ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ

ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ
Published 11 ಮೇ 2024, 15:46 IST
Last Updated 11 ಮೇ 2024, 15:46 IST
ಅಕ್ಷರ ಗಾತ್ರ

ಬೀದರ್‌: ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ವಿವಿಧ ಕಡೆಗಳಿಂದ ಬಂದು, ಸಂಭ್ರಮಕ್ಕೆ ಸಾಕ್ಷಿಯಾದರು. ಥೇಟ್‌ ಮದುವೆ ಮನೆಯಂತಯ ವಾತಾವರಣ ಸೃಷ್ಟಿಯಾಗಿತ್ತು.

ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಅವರು ಉದ್ಘಾಟಿಸಿ, ಸರಸ್ವತಿ ಶಾಲೆಯು ಸಂಸ್ಕಾರದ ತೊಟ್ಟಿಲು. ಶಾಲೆಯು ಮಕ್ಕಳನ್ನು ಕೇವಲ ಅಂಕ ಗಳಿಸಲು ಸೀಮಿತಗೊಳಿಸದೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅವರ ತನು–ಮನದಲ್ಲಿ ಬಿತ್ತಿ ಬೆಳೆಸುತ್ತಿದೆ ಎಂದು ಹೇಳಿದರು.

ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪ್ರಾಥಮಿಕ ಶಾಲೆ ಭದ್ರ ಬುನಾದಿ ಇದ್ದಂತೆ. ಇಲ್ಲಿ ಕಲಿತ ಪಾಠ, ಆಟ, ದೇಶಭಕ್ತಿ, ಆಚಾರ-ವಿಚಾರಗಳು ನಮ್ಮ ಜೀವನದ ಕೊನೆಯವರೆಗೂ ಉಳಿಯುತ್ತವೆ. ಹಳೆಯ ನೆನಪುಗಳೆಂದರೆ ಬಂಗಾರದ ಕ್ಷಣಗಳು. ಅವುಗಳನ್ನು ಮರೆಯದೆ ‘ಕೆರೆಯ ನೀರು ಕೆರೆಗೆ ಚೆಲ್ಲಿದಂತೆ’ ನಾವು ಶಾಲೆಯಲ್ಲಿ ಪಟ್ಟ ಕಷ್ಟಗಳು, ಕುಂದುಕೊರತೆಗಳು ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದೆಂದರೆ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಶಕ್ತಿ ತುಂಬಬೇಕು. ಸಂಸ್ಥೆಯು ಇನ್ನೂ ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂದರು.

ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ, ಶಾಲೆ ಮತ್ತು ಶಿಕ್ಷಕರು ಎಂದರೆ ನನಗೆ ಅತ್ಯುನ್ನತ ಪ್ರೀತಿ. ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ ಏನಾದರೂ ಉಪಕಾರ ಮಾಡಬೇಕು. ಅದು ಅವರ ಕರ್ತವ್ಯವೂ ಹೌದು. ಇತರೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ಸಹಾಯ ಹಸ್ತ ಚಾಚಬೇಕು. ಭಾರತಾಂಬೆಯ ಕೀರ್ತಿ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಬೇಕೆಂದು ತಿಳಿಸಿದರು.

ಬೆಂಗಳೂರಿನ ರೂಟ್ಸ್ ಮತ್ತು ಬ್ರ್ಯಾಂಚಸ್‌ ರಿಸರ್ಚ್ ಫೌಂಡೇಶನ್ ಪ್ರಮುಖ ಜಿ.ಆರ್.ಜಗದೀಶ ಮಾತನಾಡಿ, ಸರಸ್ವತಿ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ದೇಶ-ವಿದೇಶಗಳಲ್ಲಿ ಬೆಳಗಲಿ. ಭಾರತದ ಸಂಸ್ಕೃತಿ, ಹಿರಿಮೆ-ಗರಿಮೆ ಹೆಚ್ಚಿಸಲಿ. ಸಂಘಟಿತರಾಗಿ, ಜ್ಞಾನವಂತರಾಗಿ ಬದುಕಲಿ ಎಂದು ಶುಭ ಹಾರೈಸಿದರು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಎಸ್.ಬಿ.ಸಜ್ಜನಶೆಟ್ಟಿ ಮಾತನಾಡಿ, ಒಂದು ಶಾಲೆಯ ಏಳಿಗೆಗೆ ಶಿಕ್ಷಕರು, ಪಾಲಕರು, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಬಹಳ ಮುಖ್ಯ. ನಮ್ಮಲ್ಲಿ ಶಿಕ್ಷಣ ಪಡೆದುಕೊಂಡ ಮಕ್ಕಳಲ್ಲಿ ಶಿಸ್ತು, ಸಂಯಮ, ಕ್ಷಮತೆ, ಸಮಯಪಾಲನೆ, ನೈತಿಕ ಶಿಕ್ಷಣ, ಸಂಸ್ಕಾರ ಪಡೆದುಕೊಳ್ಳುತ್ತಾರೆ ಎಂದರು.

ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಪ್ರೊ. ವೀಣಾ ಜಲಾದೆ, ವೀರೇಶ ಸ್ವಾಮಿ, ತೇಜಸ್ವಿನಿ, ಸಂಸ್ಥೆಯ ಕಾರ್ಯದರ್ಶಿ ಹಣಮಂತರಾವ ಪಾಟೀಲ, ಸಂಸ್ಥಾಪಕ ಕಾರ್ಯದರ್ಶಿ ನಾರಾಯಣರಾವ ಮುಖೇಡಕರ್, ಪ್ರಮುಖರಾದ ರವಿ ಮೂರ್ತಿ, ಸುಲೋಚನಾ ಅಕ್ಕ, ಭಗುಸಿಂಗ್ ಜಾಧವ್, ರೇವಣಸಿದ್ದಪ್ಪ ಜಲಾದೆ, ಪ್ರೊ. ವೀರಶೆಟ್ಟಿ ಮೈಲೂರಕರ್, ದಾಕ್ಷಾಯಣಿ ಅಕ್ಕ, ನಾಗೇಶರೆಡ್ಡಿ, ಸರಸ್ವತಿ ಸ್ವಾಮಿ, ಸತ್ಯಪ್ರಭಾ ಗರ್ಜೆ, ರೇಣುಕಾ ಹಲಬರ್ಗೆ, ಮಲ್ಲಿಕಾರ್ಜುನ ಪಾಟೀಲ ಹಾಜರಿದ್ದರು. ಕಿರುಚಿತ್ರ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಳೆಯ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಳೆಯ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT