ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಂಥ ಬಡಪಾಯಿಗಳಿಗೆ ಗಂಡಾಂತರ ತರಬೇಡಿ ಎಂದಿದ್ದ ನಾರಾಯಣರಾವ್‌

Last Updated 24 ಸೆಪ್ಟೆಂಬರ್ 2020, 11:45 IST
ಅಕ್ಷರ ಗಾತ್ರ

ಬೀದರ್‌: ‘ಕೈ ಮುಗಿಯುತ್ತೇನೆ ಮತ್ತೆ ಚುನಾವಣೆಗೆ ಹೋಗಬೇಡಿ. ಬಲಾಢ್ಯ ಸಮುದಾಯ ಹಾಗೂ ಸ್ಥಿತಿವಂತರನ್ನು ಎದುರಿಸಿ ಚುನಾವಣೆಯ‌‌‌‌‌ಲ್ಲಿ ಗೆಲ್ಲಲು ಸಾಧ್ಯವಾಗದು. ನಿಮ್ಮ ಅಧಿಕಾರ ದಾಹದ ಕಾರಣ ನಮ್ಮಂಥ ಬಡಪಾಯಿ ರಾಜಕಾರಣಿಗಳಿಗೆ ಗಂಡಾಂತರ ತಂದೊಡ್ಡಬೇಡಿ. ಬಹಳ ವರ್ಷಗಳ ನಂತರ ಶಾಸಕನಾಗುವ ಕನಸು ನನಸಾಗಿದೆ. ಐದು ವರ್ಷ ಪೂರ್ಣಗೊಳಿಸಲು ಬಿಡಿ. ಹೇಗಾದರೂ ಮಾಡಿ ಐದು ವರ್ಷ ಸರ್ಕಾರ ಉಳಿಸಿಕೊಳ್ಳಿ...’

ಹೀಗೆಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ಅವರು ರಾಜಕೀಯ ಪಕ್ಷಗಳ ಮುಖಂಡರಲ್ಲಿ ಮಾಡಿಕೊಂಡಿದ್ದ ಮನವಿ ಜಿಲ್ಲೆಯ ಜನರಲ್ಲಿ ಗುಂಯ್‌ ಗುಡುತ್ತಿದೆ. ಹೋರಾಟವೇ ಅವರ ಬದುಕಿನ ಭಾಗವಾಗಿತ್ತು.

ಬೀದರ್‌ ತಾಲ್ಲೂಕಿನ ಬಸಂತಪುರ ಗ್ರಾಮದ ಬಿ. ನಾರಾಯಣರಾವ್‌ ಅವರು ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ಇವರ ಮೇಲೆ ಜಯಪ್ರಕಾಶ್‌ ನಾರಾಯಣ್‌ ಹಾಗೂ ದೇವರಾಜ ಅರಸು ಅವರ ಪ್ರಭಾವ ಇತ್ತು.

ಯೌವನದ ದಿನಗಳಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಸೆಳೆದು ಕಾಂಗ್ರೆಸ್‌ ಮುಖಂಡರಿಗೆ ಹತ್ತಿರವಾಗಿದ್ದರು. ಕಾಂಗ್ರೆಸ್ ನಲ್ಲಿ ಮತಗಟ್ಟೆ ಏಜೆಂಟ್ ಆಗಿ ಕೆಲಸ ಮಾಡಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಶುರು ಮಾಡಿದ್ದರು. ಇವರು ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರದ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೂ ಬಹಳ ಆತ್ಮೀಯರಾಗಿದ್ದ ಬಿ.ನಾರಾಯಣರಾವ್ ಒಂದು ಬಾರಿ ಜನತಾ ಪಕ್ಷದಿಂದಲೂ ವಿಧಾನಸಭೆಗೆ ಸ್ಪರ್ಧಿಸಿದ್ದರು.

35 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ನೋವು ಸಹಿಸಿಕೊಂಡಿದ್ದ ಬಿ.ನಾರಾಯಣರಾವ್ ಅವರು ಜನತಾ ಪರಿವಾರದ ಭದ್ರಕೋಟೆ ಭೇದಿಸಿ 1978ರ ನಂತರ ಮೊದಲ ಸಲ 2018ರಲ್ಲಿ ಬಸವಕಲ್ಯಾಣದ ವಿಧಾನಸಭಾ ಕೇತ್ರದಲ್ಲಿ ಕಾಂಗ್ರೆಸ್‌ನ ಧ್ವಜ ಹಾರಿಸಿದ್ದರು.

ಬಸವಕಲ್ಯಾಣ ಕ್ಷೇತ್ರದ ಪ್ರಬಲ ಸಮುದಾಯಗಳಾದ ಮರಾಠಾ ಹಾಗೂ ಲಿಂಗಾಯತೇತರ ಪ್ರಥಮ ಶಾಸಕರಾಗಿ ದಾಖಲೆ ಬರೆದಿದ್ದರು. ಈ ಮೂಲಕ ಹಿಂದುಳಿದ ವರ್ಗಗಳ ನಾಯಕರಾಗಿ ಛಾಪು ಮೂಡಿಸಿದ್ದರು.

ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡ ನಂತರ ನಾರಾಯಣರಾವ್ ಆತಂಕಕ್ಕೆ ಒಳಗಾಗಿದ್ದರು. ವಿಧಾನಸಭೆಯಲ್ಲೂ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದರು. ನಮ್ಮಂಥ ಬಡವರು ಕೋಟಿಗಟ್ಟಲೆ ಹಣ ಸುರಿದು ಚುನಾವಣೆಗೆ ಹೋಗಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಚುನಾವಣೆಗೆ ಹೋಗಬೇಡಿ ಎಂದು ರಾಜಕಾರಣಿಗಳಲ್ಲಿ ಕೈಮುಗಿದು ಕೇಳಿಕೊಂಡಿದ್ದರು.

ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮಾತಿನ ಬಾಣಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದರು. ಇವರು ವೇದಿಕೆಗೆ ಬಂದು ನಿಂತರೆ ಸಾಕು ದೃಶ್ಯ ಮಾಧ್ಯಮದ ಕ್ಯಾಮೆರಾಗಳು ಅವರತ್ತ ತಿರುಗುತ್ತಿದ್ದವು. ಕಾಂಗ್ರೆಸ್‌ನ ಪ್ರಮುಖ ಮುಖಂಡರಗಿಂತ ಇವರ ಹೇಳಿಕೆಗಳೇ ಪ್ರಾಮುಖ್ಯ ಪಡೆದುಕೊಳ್ಳುತ್ತಿದ್ದವು. ಅವರ ವಾಕ್‌ಚಾತುರ್ಯಕ್ಕೆ ರಾಜಕಾರಣಿಗಳೂ ಬೆರಗಾಗುತ್ತಿದ್ದರು.

ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲು ₹ 600 ಕೋಟಿ ಕೊಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಅನೇಕ ಬಾರಿ ಹೋಗಿದ್ದರು. ಅವರಿಂದಲೂ ಉತ್ತಮ ಸ್ಪಂದನೆ ದೊರೆಕಿತ್ತು. ಬಿ. ನಾರಾಯಣರಾವ್ ಯಾರನ್ನೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಎಲ್ಲ ಪಕ್ಷಗಳಲ್ಲೂ ಅವರಿಗೆ ಗೆಳೆಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT