ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರದಲ್ಲಿ ಮಿಶ್ರ ಪ್ರತಿಕ್ರಿಯೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
Last Updated 9 ಜನವರಿ 2020, 10:48 IST
ಅಕ್ಷರ ಗಾತ್ರ

ಸುರಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ನಿರ್ಧಾರಗಳ ವಿರುದ್ಧ ಕಾರ್ಮಿಕರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ ಬಂದ್‍ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬಸ್ ಸಂಚಾರ ಎಂದಿನಂತೆ ಇತ್ತು. ಆಟೊ, ಖಾಸಗಿ ವಾಹನಗಳು ಸಂಚರಿಸಿದವು. ಪ್ರತಿಭಟನಾ ಸಮಯದಲ್ಲಿ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ನಂತರ ತೆರೆದುಕೊಂಡವು.

ಎನ್‍ಆರ್‌ಸಿ, ಸಿಎಎ, ಎನ್‍ಪಿಆರ್‌ಗಳು ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಬೇಕು. ಆಹಾರ ತಯಾರಿಕೆಯನ್ನು ಖಾಸಗಿ ಕಂಪನಿಗೆ ಕೊಡುವುದಕ್ಕೆ ವಿರೋಧ, ರೈತರ ಆತ್ಮಹತ್ಯೆಗಳನ್ನು ತಡೆಯಲು ಡಾ. ಸ್ವಾಮಿನಾಥ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸಾಮೂಹಿಕ ಸಂಘಟನೆಗಳ ವೇದಿಕೆ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿವೃತ್ತದಲ್ಲಿ ಜಮಾವಣೆಗೊಂಡು ಸಭೆ ನಡೆಸಿದರು.

ಕೇಂದ್ರದ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಕಾನೂನುಗಳ ತಿದ್ದುಪಡಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮತ್ತು ಕಾರ್ಮಿಕರ ಮೇಲೆ ಮಾರಕವಾದ ನೀತಿಗಳನ್ನು ಹೇರಲಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಯುವಕರಿಗೆ ಉದ್ಯೋಗ ಒದಗಿಸುತ್ತಿಲ್ಲ’ ಎಂದು ದೂರಿದರು.

ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಪೌರತ್ವ ಕಾನೂನು ಮುಸ್ಲಿಂ ವಿರೋಧಿ ಅಷ್ಟೆಯಲ್ಲ. ಇತರ ಜನಾಂಗದವರು ಕಷ್ಟ ಅನುಭವಿಸಬೇಕಾಗುತ್ತದೆ. ಸಿಎಎ, ಎನ್‍ಆರ್‌ಸಿ, ಎನ್‍ಪಿಆರ್ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕಾರ್ಯಕರ್ತೆರಿಗೆ ಶೀಘ್ರವೇ ಕನಿಷ್ಠ ವೇತನ ನಿಗದಿಗೊಳಿಸಬೇಕು. ಡಾ.ಸ್ವಾಮಿನಾಥ ವರದಿ ಜಾರಿ ಮಾಡಬೇಕು. ಇಲ್ಲದಿದ್ದರೆ ದೇಶದಲ್ಲಿ ಉಗ್ರ ಹೋರಾಟಗಳು ಅನಿವಾರ್ಯವಾಗುತ್ತವೆ ಎಂದು ಮುಖಂಡರು ಎಚ್ಚರಿಸಿದರು.

ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಯಲ್ಲಪ್ಪ ಚಿನ್ನಾಕರ, ಸುರೇಶ ಕುಲಕರ್ಣಿ, ಉಸ್ತಾದ್ ವಜಾಹತ್ ಹುಸೇನ್, ವೆಂಕೋಬ ದೊರೆ, ರಮೇಶ ದೊರೆ ಆಲ್ದಾಳ, ವೆಂಕಟೇಶ ಹೊಸಮನಿ, ಅಹ್ಮದ್ ಪಠಾಣ, ಭೀ ರಾಯ ಸಿಂಧಗಿರಿ, ವೆಂಕಟೇಶ ಬೇಟೆಗಾರ, ಇಕ್ಬಾಲ್ ಒಂಟಿ, ನಾಗಣ್ಣ ಕಲ್ಲದೇವನಹಳ್ಳಿ, ಹಣಮಂತ ಕಟ್ಟಿಮನಿ, ಮಾನಪ್ಪ ಕಿರದಳ್ಳಿ, ಅಬ್ದುಲ್ ಗಫಾರ್ ನಗನೂರಿ, ತಿಪ್ಪಣ್ಣ ಶೆಳ್ಳಗಿ, ಅಬೀದ್ ಹುಸೇನ್, ರಫೀಕ್ ಸುರಪುರ, ಶಕೀಲ ಅಹಮದ್, ಅಂಗನವಾಡಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT