ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು: ಸಚಿವ ಈಶ್ವರ ಖಂಡ್ರೆ

Published 2 ಮಾರ್ಚ್ 2024, 17:08 IST
Last Updated 2 ಮಾರ್ಚ್ 2024, 17:08 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕುಡಿಯುವ ನೀರಿಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಅವರು, ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಯಾವುದೇ ತಾಲ್ಲೂಕಿನಲ್ಲಿ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಔರಾದ್‌ ಮತ್ತು ಭಾಲ್ಕಿಯಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರಬಹುದು. ಜನರಿಗೆ 24 ತಾಸು ನೀರು ಕೊಡಬೇಕು. ನನ್ನ ಕ್ಷೇತ್ರದಲ್ಲಿ ಮೊನ್ನೆ ಹೆಣ್ಣುಮಕ್ಕಳು ಸೈಕಲ್ ಮೂಲಕ ಒಂದು ಕಿ.ಮೀ. ದೂರದಿಂದ ನೀರು ತರುತ್ತಿದ್ದೇವೆ ಎಂದು ಹೇಳಿದರು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಎಲ್ಲೂ ಕಂಡು ಬರಬಾರದು ಎಂದು ಸೂಚಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನಗರಸಭೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಜಾನುವಾರುಗಳಿಗೆ ಈ ಬೇಸಿಗೆಯಲ್ಲಿ ಮೇವಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. 

ಜನರಿಗೆ ಶುದ್ಧವಾದ ನೀರು ಕೊಡಬೇಕು. ಈ ಹಿಂದೆ ಕೆಲವು ಕಡೆ ಕಲುಷಿತ ನೀರು ಕುಡಿದು ದುರ್ಘಟನೆ ಆಗಿರುವುದನ್ನು ನೋಡುತ್ತೆವೆ. ಆ ತರಹದ ಯಾವುದೇ ಘಟನೆಗಳು ಜಿಲ್ಲೆಯಲ್ಲಿ ನಡೆಯಬಾರದು. ಮೊದಲ ಆದ್ಯತೆ ಕುಡಿಯುವ ನೀರಿಗೆ ಕೊಡಬೇಕು. ಯಾವುದೇ ದೂರುಗಳು ಬಂದರೆ ತಕ್ಷಣ ಭೇಟಿ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಸಹಾಯವಾಣಿ ತೆರೆದು ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿದರು.

ಬಿಸಿಲಿನ ತಾಪಮಾನ ಹೆಚ್ಚಾದರೆ ಮಾಹಿತಿ ನೀಡಬೇಕು. ಜನರಿಗೆ ಡಿ ಹೈಡ್ರೆಟ್ ಆಗದಂತೆ ಆಸ್ಪತ್ರೆಗಳಲ್ಲಿ ಒ.ಆರ್.ಎಸ್. ಪ್ಯಾಕೆಟ್‌ಗಳನ್ನು ಇಡಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ. ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ,  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸುರೇಖಾ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

7ರಂದು ಜಿಲ್ಲೆಗೆ ಮುಖ್ಯಮಂತ್ರಿ

‘ಮಾರ್ಚ್‌ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಭೇಟಿ ಕೊಡುತ್ತಿದ್ದಾರೆ. ‘ಗ್ಯಾರಂಟಿ’ ಯೋಜನೆಗಳ ಸಮಾವೇಶ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸುವರು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಆರ್ಥಿಕ ವರ್ಷ ಮುಗಿಯಲು ಬಂದಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೋದ ಸಲ ₹3 ಸಾವಿರ ಕೋಟಿ ಹಣ ನೀಡಲಾಗಿತ್ತು. ಈ ವರ್ಷ ₹5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ನೀರಾವರಿ, ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಕೆಲಸ ಮತ್ತು ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು ಎಲ್ಲರೂ ಹಗಲಿರುಳು ಶ್ರಮಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT