ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಪಶು ವಿವಿ ವಿಭಜನೆ ಸಲ್ಲದು: ಬಸವರಾಜ ಧನ್ನೂರ ಹೇಳಿಕೆ

ಬಸವ ದಳ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿಕೆ
Last Updated 5 ಮಾರ್ಚ್ 2021, 11:08 IST
ಅಕ್ಷರ ಗಾತ್ರ

ಬೀದರ್: ‘ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ವಿಭಜಿಸಬಾರದು’ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.

ಸರ್ಕಾರ, ಶಿವಮೊಗ್ಗದಲ್ಲಿ ಬೇರೆ ವಿಶ್ವವಿದ್ಯಾಲಯ ಸ್ಥಾಪಿಸಿದರೂ ನಮ್ಮ ಅಭ್ಯಂತರ ಇಲ್ಲ. ಆದರೆ, ಹೊಸ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ತೀವ್ರ ವಿರೋಧ ಇದೆ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಡಾ.ನಂಜುಂಡಪ್ಪ ವರದಿ ಆಧರಿಸಿ 2005 ರಲ್ಲಿ ಬೀದರ್‌ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಅಗತ್ಯ ಸೌಕರ್ಯ ಕಲ್ಪಿಸಿ, ವಿಶ್ವವಿದ್ಯಾಲಯವನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಬದಲು ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪಿಸಿ, ವಿಭಜನೆ ಮಾಡಲು ಹೊರಟಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಿದ್ದಲ್ಲಿ ಬೀದರ್ ವಿಶ್ವವಿದ್ಯಾಲಯದ ಅಧೀನದ 20 ಸಂಸ್ಥೆಗಳು ಅದರ ವ್ಯಾಪ್ತಿಗೆ ಸೇರುವ ಸಾಧ್ಯತೆಗಳು ಇವೆ ಎಂದು ತಿಳಿದು ಬಂದಿದೆ. ಬೀದರ್ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೇವಲ ಮೂರು ಮಹಾವಿದ್ಯಾಲಯ ಹಾಗೂ ಮೂರು ಸಂಶೋಧನಾ ಕೇಂದ್ರಗಳು ಉಳಿಯಲಿವೆ. ಅಂಥ ಬೆಳವಣಿಗೆ ನಡೆದಲ್ಲಿ ಜಿಲ್ಲೆಯ ಪ್ರಗತಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ಜಿಲ್ಲೆಯಾಗಿರುವ ಬೀದರ್‌ಗೆ ಹಿಂದಿನಿಂದಲೂ ಮಲತಾಯಿ ಧೋರಣೆ ತೋರುತ್ತಲೇ ಬರಲಾಗಿದೆ. ಇದೀಗ ಹೇಳಿಕೊಳ್ಳಲು ಇರುವ ಏಕೈಕ ವಿಶ್ವವಿದ್ಯಾಲಯವನ್ನೂ ವಿಭಜಿಸಿದರೆ ಜನ ಹೋರಾಟದ ದಾರಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯವರೇ ಆದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಹೊಸ ಪಶು ವಿಶ್ವವಿದ್ಯಾಲಯ ಸ್ಥಾಪನೆಯಾಗದಂತೆ ನೋಡಿಕೊಂಡು ಜಿಲ್ಲೆಯ ಹಿತ ರಕ್ಷಿಸಬೇಕು. ವಿಶ್ವವಿದ್ಯಾಲಯ ಪ್ರಗತಿಗೆ ಪೂರಕವಾದ ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಗೆ ಆಗಬಹುದಾದ ಅನ್ಯಾಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಸರ್ಕಾರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನ ಕಲ್ಪಿಸಬೇಕು. ಕಾಯಂ ಸಿಬ್ಬಂದಿ ನೇಮಕ, ಮುಖ್ಯ ಆಡಳಿತ ಕಚೇರಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT