ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಡಿ.22ರಂದು

ಮಹಾಕ್ರಾಂತಿ ನಾಟಕ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
Last Updated 20 ಡಿಸೆಂಬರ್ 2019, 9:13 IST
ಅಕ್ಷರ ಗಾತ್ರ

ಭಾಲ್ಕಿ: ‘ಪಟ್ಟಣದಲ್ಲಿ ಡಿ.22 ರಂದು ನಡೆದಾಡುವ ದೇವರು, ಶತಾಯುಷಿಗಳಾಗಿದ್ದ ಡಾ.ಚನ್ನಬಸವ ಪಟ್ಟದ್ದೇವರ 130ನೇ ಜಯಂತ್ಯುತ್ಸವ, ಭಾವೈಕ್ಯ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ’ ಎಂದು ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಹಿರೇಮಠದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಂದು ಬೆಳಿಗ್ಗೆ 6.30ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮದವರೆಗೆ ಬಸವಪ್ರಭಾತ ಪಥ ಸಂಚಲನ ನಡೆಯಲಿದೆ. ಚನ್ನಬಸವಾಶ್ರಮದಲ್ಲಿ ಹಿರಿಯ ವಕೀಲ ರಾಜಶೇಖರ ಅಷ್ಟೂರೆ ಷಟಸ್ಥಲ ಧ್ವಜರೋಹಣ ನೆರವೇರಿಸಲಿದ್ದಾರೆ. ಮಧ್ಯಾಹ್ನ 1ಕ್ಕೆ ಅಕ್ಕನ ಬಳಗದ ಶರಣೆಯರು ತೊಟ್ಟಿಲು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದರು.

ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಶಿವಮೊಗ್ಗ ಜಿಲ್ಲೆಯ ಆನಂದಪುರಂ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ಚಿತ್ತಲಗಿ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿ ಗುರುಮಹಾಂತ ಮಹಾ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಸತಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸಚಿವ ವಿ.ಸೋಮಣ್ಣ ಸಮಾರಂಭ ಉದ್ಘಾಟಿಸಲಿದ್ದಾರೆ. ಪಶು ಸಂಗೋಪನಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಆಗಿರುವ ಪ್ರಭು ಚವ್ಹಾಣ ಅಧ್ಯಕ್ಷತೆ ವಹಿಸುವರು.
ಸಂಸದ ಭಗವಂತ ಖೂಬಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ, ಮಹಾದೇವ ಪ್ರಕಾಶ ಅನುಭಾವ ಮಂಡಿಸಲಿದ್ದಾರೆ ಎಂದರು.

ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ದಿನದರ್ಶಿಕೆ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಸವ ಗುರುವಿನ ಪೂಜೆ ನೆರವೇರಿಸಲಿದ್ದಾರೆ. ವಿಧಾನ ಪರಿಷತ್‍ನ ಮಾಜಿ ಉಪಸಭಾಪತಿ ಕೇಶವರಾವ ನಿಟ್ಟೂರಕರ್ ಅವರಿಗೆ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಮರ್ಗಾ ಶಾಸಕ ಜ್ಞಾನರಾಜ ಚೌಗಲೆ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 2ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಸಂಜೆ 4ಕ್ಕೆ ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ಹೂವಿನಶಿಗ್ಲಿ ಸೋನಾಳ ವಿರಕ್ತ ಮಠದ ಚನ್ನವೀರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸದಲಗಾ ಗುರುದೇವಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ, ನವದೆಹಲಿ ತೋಂಟದಾರ್ಯ ಸಂಸ್ಥಾನ ಶಾಖಾ ಮಠದ ಡಾ.ಮಹಾಂತ ದೇವರನ್ನು ಸನ್ಮಾನಿಸಲಾಗುತ್ತಿದೆ. ಗೋರಚಿಂಚೋಳಿ ಸಿದ್ದರಾಮೇಶ್ವರ ಮಠದ ಸಿದ್ದರಾಮೇಶ್ವರ ಪಟ್ಟದ್ದೇವರು, ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರ್ಗಿಯ ವಿಶೇಷ ಅಧಿಕಾರಿ ಎಸ್.ದಿವಾಕರ ಅನುಭಾವ ಮಂಡಿಸಲಿದ್ದಾರೆ ಎಂದರು.

ಲೋಕನಾಥ ಚಾಂಗಲೇರಾ, ಸಂಗಯ್ಯ ಸ್ವಾಮಿ ವಚನ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ವೈ.ಡಿ.ಬದಾಮಿ, ಮಂಜುಳಾ ಬಾದಮಿ ನಿರ್ದೇಶನದಲ್ಲಿ ಗುರುಚನ್ನಬಸವ ಕಲಾ ಕ್ರೀಡಾ ವೇದಿಕೆ ಟ್ರಸ್ಟ್ ವತಿಯಿಂದ ಮಹಾಕ್ರಾಂತಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಗುರುಬಸವ ಪಟ್ಟದ್ದೇವರು ಮಾತನಾಡಿ,‘ಈ ಭಾಗಕ್ಕೆ ಡಾ.ಚನ್ನಬಸವ ಪಟ್ಟದ್ದೇವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಹಾಗೂ ಸಚ್ಚಿದಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT