ಮಂಗಳವಾರ, ಜೂನ್ 22, 2021
22 °C
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭರವಸೆ

ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯಕೀಯ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ತಾಲ್ಲೂಕು ಆಸ್ಪತ್ರೆಗಳಿಗೆ ಯಾವುದೇ ರೀತಿಯ ವೈದ್ಯ ಸಿಬ್ಬಂದಿ ಹಾಗೂ ವೈದ್ಯಕೀಯ ಸೌಲಭ್ಯದ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚನೆ ನೀಡಿದರು.

ಶನಿವಾರ ಜಿಲ್ಲೆಯ ಕಮಲನಗರ, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್ ಹಾಗೂ ಚಿಟಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ವೈದ್ಯರ ಜತೆ ಸಮಾಲೋಚನೆ ನಡೆಸಿದರು.

ಔರಾದ್ ಮತ್ತು ಕಮಲನಗರ ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್, ಒಬ್ಬರು ವಿಶೇಷ ತಜ್ಞ ವೈದ್ಯರು, ಕಮಲನಗರಕ್ಕೆ ಜಂಬೊ ಸಿಲಿಂಡರ್ ಅಗತ್ಯವಿದೆ ಎಂದು ಅಲ್ಲಿಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ ಸಚಿವರ ಗಮನಕ್ಕೆ ತಂದರು. ಸಚಿವರು ತಕ್ಷಣ ಸಂಬಂಧಿತರ ಜತೆ ಮಾತನಾಡಿ ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮಾಡಿಸಿದರು.

‘ಬಸವಲ್ಯಾಣ ತಾಲ್ಲೂಕು ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ವೈದ್ಯರು ಸೇರಿದಂತೆ ಆಮ್ಲಜನಕ, ಬೆಡ್ ಹಾಗೂ ಎಲ್ಲ ರೀತಿಯ ವ್ಯವಸ್ಥೆ ಇದೆ. ಹುಲಸೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ ಜಂಬೊ ಸಿಲಿಂಡರ್ ಅಗತ್ಯವಿದೆ. ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಆ್ಯಂಟಿ ವೈರಲ್ ಡ್ರಗ್ಸ್ ಕೂಡ ತುಸು ಪ್ರಮಾಣದಲ್ಲಿ ಬೇಕು’ ಎಂದು ಬಸವಕಲ್ಯಾಣ ತಾಲ್ಲೂಕು ರೋಗ್ಯಾಧಿಕಾರಿ ಡಾ. ವಿಷ್ಣುಕಾಂತ ಅವರು ಸಚಿವರಿಗೆ ಮಾಹಿತಿ ನೀಡಿದರು.

‘ಹುಮನಾಬಾದ್ ತಾಲ್ಲೂಕು ಆಸ್ಪತ್ರೆಯಲ್ಲಿ ಎಲ್ಲ ಅವಶ್ಯಕ ಸೌಲಭ್ಯಗಳಿವೆ. ಕೋವಿಡ್ ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ 4 ಶುಶ್ರೂಷಕರು ಮತ್ತು 9 ಗ್ರೂಪ್ ಡಿ ನೌಕರರ ಅವಶ್ಯಕತೆ ಇದೆ’ ಎಂದು ಹುಮಾನಾಬಾದ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ತಿಳಿಸಿದರು.

‘ಭಾಲ್ಕಿ ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಇದೆ. ಆಮ್ಲಜನಕ ಕೊರತೆ ಇಲ್ಲ. ವೈದ್ಯರ ಕೊರತೆ ಇಲ್ಲ. ಆಸ್ಪತ್ರೆಗೆ ಸ್ಯಾನಿಟೈಜರ್ ಮತ್ತು ಎನ್ 95 ಮಾಸ್ಕ್‌ಗಳ ಅವಶ್ಯಕತೆ ಇದೆ’ ಎಂದು ಭಾಲ್ಕಿ ತಾಲ್ಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಬ್ದುಲ್ ಖಾದರ್ ಮಾಹಿತಿ ನೀಡಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಮತ್ತು ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಜಿಲ್ಲಾ ಆರೋಗ್ಯಾಧಿಕಾರಿ ವಿ.ಜಿ. ರೆಡ್ಡಿ ಅವರಿಗೆ ಸೂಚಿಸಿದರು.

ಚಿಟಗುಪ್ಪ ಹಾಗೂ ರಾಜೇಶ್ವರ ಆಸ್ಪತ್ರೆಗೆ ತಮ್ಮ ಅನುದಾನದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.