ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ‘ರಿಕ್ರಿಯೇಷನ್‌ ಸೆಂಟರ್‌’ಗೆ ಖೂಬಾ ವಿರೋಧ

ಅವಕಾಶ ನೀಡದಂತೆ ಸಚಿವ ಖಂಡ್ರೆಗೆ ಕೇಂದ್ರ ಸಚಿವ ಖೂಬಾ ಆಗ್ರಹ
Published 18 ಆಗಸ್ಟ್ 2023, 14:25 IST
Last Updated 18 ಆಗಸ್ಟ್ 2023, 14:25 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ‘ರಿಕ್ರಿಯೇಷನ್‌ ಸೆಂಟರ್‌/ಕಸಿನೋ’ (ವಿನೋದ ಕೂಟ) ಪ್ರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆಯವರು ಅವಕಾಶ ಕಲ್ಪಿಸಬಾರದು’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ನಾನು ಇದನ್ನು ವಿರೋಧಿಸುತ್ತ ಬಂದಿದ್ದೇನೆ. ಈ ಅವಧಿಯಲ್ಲಿದ್ದ ಎಲ್ಲಾ ಸಚಿವರಿಗೂ ಒತ್ತಾಯಿಸಿದ್ದೆ. ಅವರು ಕೂಡ ಸಹಕರಿಸಿದ್ದರು. ಒಬ್ಬರು ಕೆಲವು ದಿನ ಹಟ ಮಾಡಿ, ಅದು ಸಾಧ್ಯವಾಗದ ಕಾರಣ ಅನಂತರ ಕೈಬಿಟ್ಟರು. ಜಿಲ್ಲೆಯ ಗಡಿ ಭಾಗ ಅಥವಾ ರಾಷ್ಟ್ರೀಯ ಹೆದ್ದಾರಿ ಸಮೀಪ ರಿಕ್ರಿಯೇಷನ್‌ ಸೆಂಟರ್‌ ಆರಂಭಿಸಲು ತೆಲಂಗಾಣ, ಆಂಧ್ರಪ್ರದೇಶದ ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರು ಉಸ್ತುವಾರಿ ಸಚಿವರ ಮನೆ ಸುತ್ತ ಬ್ಯಾಗ್‌ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಲಭ್ಯವಾಗಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗಲೂ ನನ್ನನ್ನು ಈ ವಿಷಯದಲ್ಲಿ ಒಪ್ಪಿಸಲು ಆಂಧ್ರ ಮತ್ತು ತೆಲಂಗಾಣದ ಪ್ರಭಾವಿ ರಾಜಕಾರಣಿಗಳು ಒತ್ತಡ ಹೇರಿದ್ದರು. ಕೆಲವರಂತೂ ನವದೆಹಲಿಗೆ ಹೋಗಿ ನಮ್ಮ ಪಕ್ಷದ ಬೇರೆ ಬೇರೆ ನಾಯಕರಿಂದ ನನ್ನ ಮೇಲೆ ಒತ್ತಡ ಹಾಕಿಸಿದ್ದರು. ಆದರೆ, ನಾನು ಅದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ರಿಕ್ರಿಯೇಷನ್‌ ಸೆಂಟರ್‌ ಮಾಡಲೇಬೇಕು ಎಂದು ನಿರ್ಧರಿಸಿದರೆ ನಿಮ್ಮ ರಾಜ್ಯ ಅಥವಾ ಜಿಲ್ಲೆಯಲ್ಲಿಯೇ ಮಾಡಿಕೊಳ್ಳಿ, ಬೀದರ್‌ ಜಿಲ್ಲೆಯಲ್ಲಿ ಬೇಡವೆಂದು ಬೈದು ಕಳಿಸಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.

ಇದರ ಹೊರತಾಗಿಯೂ ನಮ್ಮ ಸರ್ಕಾರ ಇದ್ದಾಗ, ‘ನಮ್ಮ ಬಳಿ ಹೈಕೋರ್ಟ್‌ ಆದೇಶ ಪ್ರತಿ ಇದೆ. ನೀವ್ಯಾಕೆ ಅಡ್ಡಿಪಡಿಸುತ್ತಿದ್ದಿರಿ’ ಎಂದು ನನ್ನೊಂದಿಗೆ ವಾದಿಸಿದ್ದರು. ಅಷ್ಟಾದರೂ ನಮ್ಮ ಜಿಲ್ಲೆಯ ಜನರ ಸುರಕ್ಷತೆಗಾಗಿ ಪ್ರಾರಂಭಿಸಲು ಬಿಟ್ಟಿಲ್ಲ. ಊಟೋಪಚಾರಕ್ಕೆಂದು ಸರ್ಕಾರದಿಂದ ಅನುಮತಿ ಪಡೆದು, ಅನಂತರ ಎಲ್ಲಾ ರೀತಿಯ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ. ಒಂದು ಸಲ ನಮ್ಮ ಯುವಕರು ಅಲ್ಲಿಗೆ ಕಾಲಿಟ್ಟರೆ ಮೋಜು, ಮಸ್ತಿ ನೋಡಿ ಅವರ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಒಂದು ಸಲ ಯುವಕರು ರಿಕ್ರಿಯೇಷನ್‌ ಸೆಂಟರ್‌ ದಾಸರಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ ಮರೆತು ಅನಾಚಾರಕ್ಕಿಳಿಯುತ್ತಾರೆ. ಆಸ್ತಿ ಮಾರಾಟ ಮಾಡಿ ಸಾಲದ ಸುಳಿಗೆ ಸಿಲುಕಬಹುದು. ಜಿಲ್ಲೆಯ ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಕಾರಣಕ್ಕೂ ರಿಕ್ರಿಯೇಷನ್‌ ಸೆಂಟರ್‌ ಸ್ಥಾಪನೆಗೆ ಅವಕಾಶ ನೀಡಬಾರದು. ಇದಕ್ಕೆ ಯಾರು ಕೂಡ ಸಹಕರಿಸಬಾರದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT