ಬೀದರ್: ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಯಾಗಿರುವ ಭಾರತೀಯ ರಾಷ್ಟೀಯ ವಿದ್ಯಾರ್ಥಿಗಳ ಒಕ್ಕೂಟದ (ಎನ್‌ಎಸ್‌ಯುಐ) ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಸಾಗರ್ ಖಂಡ್ರೆ ಅವರಿಗೆ ನಗರದಲ್ಲಿ ಅವರ ಅಭಿಮಾನಿ ಬಳಗದಿಂದ ಶುಕ್ರವಾರ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಸಾಗರ್ ಖಂಡ್ರೆ ಅವರನ್ನು ನಗರದ ನೌಬಾದ್‌ನಿಂದ ಝೀರಾ ಫಂಕ್ಷನ್ ಹಾಲ್‌ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತಂದರು. ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಮೆರವಣಿಗೆ ಮಾಡಿದರು. ಪಕ್ಷದ ಪರ ಜಯಘೋಷ ಹಾಕಿದರು.
ನಂತರ ನಡೆದ ಸಮಾರಂಭದಲ್ಲಿ ಸಾಗರ್ ಖಂಡ್ರೆಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ರಾಜ್ಯದ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸಿ, ಅವರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುವೆ. ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ಸಿಗಬೇಕು. ಅದಕ್ಕಾಗಿ ನಾನು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ’ ಎಂದು ಹೇಳಿದರು.
ಬಡವರು, ಶ್ರೀಮಂತರು ಎಂಬ ತಾರತಮ್ಯ ಸಮಾಜದಲ್ಲಿ ಇರಬಾರದು. ಕಾಯಕದ ಮೂಲಕ ಎಲ್ಲರೂ ಪ್ರಗತಿ ಸಾಧಿಸಬೇಕು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು. ಯಾವುದಕ್ಕೂ ಎದೆಗುಂದದೆ ಹತಾಶರಾಗಬಾರದು. ಗುರಿ ಮುಟ್ಟುವವರೆಗೆ ವಿರಮಿಸಬಾರದು’ ಎಂದು ತಿಳಿಸಿದರು.
‘ಪ್ರತಿಯೊಬ್ಬರೂ ದುಶ್ಚಟಗಳನ್ನು ಬಿಟ್ಟು ಸುಂದರವಾದ ಸಮಾಜ ರೂಪಿಸಲು ಶ್ರಮಿಸಬೇಕು. ವಿದ್ಯಾರ್ಥಿಗಳು, ಯುವಕರೇ ಈ ದೇಶದ ಬೆನ್ನೆಲುಬು. ಅವರು ಆರೋಗ್ಯವಂತರಾಗಿದ್ದರೆ ದೇಶ ಸಮೃದ್ಧಿ, ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರಾಷ್ಟೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಕೀರ್ತಿ ಗಣೇಶ ಮಾತನಾಡಿ, ‘ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುವುದೇ ಎನ್‌ಎಸ್‌ಯುಐ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಒಂದು ಶಕ್ತಿಯುತ ಸಂಘಟನೆ ಇದಾಗಿದೆ. ರಾಜಕೀಯದಲ್ಲಿ ಪರಿಶುದ್ಧತೆ, ಯುವನಾಯಕತ್ವ ಬೆಳೆಸಲು ಸಂಘಟನೆ ಶ್ರಮಿಸುತ್ತಿದೆ. ಎಲ್ಲಾ ಧರ್ಮೀಯರ ನಡುವೆ ಸೌಹಾರ್ದ ಮೂಡಿಸುವ ಕೆಲಸವೂ ಮಾಡಲಾಗುತ್ತಿದೆ’ ಎಂದರು.
ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಅಭಿಷೇಕ್ ಪಾಟೀಲ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಜನರು ಕೂಡ ಸರ್ಕಾರದ ಕೆಲಸವನ್ನು ಮೆಚ್ಚುತ್ತಿದ್ದಾರೆ’ ಎಂದರು.
ಯುವ ಮುಖಂಡ ಗೌತಮ ಬಿ.ನಾರಾಯಣರಾವ ಮಾತನಾಡಿ, ‘ಎನ್‌ಎಸ್‌ಯುಐ ರಾಷ್ಟ್ರಮಟ್ಟದಲ್ಲಿ ಯುವ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಸಾಗರ್ ಖಂಡ್ರೆಯವರಿಗೆ ಹೊಸ ಜವಾಬ್ದಾರಿ ಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಯುವಕರ ಸಂಘಟನೆಗೆ ಸಹಾಯಕವಾಗಲಿದೆ’ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫರೀದ್, ಹಾಲು ಉತ್ಪಾದಕ ಘಟಕದ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಸಚಿನ ಮಲ್ಕಾಪುರೆ, ದೀಪಕ್ ಥಮಕೆ, ಸತೀಶ ಮಡಿವಾಳ ಇತರರು ಹಾಜರಿದ್ದರು.
Highlights - ನೂರಾರು ಕಾರ್ಯಕರ್ತರ ಬೈಕ್ ರ್‍ಯಾಲಿ ತೆರೆದ ವಾಹನದಲ್ಲಿ ಖಂಡ್ರೆ ಮೆರವಣಿಗೆ ಅಭಿಮಾನಿ ಬಳಗದಿಂದ ಅದ್ದೂರಿ ಸನ್ಮಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.