ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಡೋಸ್‍ಗೆ ಸಾರ್ವಜನಿಕರ ಪರದಾಟ: ಬೀದರ್‌ನಲ್ಲಿ ಸಿಗುತ್ತಿಲ್ಲ ಲಸಿಕೆ

ನಿತ್ಯ 5 ಸಾವಿರ ಲಸಿಕೆ ಬೇಡಿಕೆ
Last Updated 5 ಮೇ 2021, 5:06 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ರಕ್ಷಣೆ ಒದಗಿಸುವ ಕೋವ್ಯಾಕ್ಸಿನ್ ಕೊರತೆ ಉಂಟಾಗಿದೆ. ಸಂಗ್ರಹ ಇಲ್ಲದ ಕಾರಣ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಎರಡನೇ ಡೋಸ್‍ಗೆ ಕಾಯಬೇಕಾದ ಸ್ಥಿತಿ ಇದೆ.

ಜಿಲ್ಲೆಗೆ ಕೆಲ ದಿನಗಳಿಂದ ಕೋವ್ಯಾಕ್ಸಿನ್ ಪೂರೈಕೆ ಆಗಿಲ್ಲ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಒಂದು ವಾರದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬರುವ ಸಾಧ್ಯತೆ ಇದೆ.

ಕೋವಿಶೀಲ್ಡ್ ಲಸಿಕೆಗೆ ಸದ್ಯ ಕೊರತೆ ಇಲ್ಲ. ಮಂಗಳವಾರ ಜಿಲ್ಲೆಗೆ 15 ಸಾವಿರ ಡೋಸ್ ಕೋವಿಶೀಲ್ಡ್ ಬಂದಿದೆ. ಜಿಲ್ಲೆಯ ಪ್ರತಿ ದಿನದ ಕೋವಿಶೀಲ್ಡ್ ಲಸಿಕೆ ಬೇಡಿಕೆ 5 ಸಾವಿರ ಡೋಸ್ ಆಗಿದೆ.

ಕೋವಿಡ್ ಎರಡನೇ ಅಲೆ ಕಾರಣ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಜನ ಭಯಗೊಂಡಿದ್ದಾರೆ. ಈ ಹಿಂದೆ ಕೋವಿಡ್ ಲಸಿಕೆ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದ ಜನ ಈಗ ಸ್ವಯಂ ಪ್ರೇರಣೆಯಿಂದ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ.

‘ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಸೋಂಕು ತಗುಲುವ ಸಾಧ್ಯತೆ ತೀರಾ ಕಡಿಮೆ. ತಗುಲಿದರೂ, ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ ಎನ್ನುವ ತಿಳಿವಳಿಕೆಯ ಕಾರಣ ಜನರಲ್ಲಿ ಆತ್ಮವಿಶ್ವಾಸ ಮೂಡಿದೆ’ ಎಂದು ಹೇಳುತ್ತಾರೆ ಜೈನಾಪುರ ಗ್ರಾಮದ ಚಂದ್ರಶೇಖರ ಪಾಟೀಲ ಜೈನಾಪುರ.

ರಾಜ್ಯ ಸರ್ಕಾರವು ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಕೊಡುವುದಾಗಿ ಘೋಷಿಸಿದ ನಂತರ ಯುವ ಸಮೂಹವೂ ಲಸಿಕೆ ಪಡೆಯುವ ಉತ್ಸಾಹದಲ್ಲಿ ಇತ್ತು. ಆದರೆ, ಲಸಿಕೆಗಳು ಲಭಿಸದ ಕಾರಣ 18 ವರ್ಷ ಮೇಲ್ಪಟ್ಟವರ ಲಸಿಕಾಕರಣ ಮುಂದಕ್ಕೆ ಹೋಗಿದೆ.

15 ಸಾವಿರ ಡೋಸ್ ಕೋವಿಶೀಲ್ಡ್

‘ಜಿಲ್ಲೆಗೆ ಮಂಗಳವಾರ 15 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ಪ್ರತಿ ತಾಲ್ಲೂಕಿಗೆ ಬೇಡಿಕೆ ಆಧರಿಸಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ನಿತ್ಯದ ಜಿಲ್ಲೆಯ ಲಸಿಕೆ ಬೇಡಿಕೆ 5 ಸಾವಿರ ಡೋಸ್ ಆಗಿದೆ’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರಾಜಶೇಖರ ಪಾಟೀಲ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಸೇರಿದಂತೆ ಈವರೆಗೆ 2,23,693 ಜನ ಲಸಿಕೆ ಪಡೆದಿದ್ದಾರೆ. ಈ ವಾರ ಲಸಿಕೆಯ ಎರಡನೇ ಡೋಸ್ ನೀಡಿಕೆಗೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿರುವ ಕಾರಣ ಅರ್ಹ ಎಲ್ಲರೂ ಲಸಿಕೆ ಪಡೆಯಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT