ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿಕರ ಅಡುಗೆ ಮಾಡಲ್ಲ, ಮೊಟ್ಟೆ ಕೊಡಲ್ಲ

ಜಿ.ಪಂ ಅಧ್ಯಕ್ಷೆ ಎದುರು ವಸತಿ ನಿಲಯದ ಅವ್ಯವಸ್ಥೆ ಬಿಡಿಸಿಟ್ಟ ವಿದ್ಯಾರ್ಥಿನಿಯರು
Last Updated 6 ಆಗಸ್ಟ್ 2019, 15:46 IST
ಅಕ್ಷರ ಗಾತ್ರ

ಬೀದರ್: ‘ರುಚಿಕರ ಅಡುಗೆ ಮಾಡಲ್ಲ. ಬಾಳೆ ಹಣ್ಣು, ಮೊಟ್ಟೆ ಕೊಡಲ್ಲ. ಅರೆಬರೆ ಬೆಂದ ಆಹಾರವೇ ನಮಗೆ ಗತಿಯಾಗಿದೆ...’

ಇಲ್ಲಿಯ ಜನವಾಡ ರಸ್ತೆಯಲ್ಲಿ ಇರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಅವರ ಎದುರು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದು ಹೀಗೆ.

ಭಾನುವಾರ ಕೂಡ ವಿಶೇಷ ಅಡುಗೆ ಮಾಡುವುದಿಲ್ಲ. ಪೂರಿಯ ಮುಖವನ್ನೇ ನೋಡಿಲ್ಲ. ಎಲ್ಲ ದಿನವೂ ಒಂದೇ ತೆರನಾದ ಊಟ ಕೊಡುತ್ತಾರೆ. ಆಹಾರಕ್ಕೆ ಹುಳುಕು ಬಟಾಣಿ ಹಾಗೂ ತೊಳೆಯದ ಬೇಳೆಕಾಳುಗಳನ್ನು ಬಳಸುತ್ತಾರೆ ಎಂದು ದೂರಿದರು.

ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲ. ವಾರ್ಡನ್ ನಿಯಮಿತವಾಗಿ ವಸತಿ ನಿಲಯಕ್ಕೆ ಬರುವುದಿಲ್ಲ ಎಂದು ಹೇಳಿದರು.

ಸರಿಯಾಗಿ ಊಟ ಕೊಡದ ಹಾಗೂ ವಾರ್ಡನ್ ಬಾರದ ಬಗ್ಗೆ ಯಾರಿಗಾದರೂ ಹೇಳಿದರೆ ಊಟ ಕೊಡುವುದಿಲ್ಲ ಎಂದು ಗ್ರೂಪ್ ಡಿ ನೌಕರರು ಬೆದರಿಕೆ ಒಡ್ಡುತ್ತಾರೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯರ ಅಳಲಿಗೆ ಸ್ಪಂದಿಸಿದ ಅಧ್ಯಕ್ಷೆ, ‘ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಆಹಾರ ಕೊಡಬೇಕು. ವಸತಿ ನಿಲಯದ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು’ ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.

‘ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಮೇಲಧಿಕಾರಿಗೆ ಸೂಚನೆ ಕೊಡಲಾಗುವುದು’ ಎಂದು ತಿಳಿಸಿದರು.

‘ವಸತಿ ನಿಲಯದಲ್ಲಿ ಅವ್ಯವಸ್ಥೆ ಕಂಡು ಬಂದರೆ ವಿದ್ಯಾರ್ಥಿನಿಯರು ಸುಮ್ಮನಿರಬಾರದು. ಧೈರ್ಯದಿಂದ ಪ್ರಶ್ನೆ ಮಾಡಬೇಕು. ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಅಭಯ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಅವರು ಮೇಲಿಂದ ಮೇಲೆ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳು ಬಡವರ ಮಕ್ಕಳೇ ಆಗಿರುತ್ತಾರೆ. ಹೀಗಾಗಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಗಳಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT