ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಶೇ 20ರಷ್ಟು ಮಾತ್ರ ಹಾಜರಾತಿ

ಉತ್ಸಾಹದಿಂದ ಶಾಲಾ, ಕಾಲೇಜಿಗೆ ಬಂದ ವಿದ್ಯಾರ್ಥಿಗಳು
Last Updated 1 ಜನವರಿ 2021, 13:53 IST
ಅಕ್ಷರ ಗಾತ್ರ

ಬೀದರ್: ಹತ್ತು ತಿಂಗಳ ನಂತರ ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಶುರುವಾದವು. ಮನೆಯಲ್ಲೇ ಬೇಸತ್ತಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲಾ ಕಾಲೇಜುಗಳಿಗೆ ಬಂದರು.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ, ಕಾಲೇಜುಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಸ್ಯಾನಿಟೈಜ್‌ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಿಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿದ ನಂತರ ತರಗತಿಗಳ ಒಳಗೆ ಬಿಡಲಾಯಿತು.

ನಗರದ ಮೈಲೂರ್‌ ಕ್ರಾಸ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರು ಪ್ರವೇಶ ದ್ವಾರದಲ್ಲೇ ನಿಂತು ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡರು. ಕೆಲ ಶಾಲೆಗಳಲ್ಲಿ ಶಿಕ್ಷಕರು ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ ನೀಡಿದರೆ, ಕೆಲವು ಕಡೆ ಹೂವು ನೀಡಿ ಬರ ಮಾಡಿಕೊಳ್ಳಲಾಯಿತು. ಒಂದು ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿ, ಅಂತರ ಕಾಯ್ದುಕೊಳ್ಳಲಾಯಿತು.

ವಿದ್ಯಾರ್ಥಿಗಳಿಲ್ಲದೆ ಹಾಳು ಬಿದ್ದಂತೆ ಕಾಣುತ್ತಿದ್ದ ತರಗತಿಗಳಲ್ಲಿ ವಿದ್ಯಾರ್ಥಿಗಳ ಕಲರವ ಹಾಗೂ ಲವಲವಿಕೆ ಕಂಡು ಬಂದಿತು. ನಗರ ಪ್ರದೇಶದ ಶಾಲೆಗಳಲ್ಲಿ ಶೇಕಡ 15ರಿಂದ 20ರಷ್ಟು ಹಾಜರಾತಿ ಕಂಡು ಬಂದಿತು. ಬೀದರ್ ತಾಲ್ಲೂಕಿನ ಆಣದೂರು, ಕೊಳಾರ(ಕೆ) ಗ್ರಾಮದ ಶಾಲೆಗಳಿಗೆ ವಿದ್ಯಾರ್ಥಿಗಳೇ ಬಂದಿರಲಿಲ್ಲ. ಕಮಠಾಣಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯ 96 ವಿದ್ಯಾರ್ಥಿಗಳ ಪೈಕಿ, 32 ಹಾಗೂ ಎಂಟನೆಯ ತರಗತಿಯ 60 ವಿದ್ಯಾರ್ಥಿಗಳಪೈಕಿ 10 ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. 9ನೇ ತರಗತಿಯ ಒಬ್ಬ ವಿದ್ಯಾರ್ಥಿಯೂ ಶಾಲೆಗೆ ಬಂದಿರಲಿಲ್ಲ. ಗಡಿ ಗ್ರಾಮಗಳ ಶಾಲೆಗಳಲ್ಲೂ ಇದೇ ಪರಿಸ್ಥಿತಿ ಇತ್ತು.

ಆನ್‌ಲೈನ್‌ ತರಗತಿಗಳು ನಮಗೆ ಇಷ್ಟವಾಗಲಿಲ್ಲ. ತರಗತಿಗಳಲ್ಲಿ ಪ್ರತ್ಯಕ್ಷವಾಗಿ ಪಾಠ ಕೇಳಿ, ಅನುಮಾನಗಳಿದ್ದರೆ ಸ್ಥಳದಲ್ಲೇ ಶಿಕ್ಷಕರಿಂದ ಪರಿಹರಿಸಿಕೊಳ್ಳಲು ಸಾಧ್ಯವಾಗಲಿದೆ. ಶಾಲೆ ಶುರುವಾಗಿರುವುದು ಖುಷಿಯಾಗಿದೆ ಎಂದು ಮೈಲೂರು ಶಾಲೆಯ ವಿದ್ಯಾರ್ಥಿಗಳು ಹೇಳಿದರು.

ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಗತಿಗೆ ಬರಮಾಡಿಕೊಂಡರು. ಕೈಗೆ ಸ್ಯಾನಿಟೈಸರ್‌ ಹಾಕಿ, ಥರ್ಮಲ್‌ ಸ್ಕ್ರೀನಿಂಗ್‌ ಮಾಡಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಹಾಗೂ ತರಗತಿಯಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ಸೂಚನೆ ನೀಡಿದರು.

ಕರ್ನಾಟಕ ಪದವಿ ಪೂರ್ವ ಕಾಲೇಜಿಗೆ ಶೇಕಡ 36.90ರಷ್ಟು ವಿದ್ಯಾರ್ಥಿಗಳು ಮಾತ್ರ ಬಂದಿದ್ದರು. ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ವಿರಳವಾಗಿತ್ತು.

‘ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದರಿಂದ ಬಹಳಷ್ಟು ವಿದ್ಯಾರ್ಥಿಗಳು ಬೇಗ ಎದ್ದಿರಲಿಲ್ಲ. ಸೋಮವಾರದಿಂದ ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಬರಲಿದ್ದಾರೆ’ ಎಂದು ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ ಹೇಳಿದರು.

ಕೇವಲ ಶೇಕಡ 22ರಷ್ಟು ಹಾಜರಾತಿ

ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಟ್ಟಾರೆ ಶೇಕಡ 21 ರಿಂದ 22 ರಷ್ಟು ಮಾತ್ರ ಹಾಜರಾತಿ ಕಂಡು ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಶೇ 31.96, ಅನುದಾನಿತ ಶಾಲೆಗಳಲ್ಲಿ ಶೇ 20.33 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ 12.58 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1,591 ವಿದ್ಯಾರ್ಥಿಗಳ ಪೈಕಿ 305, ಅನುದಾನಿತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2,380 ವಿದ್ಯಾರ್ಥಿಗಳ ಪೈಕಿ 825, ಅನುದಾನ ರಹಿತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 9,826 ವಿದ್ಯಾರ್ಥಿಗಳ ಪೈಕಿ 3,625 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟಾರೆ ಹಾಜರಾತಿ ಶೇಕಡ 22ರಷ್ಟೂ ದಾಟಿರಲಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದ್‌ಕರ್‌ ಹೇಳಿದರು.

ಹೊಸ ವರ್ಷದ ಮೊದಲ ದಿನ ಹಾಗೂ ಶಾಲೆ ಆರಂಭದ ದಿನ ಸಾಮಾನ್ಯವಾಗಿ ವಿದ್ಯಾರ್ಥಿಗಳು ಕಡಿಮೆಯೇ ಬರುತ್ತಾರೆ. ಸೋಮವಾರ ಹಾಜರಾತಿ ಸಂಖ್ಯೆ ಶೇಕಡ 80ರಿಂದ 90 ದಾಟಲಿದೆ ಎಂದು ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಶಿಕ್ಷಕರು ತಿಳಿಸಿದರು.

ಗುರುವಾರ ತಡ ರಾತ್ರಿ ವರೆಗೂ ಅನೇಕ ವಿದ್ಯಾರ್ಥಿಗಳು ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳಿಗೆ ಬಂದಿಲ್ಲ. ಸೋಮವಾರದಿಂದ ಬಹುತೇಕ ಎಲ್ಲ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT