ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಚಿಕಲಚಂದಾ ಗ್ರಾಮಸ್ಥರಿಗೆ ಅಶುದ್ಧ ನೀರೇ ಗತಿ

Last Updated 16 ನವೆಂಬರ್ 2021, 6:13 IST
ಅಕ್ಷರ ಗಾತ್ರ

ಭಾಲ್ಕಿ: ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ, ಕುಸಿದಿರುವ ಸಾರ್ವಜನಿಕ ಬಾವಿಯ ಸುತ್ತುಗೋಡೆ, ಸಿಸಿ ರಸ್ತೆಗಳ ಕೊರತೆ, ರಸ್ತೆ ಹಾಗೂ ಮನೆಗಳ ಮುಂದೆ ನಿಂತಿರುವ ಕೊಳಚೆ, ಸೊಳ್ಳೆಗಳ ಕಾಟ..

ಇವು ತಾಲ್ಲೂಕಿನ ಸಿದ್ದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕಲಚಂದಾ ಗ್ರಾಮದಲ್ಲಿ ಕಂಡು ಬರುವ ಸಮಸ್ಯೆಗಳು.

ಗ್ರಾಮದಲ್ಲಿ 2 ವರ್ಷಗಳ ಹಿಂದೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ದೊರೆಯುಂವತಾಗಲಿ ಎಂದು ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದೆ. ಇದು ಕೆಲ ತಿಂಗಳುಗಳ ಕಾಲ ಮಾತ್ರ ಚೆನ್ನಾಗಿ ಕಾರ್ಯನಿರ್ವಹಿಸಿತು. ಆಮೇಲೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದೆ. ಇದರಿಂದ ಗ್ರಾಮದ ಜನರಿಗೆ ಕೊಳವೆಬಾವಿ, ತೆರೆದ ಬಾವಿಯ ಅಶುದ್ಧ ನೀರೇ ಗತಿ ಆಗಿದೆ ಎಂದು ಗ್ರಾಮಸ್ಥರಾದ ಪದ್ಮಾವತಿ ಮಧುಕರ, ಚಂದ್ರಕಾಂತ ಸ್ವಾಮಿ, ನಾಮದೇವ ಪಾಟೀಲಆಕ್ರೋಶ ವ್ಯಕ್ತಪಡಿಸಿದರು.

ನರಸಿಂಹ ದೇವಸ್ಥಾನದ ಓಣಿಯಲ್ಲಿರುವ ಸಣ್ಣ ನೀರಿನ ಟ್ಯಾಂಕ್‌ಗೆ ನೀರು ಬರದೆ ಇರುವುದರಿಂದ ನಿವಾಸಿಗಳು ಅನಿವಾರ್ಯವಾಗಿ ಸಾರ್ವಜನಿಕ ಬಾವಿಯ ನೀರೇ ಬಳಸಲು ಮತ್ತು ಕುಡಿಯಲು ಉಪಯೋಗಿಸುವಂತಾಗಿದೆ. ಈಚೆಗೆ ರಸ್ತೆ ಮಧ್ಯದ ಸಾರ್ವಜನಿಕ ಬಾವಿಯ ಸುತ್ತುಗೋಡೆ ಕುಸಿದಿರುವುದರಿಂದ ಮಕ್ಕಳ, ವಯಯೋವೃದ್ಧರ ಬದುಕು ಅಪಾಯಕ್ಕೆ ಸಿಲುವಂತಾಗಿದೆ ಎಂದು ಮಹಿಳೆಯರಾದ ಜ್ಯೋತಿ ಶರಣಪ್ಪ, ಕಲಾವತಿ, ಸತ್ಯವತಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಅನೇಕ ಕಡೆಗಳಲ್ಲಿ ತುಂಬಾ ವರ್ಷಗಳ ಹಿಂದೆ ನಿರ್ಗಮಿಸಿರುವ ಸಿಸಿ ರಸ್ತೆ ಹಾಳಾಗಿದೆ. ಇನ್ನು ಅನೇಕ ಕಡೆಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಗೊಂಡಿಲ್ಲ. ಹಾಗಾಗಿ, ಸಾರ್ವಜನಿಕರಿಗೆ ತಿರುಗಾಡಲು ತೀವ್ರ ತೊಂದರೆ ಆಗುತ್ತಿದೆ. ಬಹುತೇಕ ಕಡೆಗಳಲ್ಲಿ ಚರಂಡಿ ನಿರ್ಮಾಣ ಆಗದೆ ಇರುವುದರಿಂದ ಮನೆ, ಮಳೆಗಳ ಹೊಲಸು ನೀರು ರಸ್ತೆ ಮಧ್ಯೆ ಸಂಗ್ರಹಗೊಳ್ಳುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿ ಗ್ರಾಮಸ್ಥರಿಗೆ ಕಾಲರಾ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭಯ ಕಾಡುತ್ತಿದೆ.

ಇನ್ನು ಸರ್ಕಾರಿ ಶಾಲೆ ಮುಂಭಾಗ ದಲ್ಲಿಯೇ ಕೊಳಚೆ ನೀರು ಹರಿಯು ವುದರಿಂದ ಮಕ್ಕಳು, ವಿದ್ಯಾರ್ಥಿಗಳು ಆ ನೀರಿನಲ್ಲಿಯೇ ನಡೆದುಕೊಂಡು ಹೋಗುವಂತಾಗಿದೆ. ರಸ್ತೆ ಪಕ್ಕವೇ ಶಾಲೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅಪಘಾತದ ಭಯ ಕಾಡುತ್ತದೆ.

ಕೂಡಲೇ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭಿಸುವಂತೆ ನೋಡಿಕೊಳ್ಳಬೇಕು. ನರಸಿಂಹ ದೇವಸ್ಥಾನದ ಓಣಿ ಜನರ ನೀರಿನ ಸಮಸ್ಯೆ ಪರಿಹರಿಸಲು ನೂತನ ಕೊಳವೆ ಬಾವಿ ಕೊರೆಯಿಸಬೇಕು. ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು. ಶಾಲೆಯ ಮುಂಭಾಗದ ರಸ್ತೆ ಮೇಲೆ ಸ್ಪೀಡ್‌ ಬ್ರೇಕರ್‌ ಅಳವಡಿಸಬೇಕು. ಕಾಂಪೌಂಡ್‌ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

*

ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ, ರಸ್ತೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು

-ಗ್ಯಾನೇಂದ್ರ ಹೊಳ್ಕರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT