ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಕೋಟಿ ಮೌಲ್ಯದ ಗುಟ್ಕಾ, ಪಾನ್‌ ಮಸಾಲ ಜಪ್ತಿ

ಅನುಮತಿ ಪಡೆಯದೆ ಗುಟ್ಕಾ ತಯಾರಿಸಿ ಸಂಗ್ರಹ; ಅವಧಿ ಮೀರಿರುವುದು ದೃಢ
Published 16 ಜನವರಿ 2024, 15:17 IST
Last Updated 16 ಜನವರಿ 2024, 15:17 IST
ಅಕ್ಷರ ಗಾತ್ರ

ಬೀದರ್‌: ಅನುಮತಿ ಪಡೆಯದೆ ತಯಾರಿಸಿ, ಸಂಗ್ರಹಿಸಿಟ್ಟಿದ್ದ ₹ 1 ಕೋಟಿಗೂ ಅಧಿಕ ಮೌಲ್ಯದ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿದ್ದ ಗುಟ್ಕಾ, ಪಾನ್‌ ಮಸಾಲ ಹಾಗೂ ಯಂತ್ರೋಪಕರಣಗಳನ್ನು ನ್ಯೂ ಟೌನ್‌ ಪೊಲೀಸರು ಇಲ್ಲಿನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಜಪ್ತಿ ಮಾಡಿದ್ದಾರೆ.

‘ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದಾಗ, ಆರೋಪಿಗಳು ಪರಾರಿಯಾಗಿದ್ದಾರೆ. ಕಾರ್ಮಿಕರಷ್ಟೇ ಅಲ್ಲಿ ಇದ್ದರು. ಅಲ್ಲಿದ್ದವರನ್ನು ವಿಚಾರಿಸಿದಾಗ ಖುಸ್ರೂ ಹಾಗೂ ರಾಜು ಎಂಬುವವರು ಗುಟ್ಕಾ, ಪಾನ್‌ ಮಸಾಲ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಖುಸ್ರೂ ಹೊರದೇಶಕ್ಕೆ ಹೋಗಿರುವ ಸಾಧ್ಯತೆ ಇದ್ದು, ರಾಜು ಹೈದರಾಬಾದ್‌ನಲ್ಲಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಏನೇನು ಜಪ್ತಿ:

₹49.50 ಲಕ್ಷ ಮೌಲ್ಯದ ಪಾನ್‌ ಮಸಾಲ ಪೌಚ್‌ಗಳು, ₹17.50 ಲಕ್ಷ ಮೌಲ್ಯದ ತಂಬಾಕು ಪೌಚ್‌ಗಳು, ₹99 ಸಾವಿರ ಮೌಲ್ಯದ ಮತ್ತೊಂದು ಕಂಪನಿಯ ಪಾನ್‌ ಮಸಾಲ ಪ್ಯಾಕೆಟ್‌ಗಳು, ₹37 ಲಕ್ಷದ ‘ಸಲಾರ್‌’ ಪಾನ್‌ ಮಸಾಲ ಪೌಚ್‌ಗಳು, ₹5 ಲಕ್ಷ ಮೌಲ್ಯದ 25 ಕ್ವಿಂಟಲ್‌ ಛಾಲಿಯಾ, ₹18.75 ಲಕ್ಷ ಬೆಲೆಬಾಳುವ 15 ಕ್ವಿಂಟಲ್‌ ಪಾನ್‌ ಮಸಾಲ ಪೌಡರ್‌, ₹10.40 ಲಕ್ಷ ಮೌಲ್ಯದ 13 ಪಾನ್‌ ಮಸಾಲ ತಯಾರಿಸುವ ಯಂತ್ರೋಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅವುಗಳ ಒಟ್ಟು ಮೌಲ್ಯ ₹1.02 ಕೋಟಿ ಆಗಲಿದೆ.

‘ಸ್ಥಳಕ್ಕೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಮಹೇಶ್ ಪಾಟೀಲ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಮನೋಹರ್‌ ಅವರು ಭೇಟಿ ನೀಡಿ, ತಂಬಾಕು, ಪಾನ್‌ ಮಸಾಲ ಪರಿಶೀಲಿಸಿದ್ದಾರೆ. ಈಗಾಗಲೇ ಅದರ ಅವಧಿ ಮುಗಿದು ಹೋಗಿದೆ. ಜನ ಅದನ್ನು ಸೇವಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮಾಹಿತಿ ನೀಡಿದ್ದಾರೆ’ ಎಂದು ಚನ್ನಬಸವಣ್ಣ ತಿಳಿಸಿದ್ದಾರೆ.

ಡಿವೈಎಸ್ಪಿ ಶಿವನಗೌಡ, ನ್ಯೂಟೌನ್‌ ಪಿಐ ವಿಜಯಕುಮಾರ, ಪಿಎಸ್‌ಐ ತಸ್ಲೀಮ್‌ ಸುಲ್ತಾನಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT