ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ತಿಂಗಳಿಂದ ಪಾವತಿಯಾಗದ ಸಾದಿಲ್ವಾರ: ಸ್ವಂತ ಹಣ ಪಾವತಿಸುತ್ತಿರುವ ಮುಖ್ಯಶಿಕ್ಷಕ

Published 24 ನವೆಂಬರ್ 2023, 6:25 IST
Last Updated 24 ನವೆಂಬರ್ 2023, 6:25 IST
ಅಕ್ಷರ ಗಾತ್ರ

ಬೀದರ್‌: ಮಧ್ಯಾಹ್ನದ ಬಿಸಿಯೂಟದ ‘ಸಾದಿಲ್ವಾರ’ಗೆ (ತರಕಾರಿ, ಸಕ್ಕರೆ, ಮೊಟ್ಟೆ) ವೈಯಕ್ತಿಕವಾಗಿ ಹಣ ಕೊಡುತ್ತಿರುವ ಶಾಲೆಯ ಮುಖ್ಯಶಿಕ್ಷಕರಿಗೆ ಕಳೆದ ಎಂಟು ತಿಂಗಳಿಂದ ಬಿಲ್‌ ಮರು ಪಾವತಿಯಾಗಿಲ್ಲ. ಇದರಿಂದ ಅವರು ತೊಂದರೆ ಎದುರಿಸುತ್ತಿದ್ದಾರೆ.

ಬೀದರ್‌ ತಾಲ್ಲೂಕಿನಲ್ಲಿ ಒಟ್ಟು 450 ಶಾಲೆಗಳಿವೆ. ಸರ್ಕಾರಿ, ಅನುದಾನ ಸಹಿತ, ಪ್ರೌಢಶಾಲೆಗಳು ಇದರಲ್ಲಿ ಸೇರಿವೆ. ಈ ಪೈಕಿ 294 ಕಡೆಗಳಲ್ಲಿ ಅಡುಗೆ ಕೇಂದ್ರಗಳಿವೆ. ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಪೋಷಣ್‌ ಅಭಿಯಾನದಡಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ರೇಷನ್‌, ಹಾಲಿನ ಪುಡಿ ನೇರವಾಗಿ ಸರ್ಕಾರದಿಂದ ಶಾಲೆಗಳಿಗೆ ರವಾನೆಯಾಗುತ್ತದೆ. ಆದರೆ, ತರಕಾರಿ, ಮೊಟ್ಟೆ, ಸಕ್ಕರೆ ಸೇರಿದಂತೆ ಇತರೆ ವೆಚ್ಚಗಳನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರೇ ಭರಿಸುತ್ತಾರೆ. ಆದರೆ, ಅವರಿಗೆ ಸಕಾಲಕ್ಕೆ ಹಣ ಮರು ಪಾವತಿ ಮಾಡದ ಕಾರಣ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಇದುವರೆಗೆ ಹಣವೇ ಮರು ಪಾವತಿ ಮಾಡಿಲ್ಲ. ಮುಖ್ಯಶಿಕ್ಷಕರಿಗೆ ಕುಟುಂಬದ ಜವಾಬ್ದಾರಿ, ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ, ಬ್ಯಾಂಕ್‌ ಸಾಲ ಮರು ಪಾವತಿ ಸೇರಿದಂತೆ ಇತರೆ ಖರ್ಚಿಗೆಲ್ಲ ಹಣ ಬೇಕಾಗುತ್ತದೆ. ಆಯಾ ತಿಂಗಳು ಹಣ ಮರು ಪಾವತಿ ಮಾಡಲಾಗುತ್ತದೆ ಎಂಬ ಭರವಸೆಯೊಂದಿಗೆ ಅವರು ಅವರ ಜೇಬಿನಿಂದಲೇ ಹಣ ಭರಿಸುತ್ತಿದ್ದಾರೆ. ಆದರೆ, ಸಾಕಷ್ಟು ವಿಳಂಬ ಆಗುತ್ತಿರುವುದರಿಂದ ಅವರ ಮೇಲೆ ಹೊರೆ ಬೀಳುತ್ತಿದೆ. ಇತರೆ ಜವಾಬ್ದಾರಿಗಳನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಗೊತ್ತಾಗಿದೆ.

ಔರಾದ್‌ ತಾಲ್ಲೂಕು ಸೇರಿದಂತೆ ಜಿಲ್ಲೆಯ ಇತರೆ ಭಾಗಗಳಲ್ಲೂ ಬೀದರ್‌ ತಾಲ್ಲೂಕಿನಂತೆ ಶಾಲಾ ಮುಖ್ಯಶಿಕ್ಷಕರಿಗೆ ಹಣ ಪಾವತಿಯಾಗಿರಲಿಲ್ಲ. ಆದರೆ, ಇತ್ತೀಚೆಗೆ ಬೀದರ್‌ ಹೊರತುಪಡಿಸಿ ಅನ್ಯ ತಾಲ್ಲೂಕಿನ ಬಹುತೇಕ ಶಾಲಾ ಮುಖ್ಯಶಿಕ್ಷಕರಿಗೆ ಹಣ ಮರು ಪಾವತಿಯಾಗಿದೆ. ತಮಗೆ ಯಾವಾಗ ಮರು ಪಾವತಿ ಮಾಡಲಾಗುತ್ತದೆ ಎನ್ನುವುದು ಬೀದರ್ ತಾಲ್ಲೂಕಿನ ಶಾಲಾ ಮುಖ್ಯಶಿಕ್ಷಕರ ಪ್ರಶ್ನೆ.

‘ನಮಗೂ ನಮ್ಮದೇ ಆದ ಹಲವು ಜವಾಬ್ದಾರಿಗಳು ಇರುತ್ತವೆ. ಹೇಗೂ ಸರ್ಕಾರದಿಂದ ಹಣ ಬರುತ್ತದೆ ಎಂದು ವೈಯಕ್ತಿಕವಾಗಿ ನಾವೇ ಖರ್ಚು ಮಾಡುತ್ತಿದ್ದೇವೆ. ಹಿಂದೆ ಒಂದೆರೆಡು ತಿಂಗಳಲ್ಲಿ ಹಣ ಮರು ಪಾವತಿ ಮಾಡಲಾಗುತ್ತಿತ್ತು. ಈ ಸಲ ಎಂಟು ತಿಂಗಳಾದರೂ ಬಂದಿಲ್ಲ. ಅನೇಕ ಕಡೆ ಬಡ್ಡಿ ಮೇಲೆ ಸಾಲ ತಂದಿದ್ದು, ಸಮಯಕ್ಕೆ ಇಎಂಐ ಕಟ್ಟದೆ ತೊಂದರೆ ಉಂಟಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅನೇಕ ಜನ ಮುಖ್ಯಶಿಕ್ಷಕರು ‘ಪ್ರಜಾವಾಣಿ’ ಎದುರು ಗೋಳು ತೋಡಿಕೊಂಡಿದ್ದಾರೆ.

ತುಟ್ಟಿ ಭತ್ಯೆ, ಫೆಸ್ಟಿವಲ್‌ ಅಡ್ವಾನ್ಸ್‌ (ಎಫ್‌.ಎ) ಸಹ ಈ ಸಲ ಕೊಟ್ಟಿಲ್ಲ. ಆದರೆ, ಇದೇ ವೇಳೆ ರಾಜ್ಯದ ಅನ್ಯ ಜಿಲ್ಲೆಗಳಲ್ಲಿ ಪಾವತಿಸಲಾಗಿದೆ. ಇನ್ನು, ಗ್ಯಾಸ್‌ ಸಿಲಿಂಡರ್‌ ಕೂಡ ಸಮರ್ಪಕವಾಗಿ ಪೂರೈಸುತ್ತಿಲ್ಲ. ಹೆಚ್ಚಿಗೆ ಹಣ ಕೊಟ್ಟು ಹೊರಗೆ ಖರೀದಿಸಲಾಗುತ್ತಿದೆ. ಸರ್ಕಾರ ಏನೇನೋ ಕುಂಟು ನೆಪ ಹೇಳುತ್ತದೆ. ಆದರೆ, ಬಡ ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗೆ ನೆಪವೊಡ್ಡಿ ಮಧ್ಯಾಹ್ನದ ಬಿಸಿಯೂಟ ಕೊಡಲು ನಮಗೆ ಮನಸ್ಸಾಗುವುದಿಲ್ಲ. ಸರ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಂಡು ಎಂಟು ತಿಂಗಳ ಬಾಕಿ ಉಳಿಸಿಕೊಂಡಿರುವ ಹಣ ಮರು ಪಾವತಿಸಬೇಕು. ಪ್ರತಿ ತಿಂಗಳು ಖಾತೆಗೆ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಅಧಿಕಾರಿ ಏನು ಹೇಳ್ತಾರೆ?
‘ಸರ್ಕಾರದಿಂದ ಅನುದಾನ ಬಂದಿದೆ. ಹೋದ ತಿಂಗಳು ತಾಂತ್ರಿಕ ಕಾರಣದಿಂದ ಮುಖ್ಯಶಿಕ್ಷಕರಿಗೆ ಡಬಲ್‌ ಹಣ ಜಮೆ ಆಗಿತ್ತು. ಅದನ್ನು ಸರಿಪಡಿಸುವ ಕೆಲಸ ಪೂರ್ಣಗೊಂಡಿದೆ. ಇಷ್ಟರಲ್ಲೇ ಎಲ್ಲಾ ಶಾಲಾ ಮುಖ್ಯಶಿಕ್ಷಕರ ಖಾತೆಗೆ ಹಣ ಜಮೆ ಮಾಡಲಾಗುವುದು’ ಎಂದು ಮಧ್ಯಾಹ್ನದ ಬಿಸಿಯೂಟದ ಉಸ್ತುವಾರಿ ಜಾಕೀರ್‌ ಹುಸೇನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT