ಮಂಗಳವಾರ, ಜೂನ್ 2, 2020
27 °C
ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ

ಬೀದರ್ | ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ಕೋವಿಡ್ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಒಂಬತ್ತು ಜನರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 76ಕ್ಕೆ ಏರಿದೆ.

ನಗರದ ಓಲ್ಡ್‌ಸಿಟಿಯ ಇಬ್ಬರು, ವಿದ್ಯಾನಗರದ ಒಬ್ಬರು, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡದ ಇಬ್ಬರು, ಭಾಲ್ಕಿ ತಾಲ್ಲೂಕಿನ ಭಾತಂಬ್ರಾದ ಮೂವರು ಹಾಗೂ ಹಲಸಿತೂಗಾಂವದ ಒಬ್ಬರಿಗೆ ಸೋಂಕು ತಗುಲಿದೆ.

ನಗರದ ವಿದ್ಯಾನಗರ ಕಾಲೊನಿಯ ಐದನೇ ಕ್ರಾಸ್‌ನ 49 ವರ್ಷದ ವ್ಯಕ್ತಿ, ಓಲ್ಡ್‌ಸಿಟಿಯ ದರ್ಜಿಗಲ್ಲಿಯ 39 ವರ್ಷದ ವ್ಯಕ್ತಿ ಹಾಗೂ ಪಾಂಡುರಂಗ ಮಂದಿರ ಸಮೀಪದ ಮನೆಯೊಂದರ 18 ವರ್ಷದ ಯುವಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ವಿವಿಧೆಡೆಯಿಂದ ಮರಳಿ ಬಂದವರನ್ನು ಆಯಾ ಗ್ರಾಮಗಳ ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆ ನಡೆಸಿದಾಗ ಮಹಾರಾಷ್ಟ್ರದಿಂದ ಬಂದ ಮೂವರು ಹಾಗೂ ತೆಲಂಗಾಣದಿಂದ ಬಂದ ಒಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ವೈರಾಣು ಹಳ್ಳಿಗಳಿಗೂ ಕಾಲಿಟ್ಟಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಭಾತಂಬ್ರಾದಲ್ಲಿ ಮಹಾರಾಷ್ಟ್ರದಿಂದ ಬಂದ 65 ವರ್ಷದ ವ್ಯಕ್ತಿ ಹಾಗೂ ಅವರ  60 ವರ್ಷದ ಪತ್ನಿ, ಹೈದರಾಬಾದ್‌ನಿಂದ ಗ್ರಾಮಕ್ಕೆ ಬಂದಿರುವ ಮಹಿಳೆಗೂ ಸೋಂಕು ತಗುಲಿದೆ. ಹಲಸಿ(ಎಲ್) ಗ್ರಾಮಕ್ಕೆ ಹೈದರಾಬಾದ್‌ನಿಂದ ಮೇ 3 ರಂದು ಬಂದ 35 ವರ್ಷ ವ್ಯಕ್ತಿಗೂ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ಬ್ರಿಮ್ಸ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಇಡಲಾಗಿದೆ.

ಸೋಂಕಿತರ ಸಂಪರ್ಕಕ್ಕೆ ಬಂದ ಭಾತಂಬ್ರಾದ 12 ಜನರನ್ನು ಅಲ್ಲಿಯ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ಹಲಸಿ(ಎಲ್) ಗ್ರಾಮದ 18 ಜನರನ್ನು ಶಾಲೆಯಲ್ಲಿ ಇಡಲಾಗಿದೆ. ವಾಗಲಗಾಂವದ ಕ್ವಾರಂಟೈನ್‌ ಕೇಂದ್ರಕ್ಕೆ ಕಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಭಾಲ್ಕಿ ತಾಲ್ಲೂಕಿನ ಜ್ಯಾಂತಿಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಮುಂಬೈ, ಪುಣೆ ಹಾಗೂ ಮದ್ರಾಸ್‌ನಿಂದ ಬಂದ ತಲಾ ಒಬ್ಬರು ಸೇರಿ 19 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ಧನ್ನೂರ್, ದಾದೋಡಿ ತಾಂಡಾ, ಸೇವಾನಗರ ತಾಂಡಾ, ಮಳಚಾಪುರ, ಜೋಳದಾಬಕಾ, ಕಣಜಿಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲೂ ಮುಂಬೈನಿಂದ ಬಂದವರನ್ನು ಇಡಲಾಗಿದೆ.

ಮಹಾರಾಷ್ಟ್ರದ ಸೋಲಾಪುರದ ತವರು ಮನೆಯಿಂದ ಮೇ 15ರಂದು ಹಳ್ಳಿಖೇಡ (ಬಿ) ಗ್ರಾಮದಲ್ಲಿರುವ ಗಂಡನ ಮನೆಗೆ ಬಂದ 23 ವರ್ಷದ ತಾಯಿ ಹಾಗೂ ಎರಡು ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರನ್ನು ಬ್ರಿಮ್ಸ್‌ನ ವಿಶೇಷ ನಿಗಾ ಘಟಕದಲ್ಲಿ ಇಡಲಾಗಿದೆ. ಈ ಮಹಿಳೆಯ ಸಂಪರ್ಕಕ್ಕೆ ಬಂದ 37 ಜನರನ್ನು ಹಳ್ಳಿಖೇಡದ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿದೆ.

ಓಲ್ಡ್‌ಸಿಟಿಯಲ್ಲಿ ಸೀಲ್‌ಡೌನ್‌ ಸಡಿಲ
ಬೀದರ್:
ಇಲ್ಲಿಯ ಓಲ್ಡ್‌ಸಿಟಿಯ ಕೆಲ ಪ್ರದೇಶದಲ್ಲಿ ಸೀಲ್‌ಡೌನ್ ಮಾಡಿ ಕಂಟೇನ್ಮೆಂಟ್ ಪ್ರದೇಶದ ವ್ಯಾಪ್ತಿಯಲ್ಲಿ ಕೆಲವಷ್ಟು ಬದಲಾವಣೆ ಮಾಡಲಾಗಿದೆ. ಗುರುವಾರ ನಯಾಕಮಾನ್, ಅಂಬೇಡ್ಕರ್ ವೃತ್ತ, ಸಿದ್ಧಾರ್ಥ ಕಾಲೇಜು, ಹನುಮಾನ ಮಂದಿರದ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ.

ಓಲ್ಡ್‌ಸಿಟಿಯ ಪಕ್ಕಲವಾಡಾದಿಂದ ಉಸ್ಮಾನಗಂಜ್ ವರೆಗೆ, ಬೀದರ್ ಕೋಟೆಯಿಂದ ಫತೇದರ್ವಾಜಾ ರಸ್ತೆ ವರೆಗಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

ಕಂಟೇನ್ಮೆಂಟ್ ಪ್ರದೇಶದಲ್ಲಿ 10 ಸಾವಿರ ಜನ ವಾಸವಾಗಿದ್ದು, 1,750 ಮನೆಗಳು, 110 ಅಂಗಡಿಗಳು, 105 ಶಾಲೆಗಳು, ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಅಗ್ನಿಶಾಮಕ ಕಚೇರಿ, ಅಬಕಾರಿ ಕಚೇರಿ, 60 ಅಂಗನವಾಡಿ ಕೇಂದ್ರಗಳು ಇವೆ.
ಬಾಪುರ, ಚಿಟ್ಟಾವಾಡಿ, ಅಷ್ಟೂರ್ ಹಾಗೂ ಕೊಳಾರ ಕೈಗಾರಿಕೆ ಪ್ರದೇಶವನ್ನು ಬಫರ್ ಝೋನ್‌ನಲ್ಲಿ ಗುರುತಿಸಲಾಗಿದೆ.

21 ಜನರ ಬಿಡುಗಡೆ
ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯ 50,334 ಮನೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ 12,001 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಜಿಲ್ಲೆಯಲ್ಲಿ 140 ಜನರನ್ನು ಕ್ವಾರಂಟೈನ್‌ಗೆ ಸೇರಿಸಲಾಗಿದೆ. ಕ್ವಾರಂಟೈನ್‌ನಲ್ಲಿ ಇದ್ದ 21 ಜನರನ್ನು ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು