆಗಳ ಏಜೆಂಟರು ಬೆಳಗಿನ ಜಾವ 6 ಗಂಟೆಯ ಬೈಕ್‌ ಹಾಗೂ ಸೈಕಲ್‌ಗಳ ಮೇಲೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸಿದರು. ಬೆಳಿಗ್ಗೆ ಜಿಟಿ ಜಿಟಿ ಮಳೆಯೂ ಇದ್ದ ಕಾರಣ ಜನರು ಸ್ವಯಂ ಇಚ್ಚೆಯಿಂದ ಮನೆಯಲ್ಲೇ ಉಳಿದ ಕಾರಣ ನಗರದ ಪ್ರಮುಖ ರಸ್ತೆಗಳು ಬಿಕೊ ಎನ್ನುತ್ತಿದ್ದವು.

ವಿವಿಧ ಕಾಯಿಲೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಸಂಬಂಧಿಗಳು ತೊಂದರೆ ಅನುಭವಿಸಬೇಕಾಯಿತು. ಆಟೊರಿಕ್ಷಾಗಳು ಇಲ್ಲದ ಕಾರಣ ಮನೆಗೆ ಹೋಗಲು ಪರದಾಡಿದರು.

ಬೀದರ್‌ನ ಶಹಾಪುರ್‌ ಗೇಟ್, ಭಂಗೂರ್, ಕಮಲನಗರ, ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ, ಮುಚಳಂಬ ಹಾಗೂ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು.

ಮಹಾರಾಷ್ಟ್ರ ಹಾಗೂ ತೆಲಂಗಾಣದ ಕಡೆಯಿಂದ ಖಾಸಗಿ ವಾಹನಗಳಲ್ಲಿ ಜಿಲ್ಲೆಗೆ ಬರುತ್ತಿದ್ದ ಅನೇಕ ಜನರಿಗೆ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಿರುವ ಮುನ್ಸೂಚನೆ ಇರಲಿಲ್ಲ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಪತ್ರಿಕೆಗಳಿಗೆ ತಡ ಮಾಡಿ ಮಾಹಿತಿ ಪೂರೈಸಿದ್ದರಿಂದ ಪತ್ರಿಕೆಗಳಲ್ಲೂ ವಿವರವಾದ ಮಾಹಿತಿ ಇರಲಿಲ್ಲ. ಮಹಾರಾಷ್ಟ್ರದ ಕಡೆಯಿಂದ ಬಂದ್‌ ವಾಹನಗಳನ್ನು ವಾಪಸ್‌ ಕಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು