ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ: ಕಣದಲ್ಲಿ 18 ಅಭ್ಯರ್ಥಿಗಳು, ಇಬ್ಬರಿಂದ ನಾಮಪತ್ರ ವಾಪಸ್‌

Published 23 ಏಪ್ರಿಲ್ 2024, 5:27 IST
Last Updated 23 ಏಪ್ರಿಲ್ 2024, 5:27 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಚುನಾವಣೆಯ ಕಣ ಸ್ಪಷ್ಟವಾಗಿದೆ. ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಒಟ್ಟು 20 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿದ್ದವು. ಇಬ್ಬರು ತಮ್ಮ ನಾಮಪತ್ರಗಳನ್ನು ಹಿಂಪಡೆಯುವುದರ ಮೂಲಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ರಾಷ್ಟ್ರೀಯ ಅಭಿವೃದ್ಧಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದ ಬಾಬು ಪಾಷಾ, ಪಕ್ಷೇತರ ಅಭ್ಯರ್ಥಿ ಅಬ್ದುಲ್‌ ರಜಾಕ್‌ ಅವರು ಚುನಾವಣಾ ಅಖಾಡದಿಂದ ದೂರವಾಗಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.

ಎಂಟು ಜನ ಅಭ್ಯರ್ಥಿಗಳು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಸೇರಿದರೆ, ಇನ್ನುಳಿದ ಹತ್ತು ಜನರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಚುನಾವಣೆಯ ವಿಶೇಷ.

ಬಿಜೆಪಿಯಿಂದ ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ, ಕಾಂಗ್ರೆಸ್‌ನಿಂದ ಸಚಿವ ಈಶ್ವರ ಬಿ. ಖಂಡ್ರೆಯವರ ಮಗ ಸಾಗರ್‌ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ. ಬಿಎಸ್ಪಿಯಿಂದ ಪುಟ್ಟರಾಜ್‌ ಹಣಮಂತ, ಬಿಬಿಪಿಯಿಂದ ಅಂಬಾದಾಸ್‌ ಸೋಪಾನವರ, ಆರ್‌ಪಿಐನಿಂದ ಮಹೇಶ ಗೋರನಾಳಕರ್‌, ಆಲ್‌ ಇಂಡಿಯಾ ಉಲಮ ಕಾಂಗ್ರೆಸ್‌ನಿಂದ ಮಹಮ್ಮದ್‌ ಶಫೀಕ್‌ ಉರ್‌ ರೆಹಮಾನ್‌, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಮೇಶ ಜೆ. ಚವಾಣ್‌, ಕ್ರಾಂತಿಕಾರಿ ಜೈ ಹಿಂದ್‌ ಸೇನಾದಿಂದ ರಾಮಚಂದ್ರ ನಾರಾಯಣ ಕಣದಲ್ಲಿದ್ದಾರೆ. ಮರಾಠ ಸಮುದಾಯದಿಂದ ಕಣಕ್ಕಿಳಿದಿರುವ ಡಾ. ದಿನಕರ್‌ ಮೋರೆ ಅವರು ಪಕ್ಷೇತರರಲ್ಲಿ ಪ್ರಮುಖರು.

18 ಅಭ್ಯರ್ಥಿಗಳಲ್ಲಿ ಒಬ್ಬರೂ ಮಹಿಳಾ ಅಭ್ಯರ್ಥಿಗಳಿಲ್ಲ. ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಪುರುಷರಷ್ಟೇ ಮಹಿಳಾ ಮತದಾರರು ಇದ್ದಾರೆ. ಆದರೆ, ಯಾರೊಬ್ಬರೂ ಸ್ಪರ್ಧೆಗೆ ಆಸಕ್ತಿ ತೋರಿಲ್ಲ.

ಕಾವೇರಲಿದೆ ಪ್ರಚಾರ: ಬೀದರ್‌ ಲೋಕಸಭೆ ಕ್ಷೇತ್ರದ ಅಂತಿಮ ಕಣ ಸ್ಪಷ್ಟವಾಗಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಏ.26ರಂದು ಮತದಾನ ನಡೆಯಲಿದ್ದು, ಏ. 24ರಂದು ಪ್ರಚಾರ ಕಾರ್ಯಕ್ಕೆ ತೆರೆ ಬೀಳಲಿದೆ. ಇದಾದ ನಂತರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಚಾರದ ಕಾವು ಏರಲಿದೆ.

ಈಗಾಗಲೇ ಆಯಾ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಮುಖಂಡರ ಪ್ರಚಾರದ ಸಮಯ ನಿಗದಿಯಾಗುತ್ತಿದ್ದು, ಅವರು ಬಂದ ನಂತರ ಚುನಾವಣೆ ಪ್ರಚಾರ ರಂಗೇರಲಿದೆ.

ಬಿಸಿಲೇ ಸವಾಲು: ಬೀದರ್‌ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಆದರೆ, ಬಿಸಿಲಿನ ತಾಪವೇನೂ ಕಡಿಮೆಯಾಗಿಲ್ಲ. ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಹೊರಗೆ ಹೋಗಲಾರದ ಪರಿಸ್ಥಿತಿ ಇದೆ. ಇದರ ಪರಿಣಾಮ ಪ್ರಚಾರದ ಮೇಲೂ ಆಗಿದೆ. ಹೀಗಾಗಿಯೇ ಅಭ್ಯರ್ಥಿಗಳು ಬೆಳಿಗ್ಗೆ ಹಾಗೂ ಸಂಜೆಯಿಂದ ರಾತ್ರಿವರೆಗೆ ಪ್ರಚಾರಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ. ಅವರ ಪ್ರಚಾರಕ್ಕೆ ಬಿಸಿಲೇ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT