ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಮ್ಸ್‌ನ ಬಡ ಸ್ವಚ್ಛತಾ ಕಾರ್ಮಿಕರ ಹಣ ಲೂಟಿ ಹೊಡೆದವರಾರು: ಖಂಡ್ರೆ ಪ್ರಶ್ನೆ

Published 20 ಏಪ್ರಿಲ್ 2024, 14:25 IST
Last Updated 20 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ಬೀದರ್: ‘ಬೆಳೆ ವಿಮೆ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ ₹1,200 ಕೋಟಿ ಪರಿಹಾರ ನೀಡಲಾಗಿದೆ ಎಂದು ಸುಳ್ಳು ಹೇಳುವ  ಮೂಲಕ ಸಂಸದ ಭಗವಂತ ಖೂಬಾ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬೆಳೆ ವಿಮೆ ಯೋಜನೆಗೆ ಬೀದರ್ ಜಿಲ್ಲೆಯ ರೈತರು ಕಟ್ಟಿರುವ ಕಂತೆಷ್ಟು?. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಂತಿನ ಪಾಲು ಎಷ್ಟು?. ವಿಮಾ ಕಂಪನಿಗಳು ಒಟ್ಟು ಎಷ್ಟು ಹಣ ಸಂಗ್ರಹಿಸಿ, ಎಷ್ಟು ಪರಿಹಾರ ನೀಡಿವೆ ಎಂದು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ಈ ಯೋಜನೆ ಬೆಳೆ ವಿಮಾ ಕಂಪನಿಗಳ ಉದ್ಧಾರಕ್ಕಾಗಿ ಜಾರಿಗೆ ತರಲಾಗಿದೆ. ಬಡ ರೈತರ ಬದುಕು ಹಸನು ಮಾಡಲು ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭಗವಂತ ಖೂಬಾ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾರೆ. ಕೇಂದ್ರದಿಂದ ₹1 ಲಕ್ಷ ಕೋಟಿ ಅನುದಾನ ತಂದು ಬೀದರ್ ಕ್ಷೇತ್ರದ ಅಭಿವೃದ್ಧಿ ಮಾಡಿರುವುದಾಗಿ ಹೇಳಿದ್ದಾರೆ. ₹1 ಲಕ್ಷ ಕೋಟಿ ಅನುದಾನ ತಂದಿದ್ದರೆ, ಕೆಲಸ ಮಾಡಿದ್ದರೆ ಅದು ಕಣ್ಣಿಗೆ ಕಾಣಬೇಕಲ್ಲ’ ಎಂದರು.

‘ಡಿಸಿಸಿ ಬ್ಯಾಂಕ್ ಕುರಿತ ಸುಳ್ಳು’: ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಮೇಲಿನ ಐಟಿ ದಾಳಿ ನಮ್ಮ ಕರ್ಮಕಾಂಡ ಎಂದು ಖೂಬಾ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ಮಾಡಬೇಕಾದರೆ ಆರು ತಿಂಗಳು ಸಿದ್ಧತೆ ಮಾಡಿಕೊಳ್ಳುತ್ತದೆ. ಹಿಂದಿನ ಸಾಲಿನ ಬ್ಯಾಲೆನ್ಸ್ ಶೀಟ್, ಕಟ್ಟಿದ ತೆರಿಗೆ ಎಲ್ಲ ಪರಿಶೀಲಿಸಿ ನಂತರ ದಾಳಿ ಮಾಡುತ್ತದೆ. ಆದರೆ ನನ್ನ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮೂರು ತಿಂಗಳೂ ಆಗಿಲ್ಲ. ಈ ದಾಳಿಯ ಹಿಂದೆ ದೊಡ್ಡ ಷಡ್ಯಂತ್ರವಿದೆ’ ಎಂದು ಆರೋಪಿಸಿದರು.

‘ಬ್ರಿಮ್ಸ್ ಸ್ವಚ್ಛತಾ ಸಿಬ್ಬಂದಿ ಹಣ ಲೂಟಿ’: ಖೂಬಾ ತಮ್ಮದೇ ಪಕ್ಷದ ರಾಜ್ಯ ಸರ್ಕಾರ ಇದ್ದಾಗ, ತಮ್ಮ ಪ್ರಭಾವ ಬೀರಿ ತಮ್ಮ ಸೋದರನಿಗೆ ಬ್ರಿಮ್ಸ್ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯ ಹೊರಗುತ್ತಿಗೆ ಕೊಡಿಸಿದರು. ಬಡ ಹೊರಗುತ್ತಿಗೆ ದಲಿತ ಕಾರ್ಮಿಕರಿಗೆ ಕನಿಷ್ಠ ₹16 ಸಾವಿರ ಸಂಬಳ ಕೊಡಬೇಕು. ಆದರೆ, ಕೇವಲ ₹5-₹6 ಸಾವಿರ ಸಂಬಳ ನೀಡಿ ಬಡ ದಲಿತರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಕಾರ್ಮಿಕರ ಪಿ.ಎಫ್ ಕಟ್ಟಿಲ್ಲ. ಇ.ಎಸ್.ಐ ಹಣ ಕಟ್ಟಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳೆ ದೂರು ನೀಡಿವೆ. ಈ ದೂರಿನ ಆಧಾರದ ಮೇಲೆ ಕಲಬುರಗಿಯ ಸಹಾಯಕ ಕಾರ್ಮಿಕ ಆಯುಕ್ತರು ಇವರದೇ ರಾಜ್ಯ ಸರ್ಕಾರ ಇದ್ದಾಗ 2021ರಲ್ಲಿ ನೋಟಿಸ್ ನೀಡಿ, 1948ರ ಕನಿಷ್ಠ ವೇತನ ಕಾಯ್ದೆ ಉಲ್ಲಂಘನೆ ಆಗಿದೆ. 7 ದಿನಗಳ ಒಳಗಾಗಿ ಬಾಕಿ ಹಣ ₹38 ಲಕ್ಷ ಕಾರ್ಮಿಕರಿಗೆ ಪಾವತಿ ಮಾಡಿ ಎಂದು ಹೇಳಿದ್ದಾರೆ. ದಲಿತರ ಹಣ ಲೂಟಿ ಹೊಡೆದಿರುವ ಖೂಬಾರನ್ನು ಈ ಬಾರಿ ಎಲ್ಲ ದಲಿತ ಮತದಾರರೂ ತಿರಸ್ಕರಿಸುತ್ತಾರೆ ಎಂದರು.

‘ಹೈಕೋರ್ಟ್ ದಂಡದ ಸುಳ್ಳು’: ನನಗೆ ಹೈಕೋರ್ಟ್ ₹5 ಲಕ್ಷ ದಂಡ ಹಾಕಿತ್ತು ಎಂದು ಹೇಳಿದ್ದಾರೆ. ಸಂಸದರಾಗಿ ಶಾಸನಸಭೆ ಪ್ರವೇಶಿಸಿರುವ ಅವರಿಗೆ ಕಾನೂನಿನ ಅರಿವಿಲ್ಲ. ದಂಡ ಯಾವುದು ಕಾಸ್ಟ್ ಯಾವುದೂ ಎಂದೂ ಗೊತ್ತಿಲ್ಲ. ನನ್ನ ಮೇಲೆ ಒಂದು ಚುನಾವಣೆ ತಕರಾರು ಅರ್ಜಿ ಇತ್ತು. ನಾನು ಕೋವಿಡ್ ಕಾಲದಲ್ಲಿ ನ್ಯಾಯಾಲಯಕ್ಕೆ ಗೈರು ಹಾಜರಾದೆ ಎಂದು ನನಗೆ ₹5 ಲಕ್ಷ ಕಾಸ್ಟ್ ಹಾಕಿ ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲು ನ್ಯಾಯಾಲಯ ಹೇಳಿತ್ತು. ವಿಷಯ ಗೊತ್ತಿಲ್ಲದೆ ಜನರಿಗೆ ತಪ್ಪು ಮಾಹಿತಿ ಕೊಡುತ್ತಾರೆ’ ಎಂದು ಈಶ್ವರ ಖಂಡ್ರೆ ಹೇಳಿದರು.

‘₹60 ಲಕ್ಷ ಬಾಕಿ: ಖೂಬಾಗೆ ಗಣಿ ಇಲಾಖೆ ನೋಟಿಸ್’: ‘2021ರಲ್ಲಿ ಮತ್ತೆ ಇವರದೇ ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಸ್ವತಃ ಭಗವಂತ ಖೂಬಾಗೆ ನೋಟಿಸ್ ಕೊಡುತ್ತಾರೆ. ಇವರ ಗಣಿಗಾರಿಕೆ ಗುತ್ತಿಗೆಯ ಲೆಕ್ಕಪತ್ರ ಪರಿಶೀಲಿಸಿದ್ದು, ₹60.40 ಲಕ್ಷ ಬಾಕಿ ಇಟ್ಟುಕೊಂಡಿದ್ದು ಗೊತ್ತಾಗಿದೆ. ಹಣ ಕಟ್ಟಿ ಅಂತ ನೋಟಿಸ್ ಕೊಟ್ಟರೂ ಈವರೆಗೆ ಹಣ ಕಟ್ಟಿಲ್ಲ. ಸರ್ಕಾರಕ್ಕೆ ದ್ರೋಹ ಬಗೆಯುವ ಇವರು ಜನರಿಗೆ ಮೋಸ ಮಾಡದೆ ಇರುತ್ತಾರಾ?. ಇವರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?. ನಾನು ಅವರ ತರ ಸುಳ್ಳು ಹೇಳಲ್ಲ. ದಾಖಲೆ ಕೊಟ್ಟು ಮಾತಾಡ್ತೀನಿ’ ಎಂದು ದಾಖಲೆ ಪ್ರದರ್ಶಿಸಿದರು.

ಬಡವರ ಸೂರು ಕಸಿದುಕೊಂಡ ಖೂಬಾ: 2022ಕ್ಕೆ ಸರ್ವರಿಗೂ ಸೂರು ಎಂದು ಬಿಜೆಪಿ ಸರ್ಕಾರ ಬಡ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂತು. ನಾನು 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ, ಜಿಲ್ಲೆಯ ಸಾವಿರಾರು ಜನರಿಗೆ ಮನೆ ಮಂಜೂರು ಮಾಡಿಸಿದೆ. ಆದರೆ, ಬಿಜೆಪಿ ರಾಜ್ಯ ಸರ್ಕಾರ ಇದ್ದ ಕಾಲದಲ್ಲಿ, ಇವರೇ ಸಂಸತ್ ಸದಸ್ಯರಾಗಿದ್ದರು. ಒಂದೇ ಒಂದು ಮನೆಯನ್ನೂ ಬೀದರ್‌ನ ಬಡವರಿಗೆ ಕೊಡಲಿಲ್ಲ. ಅಮೃತ ಕೊಡಲು ಆಗದಿದ್ದರೆ ಬೇಡ, ವಿಷ ಕೊಡಬಾರದು ಅಂತಾರೆ ಹಿರಿಯರು. ಇವರು ಬಡವರಿಗೆ ಮನೆ ಕೊಡದಿದ್ದರೆ ಬೇಡ, ಹಿಂದಿನ ಸರ್ಕಾರ ಕೊಟ್ಟಿದ್ದ ಮನೆಯ ಕಂತಿನ ಹಣವನ್ನೂ ಕೊಡದಂತೆ ತಡೆದು ಬಡವರ ಮೇಲೆ ಕ್ರೌರ್ಯ ಮೆರೆದರು. ಖೂಬಾ ಬಡವರ ವಿರೋಧಿ. ಬಡಜನರ ಶಾಪ ಇವರಿಗೆ ತಟ್ಟದೆ ಬಿಡದು. ಈ ಬಾರಿ ಚುನಾವಣೆಯಲ್ಲಿ ಅದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಾಗರ್ ಖಂಡ್ರೆ ಪ್ರಚಂಡ ಬಹುಮತದಿಂದ ಜಯ ಸಾಧಿಸುತ್ತಾರೆ. ಗೆದ್ದ ಬಳಿಕ 24/7 ಕ್ಷೇತ್ರದ ಜನರ ಸೇವೆ ಮಾಡುತ್ತಾರೆ ಎಂದು ಭರವಸೆ ನೀಡಿದರು.

ಮೇ 7ರಂದು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. 10 ವರ್ಷ ಅಧಿಕಾರ ಕೊಟ್ಟರೂ, ಸಂಸದರಾಗಿಯಾಗಲಿ, ಕೇಂದ್ರ ಸಚಿವರಾಗಿಯಾಗಲಿ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿರುವ ಭಗವಂತ ಖೂಬಾ ಅವರಿಗೆ ವಿಶ್ರಾಂತಿ ಕೊಟ್ಟು ಮನೆಯಲ್ಲಿ ಕೂರಿಸಲು ಮತದಾರರು ತೀರ್ಮಾನಿಸಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

‘ನಾಗಮಾರಪಳ್ಳಿ ಸೋದರರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಐಟಿ ದಾಳಿ’
ಈ ಬಾರಿ ಕ್ಷೇತ್ರದಾದ್ಯಂತ ಖೂಬಾ ವಿರೋಧಿ ಅಲೆ ಇದೆ. ಸೋಲಿನ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ ನಾಗಮಾರಪಳ್ಳಿ ಸೋದರರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕೇಂದ್ರ ಬಿಜೆಪಿ ನಾಯಕರ ಎದುರು ಅಂಗಲಾಚಿ ಅವರೇ ಡಿಸಿಸಿ ಬ್ಯಾಂಕ್‌ ಮೇಲೆ ದಾಳಿ ಮಾಡಿಸಿದ್ದಾರೆ’ ಎಂದು ಆರೋಪಿಸಿದರು. ಹಿಂದಿನ ಅವಧಿಯಲ್ಲಿ ಆಗಿರುವ ಹಣ ದುರ್ಬಳಕೆ ಕುರಿತು ನಾನೇ ಸಹಕಾರ ಸಂಘದ ನಿಬಂಧಕರಿಗೆ ದೂರು ನೀಡಿದ್ದೇನೆ. ನನ್ನ ಸಹೋದರ ಅಧ್ಯಕ್ಷರಾಗಿ ಹಿಂದೆ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಂತದಲ್ಲಿ ಐ.ಟಿ. ದಾಳಿ ಮಾಡಿಸಿದರೆ ನಾಗಮಾರಪಳ್ಳಿ ಸೋದರರು ಹೆದರಿಕೊಂಡು ಬಿಜೆಪಿ ಸೇರುತ್ತಾರೆ ಎಂದೇ ಭಗವಂತ ಖೂಬಾ ಈ ನಾಟಕ ಆಡಿದ್ದಾರೆ. ಇದು ಅವರ ನಾಮಪತ್ರ ಸಲ್ಲಿಕೆ ದಿನ ನಾಗಮಾರಪಳ್ಳಿ ಸೋದರರ ಉಪಸ್ಥಿತಿಯೊಂದಿಗೆ ಸಾಬೀತಾಗಿದೆ ಎಂದರು.
‘ಖೂಬಾ ವಿರುದ್ಧ ಮಾನನಷ್ಟು ಮೊಕದ್ದಮೆ’
ಭಗವಂತ ಖೂಬಾ ದಲಿತರ ಕುರಿತು ಪ್ರಸ್ತಾಪ ಮಾಡಿದ್ದಾರೆ. ಈ ರೀತಿ ಸುಳ್ಳು ಹೇಳಿ ತೇಜೋ ವಧೆ ಮಾಡುತ್ತಿರುವ ಭಗವಂತ ಖೂಬಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಮತ್ತು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಈಶ್ವರ ಖಂಡ್ರೆ ಹೇಳಿದರು.
‘ಭೀಮಣ್ಣ ಖಂಡ್ರೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’
‘ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು ಏಕೀಕರಣದ ನೇತಾರರು ಶತಾಯುಷಿಯ ಬಗ್ಗೆ ಸುಳ್ಳು ಆರೋಪ ಮಾಡ್ತಾರೆ. ಆ ನೈತಿಕತೆ ಅವರಿಗಿಲ್ಲ. ನನ್ನ ತಂದೆ ಭೀಮಣ್ಣ ಖಂಡ್ರೆ ಅವರು ಸಾರಿಗೆ ಸಚಿವರಾಗಿದ್ದಾಗ ನಕಲಿ ಬಸ್ ಟಿಕೆಟ್ ಹಗರಣವನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಿದರು. ಸದನದ ಕಲಾಪದಲ್ಲಿ ಈ ಎಲ್ಲದರ ಬಗ್ಗೆಯೂ ಉಲ್ಲೇಖ ಇದೆ. ಹೋಗಿ ಅದನ್ನು ತೆಗೆಸಿ ನೋಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT