ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್ | ಅನಧಿಕೃತ ತರಬೇತಿ ಕೇಂದ್ರಗಳಿಗೆ ನೋಟಿಸ್: ಬಿಇಒ ಎಚ್ಚರಿಕೆ

Published 25 ಜೂನ್ 2024, 14:12 IST
Last Updated 25 ಜೂನ್ 2024, 14:12 IST
ಅಕ್ಷರ ಗಾತ್ರ

ಔರಾದ್: ‘ಸರ್ಕಾರದ ಮಾನ್ಯತೆಯಿಲ್ಲದೆ ನಡೆಯುತ್ತಿರುವ ಇಲ್ಲಿಯ 8 ತರಬೇತಿ ಕೇಂದ್ರ(ಕೋಚಿಂಗ್ ಸೆಂಟರ್)ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ನೋಟಿಸ್ ಜಾರಿಗೊಳಿಸಿದ್ದಾರೆ.

ಅನಿಕೇತನ ನವೋದಯ ಅಕಾಡೆಮಿ, ಸೇವಾ ಕೋಚಿಂಗ್ ಸೆಂಟರ್, ಪ್ರಜ್ಞಾ ಕೋಚಿಂಗ್ ಸೆಂಟರ್, ಫ್ಯೂಚರ್ ಸ್ಟಾರ್ ಕೋಚಿಂಗ್ ಸೆಂಟರ್, ವಾಸವಿ ಕೋಚಿಂಗ್ ಸೆಂಟರ್, ನವೋದಯ ಸಕ್ಸಸ್ ಕೋಚಿಂಗ್ ಸೆಂಟರ್, ಸ್ವಾಮಿ ವಿವೇಕಾನಂದ ಕೋಚಿಂಗ್ ಸೆಂಟರ್, ಜ್ಞಾನ ಜ್ಯೋತಿ ಕೋಚಿಂಗ್ ಸೆಂಟರ್ ಹಾಗೂ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

‘ನೀವು ಸರ್ಕಾರದ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ಕೋಚಿಂಗ್ ಸೆಂಟರ್‌ ನಡೆಸುತ್ತಿದ್ದೀರಿ. ಮೂಲಸೌಲಭ್ಯವಿಲ್ಲದೆ ಹಾಗೂ ಸೂಕ್ತ ಗಾಳಿ ಬೆಳಕು ಇಲ್ಲದ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿ ಹಾಕಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ನಿಮ್ಮ ಕೋಚಿಂಗ್ ಸೆಂಟರ್ ಮುಚ್ಚಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್‍ನಲ್ಲಿ ಎಚ್ಚರಿಸಿದ್ದಾರೆ.

‘ಈ ಸಂಬಂಧ ಔರಾದ್ ಸಿಆರ್‌ಪಿಗೂ ನೋಟಿಸ್ ನೀಡಿದ್ದು ನಿಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ನಡೆಯುತ್ತಿದ್ದರೂ ಇಲಾಖೆ ಗಮನಕ್ಕೆ ಏಕೆ ತಂದಿಲ್ಲ ಎಂದು ಕೇಳಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಇಂತಹ ಅನಧಿಕೃತ ಕೊಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಯಾ ಶಾಲೆ ಮುಖ್ಯ ಶಿಕ್ಷಕರು ಅಂತಹದಕ್ಕೆ ಅವಕಾಶ ನೀಡಬಾರದು’ ಎಂದು ಮುಖ್ಯ ಶಿಕ್ಷಕರಿಗೂ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT