ಮಂಗಳವಾರ, ಮಾರ್ಚ್ 28, 2023
23 °C

ದೀಪಾವಳಿ ಸಂಭ್ರಮ ಹೆಚ್ಚಿಸುವ ಚಂಡು

ವೀರೇಶ್ ಎನ್.ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಈ ಭಾಗದ ಜನರು ದೀಪಾವಳಿಯನ್ನು ಬಹು ಸಂಭ್ರಮದಿಂದ ಆಚರಿಸುತ್ತಾರೆ. ಈಗಾಗಲೇ ಹಲವು ಮನೆಗಳಲ್ಲಿ ಹಬ್ಬದ ವಾತವಾರಣ ಮೂಡಿದ್ದು, ಬಿರುಸಿನಿಂದ ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಅಲಂಕಾರಕ್ಕಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳ ಜಮೀನುಗಳಲ್ಲಿ ಚೆಂಡು, ಸೆವಂತಿ ಹೂವು ಅರಳಿ ನಿಂತಿದ್ದು, ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.

ಜನರು ಮನೆಗಳಲ್ಲಿ ನರಕ ಚತುರ್ಥಿಯಂದು ವರದಾಶಂಕರ, ಸತ್ಯನಾರಾಯಣ ಕಥೆ ಹೇಳಿಸುವ ಮೂಲಕ ಲಕ್ಷ್ಮಿ ಪೂಜೆಗೆ ಹಲವು ಬಗೆಯ ಹೂವುಗಳನ್ನು ಸಮರ್ಪಿಸುತ್ತಾರೆ. ಮುಖ್ಯವಾಗಿ ಚೆಂಡು ಹೂ ಖರೀದಿಯು ವ್ಯಾಪಕವಾಗಿ ಕಂಡುಬರುತ್ತಿದೆ.

ವರ್ತಕರು ಲಕ್ಷ್ಮಿ ಪೂಜೆಯ ವೇಳೆ ತಮ್ಮ ಅಂಗಡಿಗಳನ್ನು ಚೆಂಡು ಹೂಗಳಿಂದ ಅಲಂಕರಿಸುತ್ತಾರೆ. ರೈತರು ಕೂಡ ತಮ್ಮ ಕೃಷಿಕ ಉಪಕರಣಗಳಿಗೂ ಇದೇ ಹೂವಿನಿಂದ ಸಿಂಗರಿಸುತ್ತಾರೆ.

ಪಟ್ಟಣದ ಗಾಂಧಿ ವೃತ್ತ, ನೆಹರು ವೃತ್ತ, ಬಸವರಾಜ ವೃತ್ತಗಳಲ್ಲಿ ನಿರ್ಣಾ, ಕುಡಂಬಲ್‌, ಬೆಳಕೇರಾ, ಉಡಬಾಳ್‌, ಮುಸ್ತರಿ, ಇಟಗಾ ಸೇರಿದಂತೆ ಇತರೆ ಗ್ರಾಮಗಳ ಪುಷ್ಪ ಕೃಷಿಕರು ತಮ್ಮ ತೋಟದಲ್ಲಿ ಬೆಳೆದ ಚೆಂಡು ಹೂವುಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಕೋವಿಡ್‌ ಕಾರಣದಿಂದ ಚೆಂಡು ಹೂವಿನ ಮಾರಾಟ ಕುಸಿದಿತ್ತು. ಇದರಿಂದ ಪುಷ್ಪ ಕೃಷಿಕರಿಗೆ ಸಾಕಷ್ಟು ಆರ್ಥಿಕ ನಷ್ಟವಾಗಿತ್ತು. ಈ ವರ್ಷದ ದೀಪಾವಳಿ ಸಂಭ್ರಮದಿಂದ ಕೂಡಿದ್ದು, ಸಹಜವಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ ಎನ್ನುತ್ತಾರ ರೈತ ಶಂಕರೆಪ್ಪ ವಳಖಿಂಡಿ.

ಮಾರುಕಟ್ಟೆಯಲ್ಲಿ ಚೆಂಡು ಹೂವು ₹150ಕ್ಕೆ ಒಂದು ಕೆ.ಜಿ, ಸೇವಂತಿ 10 ಮಾರು ಪುಷ್ಪಕ್ಕೆ ತಲಾ ₹50, ಕನಕಾಂಬರ 10 ಮಾರು ಹಾಗೂ ಮಲ್ಲಿಗೆ 8 ಮಾರಿಗೆ ₹100 ದರ ಇದೆ.

ಮನೆ, ಅಂಗಡಿಗಳಲ್ಲಿನ ದೇವಿ, ಲಕ್ಷ್ಮಿ ಮೂರ್ತಿ, ಕಳಶದ ಹಾರಕ್ಕೆ ₹200ರಿಂದ ₹300 ಹಾಗೂ ವಾಹನಗಳಿಗೆ ₹100ರಿಂದ ₹150 ವರೆಗೆ ಮಾರಾಟ ಮಾಡಲಾಗುತ್ತಿದೆ.

‘ಕೊವೀಡ್‌ ಸಂಕಷ್ಟದ ಮಧ್ಯೆ ಈ ಬಾರಿಯ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬಹುತೇಕ ವಸ್ತುಗಳ ದರಗಳು ಹೆಚ್ಚಾಗಿವೆ. ಹಲವು ತಿಂಗಳು ಕೆಲಸವಿಲ್ಲದೆ ಕಳೆದಿದ್ದರಿಂದ ಹಬ್ಬದ ಆಚರಣೆ ದುಬಾರಿಯಾಗಿದೆʼ ಎಂದು ಪಟ್ಟಣ ನಿವಾಸಿ ವಾಮನರಾವ್‌ ಹೇಳುತ್ತಾರೆ.

ಬೆಲೆ ಏರಿಕೆ ಬಿಸಿ‌

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂಧನ ದರದಿಂದಾಗಿ ಸಹಜವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಕಳೆದ ವಾರ ಒಂದು ಕೆ.ಜಿ ಚೆಂಡು ಹೂ ₹60ಗೆ ಮಾರಾಟ ಆಗುತ್ತಿತ್ತು. ಈಗ ಅದು ₹150ಕ್ಕೆ ಜಿಗಿದಿದೆ. ಸೇಬು, ಮೂಸಂಬಿ, ಕಿತ್ತಲೆ, ಬಾಳೆ ಹಣ್ಣುಗಳ ದರದಲ್ಲಿಯೂ ಶೇ 60ರಷ್ಟು ಹೆಚ್ಚಳವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು