ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಸಾಮ್ರಾಜ್ಯದ ಪ್ರಧಾನಿ ಸಮಾಧಿಗಿಲ್ಲ ರಕ್ಷಣೆ!

ಮಧ್ಯಕಾಲೀನ ಭಾರತದ ಅತಿದೊಡ್ಡ ವಿದ್ಯಾಸಂಸ್ಥೆಯ ಸ್ಥಾಪಕ, ಅಕ್ಷರ ಪ್ರೇಮಿ
ಶಶಿಕಾಂತ ಎಸ್‌. ಶೆಂಬೆಳ್ಳಿ
Published 7 ಜನವರಿ 2024, 6:20 IST
Last Updated 7 ಜನವರಿ 2024, 6:20 IST
ಅಕ್ಷರ ಗಾತ್ರ

ಬೀದರ್‌: 15ನೇ ಶತಮಾನದಲ್ಲಿ ಅತಿದೊಡ್ಡ ಸಾಮ್ರಾಜ್ಯದಲ್ಲಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿ ಸಾಕಷ್ಟು ಸುಧಾರಣೆಗಳಿಗೆ ಕಾರಣವಾಗಿ ನಿಜವಾದ ಜನನಾಯಕ ಅನಿಸಿಕೊಂಡಿದ್ದ ವ್ಯಕ್ತಿಯ ಸಮಾಧಿ ಸ್ಥಳ ಸುರಕ್ಷಿತವಾಗಿಲ್ಲ!

ಆಶ್ಚರ್ಯವೆನಿಸಿದರೂ ಇದು ಕಟು ಸತ್ಯ. ನಮ್ಮ ಪೂರ್ವಜರ ಆದರ್ಶಗಳನ್ನು ಗುಣಗಾನ ಮಾಡುವುದಲ್ಲ. ಅವರ ಸಂಕೇತಗಳನ್ನು, ಸ್ಮಾರಕಗಳನ್ನು ಸಂರಕ್ಷಿಸಿ, ಉಳಿಸಿ– ಬೆಳೆಸಿ ಅವುಗಳನ್ನು ನೋಡುತ್ತ ನಿಜ ಜೀವನದಲ್ಲಿ ಅಳವಡಿಸಿಕೊಂಡು ಅವರಂತಾಗಲು ಪ್ರಯತ್ನಿಸಬೇಕೆಂದು ಹಿರಿಯರು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ. ಆದರೆ, ಬಹಮನಿ ಸಾಮ್ರಾಜ್ಯದಲ್ಲಿ ಪ್ರಧಾನಿಯಾಗಿದ್ದ ಮಹಮೂದ್‌ ಗಾವಾನ್‌ ಮಾತ್ರ ಅದಕ್ಕೆ ಅಪವಾದ ಎಂಬಂತೆ ಕಾಣಿಸುತ್ತಿದ್ದಾನೆ. ಅದು ಆತನ ಧರ್ಮದ ಕಾರಣಕ್ಕೂ ಇರಬಹುದು ಎಂಬುದು ಕೆಲವರ ಆರೋಪ. ಏಕೆಂದರೆ ಕಣ್ಣೆದುರೆ ಆತನ ಸಮಾಧಿ ಸ್ಥಳ ಹಾಳಾಗುತ್ತಿದೆ. ಸುತ್ತಲಿನ ಜಾಗ ಅತಿಕ್ರಮಣವಾಗುತ್ತಿದೆ. ಹೀಗಿದ್ದರೂ ಅದರ ರಕ್ಷಣೆಗೆ ಯಾರೂ ಸೊಲ್ಲು ಎತ್ತುತ್ತಿಲ್ಲ.

ನಗರ ಹೊರವಲಯದ ಗೋರನಳ್ಳಿಯಲ್ಲಿ ಮಹಮೂದ್‌ ಗಾವಾನ್‌ ಸಮಾಧಿ ಸ್ಥಳವಿದೆ. ರಿಯಲ್‌ ಎಸ್ಟೇಟ್‌ ಹಾವಳಿಯಿಂದ ಅದಕ್ಕೆ ಸೇರಿದ ಹೆಚ್ಚಿನ ಸ್ಥಳ ಅತಿಕ್ರಮಣವಾಗಿದೆ. ಕೆಲ ಇತಿಹಾಸ ಪ್ರಿಯರ ಒತ್ತಡಕ್ಕೆ ಮಣಿದು ಸಮಾಧಿ ಸ್ಥಳದ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಸಮಾಧಿ ಮೇಲೆ ತಗಡಿನ ಶೀಟುಗಳಿಂದ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಅದು ಕೂಡ ಆಗಾಗ ಕಳುವಾಗುತ್ತ ಇರುತ್ತದೆ. ಇಡೀ ಆವರಣದಲ್ಲಿ ದಟ್ಟವಾದ ಪೊದೆ ಬೆಳೆದಿದ್ದು, ಹಾವು, ಚೇಳು ಸೇರಿದಂತೆ ಇತರೆ ವಿಷ ಜಂತುಗಳು ಸೇರಿಕೊಂಡಿವೆ. ಯಾರೂ ಕೂಡ ಅಲ್ಲಿಗೆ ಹೋಗಲಾರದ ಪರಿಸ್ಥಿತಿ ಇದೆ. ಕೆಲ ವರ್ಷಗಳ ಹಿಂದೆ ಅಲ್ಲಿ ‘ಸಂದಲ್‌’ ಆಚರಣೆ ಕೂಡ ನಡೆಯುತ್ತಿತ್ತು. ಆ ಮೂಲಕ ಮಹಮೂದ್‌ ಗಾವಾನ್‌ನನ್ನು ಸ್ಮರಿಸುವ ಕೆಲಸವಾಗುತ್ತಿತ್ತು. ಈಗ ಅದು ಕೂಡ ನಿಂತಿದೆ. ಈಗ ಆ ಜಾಗೆಯ ಮೇಲೂ ಕೆಲವರ ಕಣ್ಣು ಬಿದ್ದಿದ್ದು, ಅದನ್ನು ಸಂರಕ್ಷಿಸಬೇಕೆನ್ನುವುದು ಇತಿಹಾಸಪ್ರಿಯರ ಒತ್ತಾಯ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಬೀದರ್‌ ಗುರುತಿಸಿಕೊಳ್ಳಲು ಪ್ರಮುಖ ಕಾರಣೀಕರ್ತ ವ್ಯಕ್ತಿಯೆಂದರೆ ಮಹಮೂದ್‌ ಗಾವಾನ್‌. ಕನಿಷ್ಠ ಆತನ ಸಮಾಧಿ ಸ್ಥಳ ರಕ್ಷಿಸಿ, ಅದನ್ನು ಪ್ರವಾಸಿ ತಾಣದ ರೂಪದಲ್ಲಿ ಬೆಳೆಸುವ ಕೆಲಸವಾಗುತ್ತಿಲ್ಲ. ಇದು ಬಹಳ ದುರದೃಷ್ಟಕರ ಸಂಗತಿ’ ಎಂದು ಪರಿಸರ ಹೋರಾಟಗಾರರೂ ಆಗಿರುವ ಇತಿಹಾಸಕಾರ ವಿನಯ್‌ ಮಾಳಗೆ ವಿಷಾದಿಸಿದರು.

‘ಈಗ ಬೀದರ್‌ ನಗರ ಸಾಕಷ್ಟು ಬೆಳೆದಿದೆ. ಅನೇಕ ಭೂಗಳ್ಳರ ಕಣ್ಣು ಅದರ ಮೇಲೆ ಬಿದ್ದಿದೆ. ಈಗಲೇ ಅದನ್ನು ಅಭಿವೃದ್ಧಿ ಪಡಿಸದಿದ್ದರೆ ಭವಿಷ್ಯದಲ್ಲಿ ಯಾವುದೇ ಕುರುಹುಗಳು ಕೂಡ ಸಿಗುವುದಿಲ್ಲ. ಇತಿಹಾಸದ ದೊಡ್ಡ ವ್ಯಕ್ತಿಗೆ ಅಪಚಾರ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ವಕ್ಫ್‌ ಬೋರ್ಡ್‌ ಗಮನ ಹರಿಸಿ ಕ್ರಮ ಜರುಗಿಸಬೇಕು. ಗಾವಾನ್‌ಗೆ ಸಂಬಂಧಿಸಿದ ವಿವರಗಳನ್ನು ಹಾಕಿಸಬೇಕು’ ಎಂದು ಒತ್ತಾಯಿಸಿದರು.

‘ವಾಸ್ತವದಲ್ಲಿ ಅಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಗಮನಹರಿಸಲು ವಕ್ಫ್‌ ಬೋರ್ಡ್‌ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಮಹಮೂದ್‌ ಗಾವಾನ್‌ ನಿರ್ಮಿಸಿದ ಮದರಸಾ
–ಪ್ರಜಾವಾಣಿ ಚಿತ್ರಗಳು
ಮಹಮೂದ್‌ ಗಾವಾನ್‌ ನಿರ್ಮಿಸಿದ ಮದರಸಾ –ಪ್ರಜಾವಾಣಿ ಚಿತ್ರಗಳು

‘ಗಾವಾನ್‌ ಹೆಸರಲ್ಲಿ ಗ್ರಂಥಾಲಯ ನಿರ್ಮಿಸಲಿ’ ‘ಬಹಮನಿ ಸಾಮ್ರಾಜ್ಯದ ಮಿಲಿಟರಿ ಮತ್ತು ಕಂದಾಯ ವ್ಯವಸ್ಥೆಯಲ್ಲಿ ದೊಡ್ಡ ಸುಧಾರಣೆ ತಂದ ವ್ಯಕ್ತಿ ಮಹಮೂದ್‌ ಗಾವಾನ್‌. ಇವರ ಕಾರ್ಯಗಳಿಂದ ಬಹಮನಿ ಸಾಮ್ರಾಜ್ಯಕ್ಕೆ ದೊಡ್ಡ ಹೆಸರು ಬಂದಿತು. ಅವರು ಮರಣ ಹೊಂದಿದ ನಂತರ ಆ ಸಾಮ್ರಾಜ್ಯ ಕೂಡ ಪತನಗೊಳ್ಳಲು ಶುರುವಾಯಿತು. ಅವರ ಸಮಾಧಿ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಬೇಕು. ಸುಂದರ ಉದ್ಯಾನ ನಿರ್ಮಿಸಿ ಅಭಿವೃದ್ಧಿ ಪಡಿಸಿದರೆ ಹೊಸ ಪೀಳಿಗೆಗೆ ಅವರ ಪರಿಚಯ ಮಾಡಿಕೊಟ್ಟಂತಾಗುತ್ತದೆ’ ಎಂದು ಇತಿಹಾಸಕಾರ ವಿನಯ್‌ ಮಾಳಗೆ ಒತ್ತಾಯಿಸಿದ್ದಾರೆ.

ಮಹಮೂದ್‌ ಗಾವಾನ್‌ ಮಾಡಿದ್ದೇನು? ಮಹಮೂದ್‌ ಗಾವಾನ್‌ ಮೂಲತಃ ಪರ್ಷಿಯಾದವನು. ಇಂದಿನ ಇರಾನಿನ ಉತ್ತರದ ಗಿಲಾನ್‌ ಪ್ರಾಂತ್ಯದಲ್ಲಿ ಗವರ್ನರ್‌ ಆಗಿದ್ದ. ಅವನ ಮೂಲ ಹೆಸರು ಖ್ವಾಜಾ ಇಮಾದುದ್ದೀನ್‌ ಗಿಲಾನಿ. ಅರಮನೆಯ ಪಿತೂರಿ ಒಳಜಗಳಗಳಿಂದ ಬೇಸತ್ತು ದೇಶಾಂತರ ಹೊರಟ. ಸೂಫಿ ಸಂತ ನಿಯಾಮತ್‌ ಉಲ್ಲಾ ಕಿರ್ಮಾನಿಯ ಮಗ ಹಬೀಬುಲ್ಲಾನನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ಬಯಕೆಯಿಂದ ಬೀದರ್‌ಗೆ ಬಂದಿದ್ದ. ಆಗ ಬಹಮನಿ ಸಾಮ್ರಾಜ್ಯದ ಅರಸ ಎರಡನೇ ಅಲ್ಲಾವುದ್ದೀನ್‌ನಿಗೆ ಆಪ್ತನಾಗಿದ್ದ ಸಂತ ಹಬೀಬುಲ್ಲಾ ಅವರು ಅರಸನೊಂದಿಗೆ ಗಿಲಾನಿಯನ್ನು ಭೇಟಿ ಮಾಡಿಸಿದ. ಆತನ ಚಾಣಾಕ್ಷತನ ಪ್ರಾಮಾಣಿಕತೆಗೆ ಮಾರುಹೋಗಿದ್ದ ಅರಸ ತನ್ನ ರಾಜ್ಯದಲ್ಲಿಯೇ ಉಳಿಸಿಕೊಂಡ. ಆಡಳಿತದಲ್ಲಿ ತನ್ನ ಬುದ್ಧಿಮತ್ತೆ ಮೂಲಕ ಹಂತ ಹಂತವಾಗಿ ಗಾವಾನ್‌ ಪ್ರಧಾನಿ ಸ್ಥಾನಕ್ಕೇರಿದ. ಅಪ್ರತಿಮ ಸೇನಾನಿ ಗಣಿತ ಕಾವ್ಯ ಮೀಮಾಂಸೆ ನಕ್ಷತ್ರ ವಿಜ್ಞಾನ ವಿಷಯದಲ್ಲಿ ಪರಿಣತನಾಗಿದ್ದ. ಇಬ್ಬರು ರಾಜಕುಮಾರರನ್ನು ಸಿಂಹಾಸನದ ಮೇಲೆ ಕೂರಿಸಿ ಆಡಳಿತ ನಡೆಸಿದ ಗಾವಾನ್‌ ಅನೇಕ ಆಡಳಿತಾತ್ಮಕ ಸುಧಾರಣೆಗಳನ್ನು ತಂದ. ಸ್ವಂತ ವೆಚ್ಚದಲ್ಲಿ ‘ಮದರಸಾ’ ನಿರ್ಮಿಸಿದ. ಮಧ್ಯಕಾಲೀನ ಭಾರತದಲ್ಲಿ ಅತಿದೊಡ್ಡ ವಿದ್ಯಾಸಂಸ್ಥೆ ಅದಾಗಿತ್ತು. ಪ್ರಧಾನಿಯಾಗಿದ್ದರೂ ಸಾಮಾನ್ಯನಂತೆ ಬಿಳಿವಸ್ತ್ರ ಧರಿಸಿರುತ್ತಿದ್ದ. ಬುದ್ಧಿವಂತ ಸಚ್ಚಾರಿತ್ರ್ಯವಂತ ವ್ಯಕ್ತಿ ಎಂಬ ಕಾರಣಕ್ಕಾಗಿ ಜನ ಆತನನ್ನು ‘ಗಾವಾನ್‌’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಮುಂದೆ ಅದೇ ಹೆಸರು ಜನಜನಿತವಾಯಿತು. ತಾನು ಮಾಡದ ತಪ್ಪು ಹಾಗೂ ಪಿತೂರಿಗೆ ಬಲಿಯಾದ. ಈಗಿನ ಗೋರನಳ್ಳಿಯಲ್ಲಿ ಅಂದಿನ ನಿಜಾಂ ಅರಸರ ಕಾಲದ ಪ್ರಧಾನಿಯಾಗಿದ್ದ ಮಹಾರಾಜ ಕಿಷನ್‌ ಪ್ರಸಾದ್‌ ಗಾವಾನ್‌ ಸಮಾಧಿ ಗುರುತಿಸಿ ಕಟ್ಟೆ ಕಟ್ಟಿಸಿದ್ದ. 500 ವರ್ಷಗಳ ನಂತರವೂ ರೈತರು ತಾವು ಬೆಳೆದ ದವಸ–ಧಾನ್ಯ ಸಮರ್ಪಿಸುತ್ತಿದ್ದರು. ಅದು ನಿರ್ಲಕ್ಷ್ಯಕ್ಕೆ ಒಳಗಾದ ನಂತರ ಜನ ಅಲ್ಲಿಗೆ ಹೋಗುವುದು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT