ಶನಿವಾರ, ನವೆಂಬರ್ 28, 2020
26 °C
ಕೊನೆಯ ಕ್ಷಣದಲ್ಲಿ ಬಿಜೆಪಿ, ಕಾಂಗ್ರೆಸ್ ಮೆರವಣಿಗೆ ರದ್ದು

ಪ್ರತ್ಯೇಕ ಸ್ಥಳಗಳಲ್ಲಿ ಗುಡುಗಿದ ಸಂಸದ, ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಜನ ನವೆಂಬರ್ 5ರಂದು ನಗರದಲ್ಲಿ ಮದಗಜಗಳ ಕಾದಾಟ ನಡೆಯಲಿದೆ ಎಂದೇ ಭಾವಿಸಿದ್ದರು. ಕಾಂಗ್ರೆಸ್‌ನ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಸಂಸದ ಭಗವಂತ ಖೂಬಾ ಅವರ ಆರೋಪ ಹಾಗೂ ಪ್ರತ್ಯಾರೋಪಗಳು ತಾರಕಕ್ಕೇರುತ್ತಿದ್ದಂತೆಯೇ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವುದು ಜಿಲ್ಲಾಡಳಿತಕ್ಕೂ ತಲೆ ನೋವಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮೆರವಣಿಗೆ ರದ್ದಾಗಿ ಇಬ್ಬರೂ ಮುಖಂಡರು ಪ್ರತ್ಯೇಕ ಸ್ಥಳಗಳಲ್ಲಿ ಸಭೆ ನಡೆಸಿ ಪರಸ್ಪರರ ವಿರುದ್ಧ ಏಕವಚನ ಪ್ರಯೋಗಿಸಿ ಗುಡುಗಿದರು.

ಜಿಲ್ಲಾಡಳಿತ ಎರಡೂ ಪಕ್ಷಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ನೀಡಲಿಲ್ಲ. ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರು ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ನಗರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಪ್ರಮುಖ ವೃತ್ತ ಹಾಗೂ ಆಯಕಟ್ಟಿನ ಪ್ರದೇಶದಲ್ಲಿ ಜಿಲ್ಲಾ ಸಶಸ್ತ್ರಪಡೆ ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬಸವಕಲ್ಯಾಣ, ಹುಮನಾಬಾದ್‌, ಭಾಲ್ಕಿ ಹಾಗೂ ಬೀದರ್‌ ತಾಲ್ಲೂಕಿನ ಎರಡೂ ಪಕ್ಷಗಳ ನೂರಾರು ಕಾರ್ಯಕರ್ತರು ಬೆಳಿಗ್ಗೆಯೇ ನಗರಕ್ಕೆ ಬಂದಿದ್ದರು. ಎರಡೂ ಸಭೆಗಳು ಸುದೀರ್ಘವಾಗಿ ನಡೆದ ಕಾರಣ ಕಾರ್ಯಕರ್ತರು ಆಯಾಸಗೊಂಡಿದ್ದರು. ಮಧ್ಯಾಹ್ನ ಸಭೆ ಮುಗಿಯುತ್ತಿದ್ದಂತೆಯೇ ನೇರವಾಗಿ ತಮ್ಮ ಊರಿಗೆ ತೆರಳಿದರು.

ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರೆ, ಕಾಂಗ್ರೆಸ್‌ನ ಮುಖಂಡರು ಬಿಜೆಪಿ ವಿರುದ್ಧ ಹರಿಹಾಯ್ದರು.

ಖಂಡ್ರೆ ಕಳ್ಳ, ಸುಳ್ಳ: ಖೂಬಾ ಟೀಕೆ

‘ಶಾಸಕ ಈಶ್ವರ ಖಂಡ್ರೆ ಆಹ್ವಾನ ನೀಡಿದ ಸ್ಥಳದಲ್ಲೇ ಬಹಿರಂಗ ಚರ್ಚೆಗೆ ಬಂದಿದ್ದೇನೆ. ಆದರೆ, ಅವನೇ ಚರ್ಚೆಗೆ ಬಂದಿಲ್ಲ. ಅವನೊಬ್ಬ ಕಳ್ಳ, ಸುಳ್ಳ, ಮೋಸಗಾರ, ಬದ್ಮಾಸ್. ರಾಮನ ಪಕ್ಷದ ಕಾರ್ಯಕರ್ತರನ್ನು ನೋಡಿ ಚಿಕ್ಕ ಬೀದಿಯಲ್ಲಿ ಓಡಿ ಹೋಗಿದ್ದಾನೆ’ ಎಂದು ಸಂಸದ ಭಗವಂತ ಖೂಬಾ ಜರಿದರು.

‘ಕಾಂಗ್ರೆಸ್‌ನವರು ಬಹಳ ಶ್ಯಾಣ್ಯಾ ಇರ್ತಾರ. ಮೊದಲು ಕಲ್ಲು ಒಗಿತಾರ. ನಮ್ಮಂಥ ಕಲ್ಲು ಬಿತ್ತು ಅಂದರ ಪತಲಿಗಲ್ಲಿಯಲ್ಲಿ ಓಡಿ ಹೋಗತಾರ’ ಎಂದು ತಮ್ಮದೇ ಶೈಲಿಯಲ್ಲಿ ಟೀಕಿಸಿದರು.

‘ಕಾಂಗ್ರೆಸ್‌ನ ಜಿಲ್ಲಾ ಪಂಚಾಯಿತಿ ಸದಸ್ಯರೇ ಖಂಡ್ರೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದರೂ ಖಂಡ್ರೆ ಮಾತು ಯಾರೂ ಕೇಳುತ್ತಿಲ್ಲ. ಭಾಲ್ಕಿ ಜನ ನಾಲಾಯಕ್ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಭಾಲ್ಕಿ ಕ್ಷೇತ್ರದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸುಲಿಗೆ ನಡೆಸಲು ಅವಕಾಶ ಕೊಡುವುದಿಲ್ಲ’ ಎಂದು ಗುಡುಗಿದರು.

‘ಖಂಡ್ರೆ ಪರಿವಾರದವರು ಭಾಲ್ಕಿ ಮಠವನ್ನು ಬೆಳೆಸಲಿಲ್ಲ. ತಾವೇ ಬೆಳೆದರು. ಚೆನ್ನಬಸವ ಪಟ್ಟದ್ದೇವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಆದರೆ, ಇದು ಯಾರ ಮಾಲೀಕತ್ವದಲ್ಲಿದೆ ಎನ್ನವುದು ಎಲ್ಲರಿಗೂ ಗೊತ್ತಿದೆ. ಎಂಜನಿಯರಿಂಗ್‌ ಕಾಲೇಜಿಗೆ ಚೆನ್ನಬಸವ ಪಟ್ಟದ್ದೇವರ ಹೆಸರು ಇಡಬೇಕಿತ್ತು. ಆದರೆ, ಭೀಮಣ್ಣ ಖಂಡ್ರೆ ಹೆಸರಿಟ್ಟರು’ ಎಂದು ಟೀಕಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ‘ಈಗಿನದ್ದು ಮಹಾತ್ಮ ಗಾಂಧಿ ಕಾಂಗ್ರೆಸ್‌ ಅಲ್ಲ. ಡುಪ್ಲಿಕೇಟ್‌ ಕಾಂಗ್ರೆಸ್. ಕಾಂಗ್ರೆಸ್‌ನವರು ಗಂಟು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಖಂಡ್ರೆ ಅವರು ಗಣೇಶ ಮೈದಾನಕ್ಕೆ ಬರುವಂತೆ ಸಂಸದರಿಗೆ ಆಹ್ವಾನ ನೀಡಿದ್ದರು. ಆದರೆ, ಅವರೇ ಬಂದಿಲ್ಲ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿದರು. ಶಿವರಾಜ ಗಂದಗೆ,ರೇವಣಸಿದ್ದಪ್ಪ ಜಲಾದೆ, ರೌಫೋದ್ದಿನ್‌ ಕಚೇರಿವಾಲೆ, ಪದ್ಮಾಕರ್ ಪಾಟೀಲ, ನಂದಕಿಶೋರ ವರ್ಮಾ, ಗುಂಡು ರೆಡ್ಡಿ, ಶಕುಂತಲಾ ಬೆಲ್ದಾಳೆ, ಅರಿಹಂತ ಸಾವಳೆ, ಶರಣು ಸಲಗಾರ ಇದ್ದರು.

ಖೂಬಾ ನಂಬರ್ ಒನ್ ರಣಹೇಡಿ: ಖಂಡ್ರೆ ವಾಗ್ದಾಳಿ

‘ಸಂಸದ ಭಗವಂತ ಖೂಬಾ ಕರೆ ನೀಡಿದ್ದಕ್ಕೆ ಬಹಿರಂಗ ಸಭೆ ಆಯೋಜಿಸಿದ್ದೇನೆ. ರಾಜ್ಯದ ನಂಬರ್‌ 1 ರಣಹೇಡಿ ಖೂಬಾ ಇಲ್ಲಿಗೆ ಬಂದಿಲ್ಲ. ಇಲ್ಲಿಗೆ ಬರುವ ಧೈರ್ಯವೂ ಇಲ್ಲ. ಬಿಜೆಪಿಯ ರಾಜ್ಯದ 25 ಸಂಸದರಲ್ಲಿ ಇವರೊಬ್ಬ ಪುಕ್ಕಲು ಸಂಸದ. ಗುತ್ತಿಗೆ ಕಾರ್ಮಿಕನಂತೆ ಮೋದಿ ಮುಂದೆ ನಿಂತುಕೊಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಬಹಿರಂಗ ಚರ್ಚೆಗೆ ಬಾರದ ರಣ ಹೇಡಿಗಳಾದ ಖೂಬಾ ಹಾಗೂ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಅವರಿಗೆ ಕ್ಷೇತ್ರದ ಜನ ಬಳೆ ಕೊಟ್ಟು ಕಳಿಸಬೇಕು’ ಎಂದರು.

‘ಬಡವರಿಗೆ ಮಂಜೂರಾದ ಮನೆಗಳನ್ನು ಮರಳಿ ಪಡೆದು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಒಂದು ನಯಾಪೈಸೆ ಅಭಿವೃದ್ಧಿ ಕೆಲಸ ಆಗಿಲ್ಲ. ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಮಹಾಪೂರ ಬಂದರೂ ಕೇಂದ್ರದಿಂದ ಅನುದಾನ ತರುವ ಕೆಲಸ ಮಾಡಿಲ್ಲ. ಮಾನ, ಮರ್ಯಾದೆ ಇಲ್ಲದವರು ಏನೇನೋ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಬೀದರ್‌ಗೆ ಸಿಪೆಟ್‌ ಮಂಜೂರಾಗಿ ವಾಪಸ್‌ ಹೋಗಿದೆ. ಅನುದಾನ ತರುವ ತಾಕತ್ತಿಲ್ಲ. 18 ತಿಂಗಳಿಂದ ಶಾಸಕರ ನಿಧಿಗೆ ಒಂದು ನಯಾಪೈಸೆ ಕೊಟ್ಟಿಲ್ಲ. ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಮಾತನಾಡಲು ಬಾಯಿ ಇಲ್ಲ. ಗುಂಡಿಗೆ ಇಲ್ಲದ ಸಂಸದರು ನಮ್ಮ ಮಧ್ಯೆ ಇದ್ದಾರೆ’ ಎಂದು ಲೇವಡಿ ಮಾಡಿದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶ ಕರ್ನಾಟಕದಲ್ಲಿ ಸೇರ್ಪಡೆಯಾಗುವ ಹೋರಾಟದಲ್ಲಿ ಭೀಮಣ್ಣ ಖಂಡ್ರೆ ಅವರ ಪಾತ್ರ ಮಹತ್ವದ್ದಾಗಿದೆ. ಭೀಮಣ್ಣ ಖಂಡ್ರೆ ಸೇವೆ ಮಾಡಿದಷ್ಟು ಖೂಬಾ ಅವರಿಗೆ ವಯಸ್ಸಿಲ್ಲ. ನಾಡಿನ ಅಭಿವೃದ್ಧಿಗೆ ದುಡಿದಿರುವ ಭೀಮಣ್ಣ ಖಂಡ್ರೆ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ’ ಎಂದು ಹೇಳಿದರು.

ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಅಮೃತ ಚಿಮಕೋಡೆ ಇದ್ದಾರೆ.

ಕಾಂಗ್ರೆಸ್‌ಗೆ ನಿರಾಕರಿಸಿ ಬಿಜೆಪಿಗೆ ಮೈದಾನ

ಬೀದರ್‌: ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗಣೇಶ ಮೈದಾನದಲ್ಲಿ ನಗರದ ಕಾರ್ಯಕರ್ತರ ಸಭೆ ನಡೆಸಲು ಮೊದಲು ಕಾಂಗ್ರೆಸ್‌ ಅನುಮತಿ ಕೇಳಿತ್ತು. ಆದರೆ, ಜಿಲ್ಲಾಡಳಿತ ಕಾಂಗ್ರೆಸ್‌ಗೆ ಅನುಮತಿ ಕೊಡಲು ನಿರಾಕರಿಸಿ ಬಿಜೆಪಿ ನೀಡಿತು.

ಗಣೇಶ ಮೈದಾನದಲ್ಲಿ ಸಭೆ ನಡೆಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ಅನುಮತಿ ಕೇಳಿದ್ದವು. ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಬ್ಬರಿಗೂ ಪತ್ರ ಬರೆದು ಒಪ್ಪಿಗೆ ಕೇಳಿದ್ದರು. ಪೊಲೀಸರು ಕೋವಿಡ್‌ ಹಾಗೂ ಕಾನೂನು ಸುವ್ಯವಸ್ಥೆಯ ಕಾರಣ ಹೇಳಿ ಕಾಂಗ್ರೆಸ್‌ ಸಭೆಗೆ ಒಪ್ಪಿಗೆ ನೀಡಲಿಲ್ಲ. ಆದರೆ, ಬುಧವಾರ ಕೆಲವು ಷರತ್ತು ವಿಧಿಸಿ ಬಿಜೆಪಿಗೆ ಸಭೆ ನಡೆಸಲು ಅನುಮತಿ ಕೊಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ತಟಸ್ಥ ನಿಲುವು ತಳೆದಿದ್ದರು. ನಗರಸಭೆಯ ಆಯುಕ್ತರು ಎರಡೂ ಪಕ್ಷಗಳಿಗೆ ಅನುಮತಿ ನೀಡಿರಲಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಬಸವಕಲ್ಯಾಣ ಟಿಕೆಟ್‌ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ

ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳು ಶಕ್ತಿ ಪ್ರದರ್ಶನ ನಡೆಸಲು ರಾಜಕೀಯ ಸಭೆಗೆ ಖಾಸಗಿ ವಾಹನಗಳಲ್ಲಿ ನೂರಾರು ಜನರನ್ನು ಕರೆ ತಂದಿದ್ದರು.

ತಮ್ಮ ತಮ್ಮ ಪಕ್ಷಗಳ ಧ್ವಜ ಹಿಡಿದು ಮುಖಂಡರ ಜೈಕಾರ ಮಾಡುತ್ತ, ಘೋಷಣೆಗಳನ್ನು ಕೂಗುತ್ತ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದರು. ಎರಡೂ ಪಕ್ಷಗಳು ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿದ್ದವು.‌
ರಾಜಕೀಯ ಪಕ್ಷಗಳ ಸಭೆಯಲ್ಲಿ ಬಹಳಷ್ಟು ಜನ ಮಾಸ್ಕ್‌ ಧರಿಸಿರಲಿಲ್ಲ. ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಸಂಸದ ಭಗವಂತ ಖೂಬಾ ಅವರಿಗೆ ಪೊಲೀಸರು ವಿಶೇಷ ಭದ್ರತೆ ಒದಗಿಸಿದ್ದರು. ಗಣೇಶ ಮೈದಾನದಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.