ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ₹ 9.09 ಲಕ್ಷ ಸಾಲಗಾರ ಭಗವಂತ ಖೂಬಾ

ಮೆಕ್ಯಾನಿಕಲ್‌ ಎಂಜಿನಿಯರ್‌ ಪದವೀಧರರು; ಠಾಣೆಯಲ್ಲಿಲ್ಲ ಯಾವುದೇ ಅಪರಾಧ ಪ್ರಕರಣ
Published 15 ಏಪ್ರಿಲ್ 2024, 16:04 IST
Last Updated 15 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರು ನಗರದ ಎಸ್‌ಬಿಐ ಬ್ಯಾಂಕಿನಲ್ಲಿ ₹9.09 ಲಕ್ಷ ವೈಯಕ್ತಿಕ ಸಾಲ ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ನಗರದಲ್ಲಿ ಸೋಮವಾರ ಚುನಾವಣಾಧಿಕಾರಿಗೆ ಅವರು ನಾಮಪತ್ರ ಸಲ್ಲಿಸಿದ್ದು, ಅದರೊಂದಿಗೆ ಅವರು ಘೋಷಿಸಿಕೊಂಡಿರುವ ಆಸ್ತಿ ವಿವರದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.

57 ವರ್ಷ ವಯಸ್ಸಿನ ಖೂಬಾ ಅವರು ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಪದವಿ ಪೂರೈಸಿದ್ದಾರೆ. ಜಿಲ್ಲೆಯ ಔರಾದ್‌ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ. ಇವರಿಗೆ ಪತ್ನಿ ಶೀಲಾ, ಅಶುತೋಷ ಖೂಬಾ, ವಸುಂಧರಾ ಖೂಬಾ, ಮಣಿಕರ್ಣಿಕಾ ಖೂಬಾ ಸೇರಿ ಮೂವರು ಮಕ್ಕಳಿದ್ದಾರೆ.

ಕೇಂದ್ರ ಸಚಿವರಾಗಿದ್ದರೂ ಖೂಬಾ ಅವರ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಅವರ ಪತ್ನಿ ಶೀಲಾ ಅವರ ಹೆಸರಲ್ಲಿ ಬೀದರ್‌ನ ಶಿವನಗರದಲ್ಲಿ ₹30 ಲಕ್ಷ ಬೆಲೆ ಬಾಳುವ 80X60 ಅಡಿ ಅಳತೆಯ ಮನೆ ಇದೆ. ಖೂಬಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಯಾವುದೇ ಅಪರಾಧಿಕ ಪ್ರಕರಣಗಳಿಲ್ಲ.

ಖೂಬಾ ಅವರ ಬಳಿ ನಗದು ₹8 ಲಕ್ಷ ಇದ್ದರೆ, ಅವರ ಪತ್ನಿ ಶೀಲಾ ಅವರ ಕೈಯಲ್ಲಿ ₹5 ಲಕ್ಷ ನಗದು ಹಣವಿದೆ. ಒಂದು ಇನ್ನೊವಾ, ಒಂದು ಪಿಕ್‌ಅಪ್‌ ವಾಹನ ಹೊಂದಿದ್ದಾರೆ. ಎಲ್‌ಐಸಿ, ಬಾಂಡ್‌, ಚಿನ್ನಾಭರಣ ಸೇರಿದಂತೆ ಒಟ್ಟು ₹71.54 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ₹26.26 ಲಕ್ಷ ಚರಾಸ್ತಿಯ ಒಡತಿ.

ಖೂಬಾ ಬಳಿ ₹4.25 ಲಕ್ಷ ಮೌಲ್ಯದ 60.2 ಗ್ರಾಂ ಚಿನ್ನ, ₹3.60 ಲಕ್ಷ ಬೆಲೆಬಾಳುವ ಕೈ ಗಡಿಯಾರ ಇದೆ. ₹79.54 ಲಕ್ಷ ಮೌಲ್ಯದ ಒಟ್ಟು ಚರಾಸ್ತಿ ಇದೆ. ಪತ್ನಿ ಹೆಸರಲ್ಲಿ ₹31.26 ಲಕ್ಷ ಚರಾಸ್ತಿ ಇದೆ.

₹3.07 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ₹1.65 ಕೋಟಿ ಸ್ಥಿರಾಸ್ತಿ ಮಾಲೀಕರು.

ಬೀದರ್‌, ಔರಾದ್, ಸೇಡಂ, ಮಹಾರಾಷ್ಟ್ರದ ತುಳಜಾಪುರ, ಸೋಲಾಪುರ, ವಚ್ಚಾದಲ್ಲಿ ಕೃಷಿ ಹಾಗೂ ಕೃಷಿಯೇತರ ಜಮೀನು, ನಿವೇಶನಗಳನ್ನು ಹೊಂದಿದ್ದಾರೆ.

2019ರಲ್ಲಿ ಸ್ಪರ್ಧಿಸಿದ ಚುನಾವಣೆಯಲ್ಲಿ ಅವರೇ ಘೋಷಿಸಿಕೊಂಡಂತೆ ₹1.02 ಕೋಟಿ ಸಾಲ ಇತ್ತು. ಜಮೀನು, ನಿವೇಶನ ಸೇರಿದಂತೆ ಸುಮಾರು ₹10 ಕೋಟಿಗೂ ಅಧಿಕ ಸ್ಥಿರಾಸ್ತಿ ಹಾಗೂ ಚರಾಸ್ತಿ ತೋರಿಸಿದ್ದರು.

ಖೂಬಾ ನಾಮಪತ್ರ

ಬೀದರ್: ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವರೂ ಆದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮುಖಂಡರಾದ ಬಸವರಾಜ ಆರ್ಯ ಎಂ.ಜಿ.ಮುಳೆ ಅವರೊಂದಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಖೂಬಾ ಅವರು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಕೆಲ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಏ. 18ರಂದು ಶಕ್ತಿ ಪ್ರದರ್ಶನದೊಂದಿಗೆ ಉಮೇದುವಾರಿಕೆ ಸಲ್ಲಿಸುವರು ಎಂದು ಅವರ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಗೆದ್ದಿರುವ ಖೂಬಾ ಅವರು ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT