ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಿಂದ ಮರಣವೇ ಮಹಾನವಮಿ ಮಹೋತ್ಸವ, ಒಂಬತ್ತು ಶರಣ, ಶರಣೆಯರ ಜೀವನ ಕುರಿತು ಉಪನ್ಯಾಸ

Last Updated 9 ಅಕ್ಟೋಬರ್ 2018, 14:53 IST
ಅಕ್ಷರ ಗಾತ್ರ

ಬೀದರ್‌: ನೀಲಮ್ಮನ ಬಳಗ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ಅಕ್ಟೋಬರ್‌ 10 ರಿಂದ 19ರ ವರೆಗೆ ನಗರದ ಶರಣ ಉದ್ಯಾನದಲ್ಲಿ ಮರಣವೇ ಮಹಾನವಮಿ ಮಹೋತ್ಸವ ನಡೆಯಲಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಹೇಳಿದ್ದಾರೆ.

ಪ್ರತಿದಿನ ಸಂಜೆ 6 ಗಂಟೆಗೆ ಜರುಗಲಿರುವ ಕಾರ್ಯಕ್ರಮದಲ್ಲಿ ದಿನಕ್ಕೊಬ್ಬರಂತೆ ಒಂಬತ್ತು ಶರಣ-ಶರಣೆಯರ ಜೀವನ–ಸಂದೇಶಗಳ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಹತ್ತನೆಯ ದಿನ ಸಾಯಂಕಾಲ 4ಕ್ಕೆ ‘ಕಲ್ಯಾಣ ಕ್ರಾಂತಿ ವಿಜಯೋತ್ಸವ’ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನ ಕ್ರಮವಾಗಿ ಹನ್ನೆರಡನೆಯ ಶತಮಾನದ ಗುಡ್ಡಾಪುರದ ದಾನಮ್ಮ-ಸೋಮನಾಥೇಶ್ವರ, ಮೇದಾರ ಕೇತಯ್ಯ-ಸಾತವ್ವೆ, ಅಮುಗಿ ದೇವಯ್ಯ-ರಾಯಮ್ಮ, ಹುತಾತ್ಮ ಹರಳಯ್ಯ-ಕಲ್ಯಾಣಮ್ಮ, ದಯಾಮಯಿ ದಸರಯ್ಯ-ವೀರಮ್ಮ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ, ಹಡಪದ ಅಪ್ಪಣ್ಣ-ಲಿಂಗಮ್ಮ, ಉರಿಲಿಂಗ ಪೆದ್ದಿ-ಕಾಳವ್ವೆ, ಮೋಳಿಗೆ ಮಾರಯ್ಯ-ಮಹಾದೇವಮ್ಮ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕುರಿತ ಅನುಭಾವಗಳು ಮೂಡಿ ಬರಲಿವೆ ಎಂದು ಹೇಳಿದ್ದಾರೆ.

ಹತ್ತು ದಿನಗಳ ಎಲ್ಲ ಕಾರ್ಯಕ್ರಮಗಳನ್ನು ನೀಲಮ್ಮನ ಬಳಗದ ಸದಸ್ಯೆಯರೇ ನಿರ್ವಹಿಸಲಿದ್ದಾರೆ. ಒಟ್ಟಾರೆ 108 ಗೃಹಿಣಿಯರನ್ನು ವೇದಿಕೆಗೆ ತರಲಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

ದಸರಾ ಹಬ್ಬವು ನಮಗೆ ಮಹತ್ವದ ನಾಡ ಹಬ್ಬವಾಗಿದ್ದು, 900 ವರ್ಷಗಳ ಹಿಂದೆ ಬಸವಾದಿ ಶರಣರು ಸಮಾಜದಲ್ಲಿನ ಎಲ್ಲ ರೀತಿಯ ತಾರತಮ್ಯ ಹೋಗಲಾಡಿಸಿ, ಮಾನವ ಘನತೆಯನ್ನು ಸಾರಲು ಕಲ್ಯಾಣ ಕ್ರಾಂತಿಗೈದರು. ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸಲು ಪ್ರಾಣ ಪಣಕಿಟ್ಟು ಹೋರಾಡಿದರು ಎಂದು ಹೇಳಿದ್ದಾರೆ.

ಸರ್ವ ಸಮಾನತೆಗಾಗಿ ಹರಳಯ್ಯನವರ ಮಗನಿಗೆ ಬ್ರಾಹ್ಮಣ ಮಧುವರಸರ ಮಗಳನ್ನು ಕೊಟ್ಟು ಮದುವೆ ಮಾಡಿಸಿದರು. ಸಂಪ್ರದಾಯದ ವಿರುದ್ಧ ಹೋರಾಡಿ ಬಲಿದಾನಗೈದರು. ಶರಣರು ಪ್ರಾಣಾರ್ಪಣೆಗೈದು ಮಾನವೀಯ ತತ್ವಗಳನ್ನು ವಿಶ್ವದಲ್ಲಿ ಸ್ಥಾಪಿಸಿದ್ದರ ಸ್ಮರಣೆಗಾಗಿ ಮರಣವೇ ಮಹಾನವಮಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನವು ಆಯಾ ನೀಲಮ್ಮನ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶರಣ ರೂಪಕಗಳು, ವಚನ ನೃತ್ಯಗಳು, ಸಮೂಹ ಗಾಯನ, ವಚನ ಭಜನೆ, ಜಾನಪದ ಕಲೆಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾಗತ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT