ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಪಟ್ಟು ಓದಲಿಲ್ಲ, ಇಷ್ಟಪಟ್ಟು ಓದಿದೆ

ಪಿಯುಸಿ ಸಾಧಕಿ
Last Updated 18 ಜುಲೈ 2020, 16:04 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೋಹಿಣಿ ಮಹಾಜನ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 565 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

ಅಕೌಂಟನ್ಸಿ ಹಾಗೂ ಸ್ಟೆಟಿಸ್ಟಿಕ್ಸ್‌ನಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಬಿಸಿನಿಸ್ ಸ್ಟಡಿಯಲ್ಲಿ 98, ಎಕಾನಾಮಿಕ್ಸ್‌ನಲ್ಲಿ 97, ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ತಲಾ 85 ಅಂಕ ಪಡೆದಿದ್ದಾರೆ.

ರೋಹಿಣಿ ಅವರ ತಂದೆ ಚಂದ್ರಕಾಂತ ಅವರು ವೈದ್ಯಕೀಯ ಪ್ರತಿನಿಧಿಯಾಗಿದ್ದಾರೆ. ತಾಯಿ ವಂದನಾ ಬಸವಕಲ್ಯಾಣದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹಿರಿಯ ಸಹೋದರ ಎಂಜಿನಿಯರಿಂಗ್ ಮಾಡುತ್ತಿದ್ದಾರೆ.

ತಮ್ಮ ವಿದ್ಯಾಭ್ಯಾಸದ ಕ್ರಮದ ಬಗ್ಗೆ ರೋಹಿಣಿ ಹೀಗೆ ವಿವರಿಸುತ್ತಾರೆ...

ಲೆಕ್ಕ ಅಂದರೆ ನನಗೆ ಬಹಳ ಆಸಕ್ತಿ. ಹೀಗಾಗಿ ಬೀದರ್ನ ಕರ್ನಾಟಕ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದುಕೊಂಡಿದ್ದೆ. ತರಗತಿಗಳಿಗೆ ಹಾಜರಾದಾಗ ನನಗೆ ಎಲ್ಲ ವಿಷಯಗಳೂ ಹೊಸದಾಗಿದ್ದವು. ಮೊದಲ ವರ್ಷ ನನಗೆ ಕಷ್ಟ ಎಂದು ಭಾವಿಸಿದ್ದೆ. ಆದರೆ, ಆರಂಭದಲ್ಲಿ ಉಪನ್ಯಾಸಕರು ಸರಳವಾಗಿ ಬೋಧಿಸಿ ಪ್ರತಿಯೊಂದು ವಿಷಯವನ್ನು ಮನದಟ್ಟಾಗುವಂತೆ ತಿಳಿಸಿ ನನ್ನಲ್ಲಿನ ಕಲಿಕೆಯ ಭಯವನ್ನು ಹೋಗಲಾಡಿಸಿದರು.

ನಂತರ (ಎರಡನೇ ವರ್ಷ) ಎಲ್ಲ ವಿಷಯಗಳನ್ನು ನಿರಂತರವಾಗಿ ಓದಲು ಶುರು ಮಾಡಿದೆ. ಕಾಲೇಜಿನಲ್ಲಿ ಉಪನ್ಯಾಸಕರು ಬೋಧನೆ ಮಾಡಿದ ವಿಷಯವನ್ನು ಮನೆಗೆ ಬಂದ ನಂತರ ಮತ್ತೊಮ್ಮೆ ಓದಿಕೊಳ್ಳುತ್ತಿದ್ದೆ. ಇದರಿಂದ ಹೆಚ್ಚು ನೆನಪಿಟ್ಟುಕೊಳ್ಳಲು ಸಾಧ್ಯವಾಯಿತು.
ಪಠ್ಯಕ್ರಮದ ಅಭ್ಯಾಸಕ್ಕೆ ಒಂದಿಷ್ಟು ಸಮಯ ನಿಗದಿ ಮಾಡಿಕೊಂಡು ಓದುತ್ತಿದ್ದೆ. ಬೆಳಿಗ್ಗೆ ಹಾಗೂ ಸಂಜೆ ಎರಡು ತಾಸು ಕಟ್ಡಾಯವಾಗಿ ಓದುತ್ತಿದ್ದೆ. ಯಾವುದೇ ಒಂದು ವಿಷಯದ ಬಗ್ಗೆ ಗೊಂದಲ ಇದ್ದಾಗ ಉಪನ್ಯಾಸಕರ ಬಳಿಗೆ ಹೋಗಿ ನಿವಾರಿಸಿಕೊಳ್ಳುತ್ತಿದ್ದೆ. ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದೆ. ಕಾಲೇಜಿನಲ್ಲಿ ಉಪನ್ಯಾಸಕರು ಕೊಡುತ್ತಿದ್ದ ಮಾದರಿ ಪ್ರಶ್ನೆಗಳನ್ನೂ ಬಿಡಿಸುತ್ತಿದ್ದೆ. ಉಪನ್ಯಾಸಕರು ಹೆಚ್ಚುವರಿ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡುತ್ತಿದ್ದರು. ಇದು ಕೂಡ ನನ್ನ ಫಲಿತಾಂಶ ಹೆಚ್ಚಳಕ್ಕೆ ನೆರವಾಯಿತು.

ನನ್ನ ಪಾಲಕರು ಮೊಬೈಲ್ ಹಾಗೂ ಟಿವಿಗಳಿಂದ ದೂರ ಇರುವಂತೆ ಆಗಾಗ ಹೇಳುತ್ತಿದ್ದರು. ಹಾಗಂತ ಪೂರ್ತಿಯಾಗಿ ನಿರ್ಬಂಧವನ್ನೂ ಹೇರಿರಲಿಲ್ಲ. ಸಕಾಲಕ್ಕೆ ತಂದೆಯವರೂ ಮಾರ್ಗದರ್ಶನ ನೀಡುತ್ತಿದ್ದರು. ಈ ಎಲ್ಲ ಅಂಶಗಳು ಉತ್ತಮ ಫಲಿತಾಂಶ ತರಲು ಸಹಕಾರಿಯಾದವು.

ಶೈಕ್ಷಣಿಕ ವರ್ಷದ ಆರಂಭದಿಂದಲೇ ಎಲ್ಲ ವಿಷಯಗಳನ್ನೂ ಓದುತ್ತಿದ್ದೆ. ಹೀಗಾಗಿ ನನಗೆ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸುಲಭವಾಯಿತು. ವರ್ಷವಿಡಿ ಪರಿಶ್ರಮ ಪಟ್ಟಿದ್ದಕ್ಕೆ ಉತ್ತಮ ಅಂಕಗಳು ಬಂದಿವೆ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಿದ್ದಕ್ಕೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದೇನೆ.

ನಿರೂಪಣೆ: ಚಂದ್ರಕಾಂತ ಮಸಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT