ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್: ಬೀದಿನಾಯಿಗಳ ಕಾಟಕ್ಕೆ ಜನರು ಹೈರಾಣ

ಹುಮನಾಬಾದ್: ಶಾಲಾ–ಕಾಲೇಜು ವಿದ್ಯಾರ್ಥಿಗಳು, ವಾಹನ ಸವಾರರಲ್ಲಿ ಹೆಚ್ಚಿದ ಆತಂಕ
Published 13 ಸೆಪ್ಟೆಂಬರ್ 2023, 5:14 IST
Last Updated 13 ಸೆಪ್ಟೆಂಬರ್ 2023, 5:14 IST
ಅಕ್ಷರ ಗಾತ್ರ

ವರದಿ: ಗುಂಡು ಅತಿವಾಳ

ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಿದ್ದು, ಜನರು ಹೈರಾಣಾಗಿದ್ದಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ವಾಹನ ಸಾವರರು ಆತಂಕದಲ್ಲಿಯೇ ಓಡಾಡುವಂತಾಗಿದೆ.

ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಎಲ್ಲ ಬೀದಿಗಳಲ್ಲಿ ಸಂಚರಿಸಿದರೆ ಮೂರ್ನಾಲ್ಕು ನಾಯಿಗಳ ಹಿಂಡುಗಳಿವೆ. ದೇವಸ್ಥಾನ, ಆಟದ ಮೈದಾನಗಳಲ್ಲೂ ಇವುಗಳ ಕಾಟ ಹೆಚ್ಚಿದೆ. ಇದರಿಂದ ಭಕ್ತರು ದೇವಸ್ಥಾನಕ್ಕೆ ಬರುವುದು, ಮಕ್ಕಳು ಆಟದ ಮೈದಾನದಕ್ಕೆ ಹೋಗುವುದು ದುಸ್ತರವಾಗಿದೆ.

ನಡು ರಸ್ತೆಯಲ್ಲಿಯೇ ಮಲಗುವ ನಾಯಿಗಳು ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗಿ ಸವಾರರಿಗೆ ಭಯ ಹುಟ್ಟಿಸುತ್ತಿವೆ. ಇವುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಅನೇಕರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ , ಸರ್ದಾರ್ ವಲ್ಲಭ ಭಾಯ್ ಪಟೇಲ್ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೇ ಬೀಡು ಬಿಡುವ ನಾಯಿಗಳು ಅಡ್ಡಾದಿಡ್ಡಿ ಓಡಾಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿವೆ. ಜತೆಗೆ ರಾತ್ರಿ ವೇಳೆ ತಿರುಗಾಟಕ್ಕೂ ಭಯ ಬೀಳುವಂತೆ ಮಾಡುತ್ತಿವೆ.

ತೇರು ಮೈದಾನದ ಬಳಿಯಿರುವ ಮುಖ್ಯ ರಸ್ತೆ, ಹಳೇ ತಹಶೀಲ್ದಾರ್‌ ಕಚೇರಿ ಬಳಿ ಹಾಗೂ ಅದರ ಪಕ್ಕದಲ್ಲಿರುವ ಎಸ್.ಬಿ.ಐ. ಬ್ಯಾಂಕ್ ಹತ್ತಿರ ಯಾವಾಗಲು ನಾಯಿಗಳ ಹಿಂಡು ಕಂಡು ಬರುತ್ತಿದೆ. ಇದರಿಂದ ತಹಶೀಲ್ದಾರ್‌ ಕಚೇರಿ ಹಾಗೂ ಬ್ಯಾಂಕ್‌ನ ಗ್ರಾಹಕರು ಆತಂಕದಲ್ಲಿಯೇ ಬರಬೇಕು. ಅದರ ಜತೆಗೆ ಕಲ್ಲೂರ್ ರಸ್ತೆಯ ಮಧ್ಯ ಭಾಗದಲ್ಲಿಯೇ ನಾಯಿಗಳು ಮಲಗಿರುತ್ತವೆ. ಬಸ್‌ನಿಲ್ದಾಣ, ಶಾಲಾ ಆವರಣಗಳಲ್ಲಿಯೂ ನಾಯಿಗಳ ಹಿಂಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿಯೇ ಶಾಲೆಗೆ ತೆರಳಬೇಕಾಗಿದೆ. ಕೋಳಿವಾಡ, ಶಿವಪುರ ‌ಬಡಾವಣೆ, ಜೇರಪೇಟ್, ಧನಗರ ಗಡ್ಡ ಬಡಾವಣೆಯಲ್ಲಿ ನಾಯಿಗಳು ಹೆಚ್ಚಾಗಿವೆ. ಇವುಗಳ ಕಾಟಕ್ಕೆ ಸಂಜೆ ಹೊತ್ತಿನಲ್ಲಿ ಬಡಾವಣೆಯಲ್ಲಿ ಮಕ್ಕಳು ಓಡಾಡುವುದು ತೀವ್ರ ಸಮಸ್ಯೆಯಾಗಿದೆ ಎಂದು ಪಟ್ಟಣದ ನಿವಾಸಿ ಗೌತಮ್ ಬೇಸರ ವ್ಯಕ್ತಪಡಿಸಿದ್ದಾರೆ.‌

ಪಟ್ಟಣದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ರಾತ್ರಿ ಹೊತ್ತಿನಲ್ಲಿ ಓಡಾಡಲು ಆಗುವುದಿಲ್ಲ. ವಾಹನಗಳ ಬೆನ್ನುಹತ್ತಿ ಕಚ್ಚಲು ಬರುತ್ತಿವೆ. ರಸ್ತೆಗೆ ಇಳಿಯಲು ಭಯ ಆಗುತ್ತದೆ. ನಾಯಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಇದನ್ನು ತಡೆಯುವ ಕೆಲಸ ಮಾಡಬೇಕು ಎಂದು ನಿವಾಸಿ ಗಣಪತಿ ಅಷ್ಟೋರೆ ಒತ್ತಾಯಿಸಿದ್ದಾರೆ.

ನಾಯಿಗಳು ಕೆಲವು ಅನಾರೋಗ್ಯದಿಂದ ಬಳಲುತ್ತಿವೆ. ಕೂದಲು ಉದುರಿ ರೋಗಿಷ್ಟವಾಗಿವೆ. ಇಂತಹ ನಾಯಿಗಳು ಮನುಷ್ಯರನ್ನು ಕಚ್ಚಿದರೆ ಹೇಗೆ? ಸಂಬಂಧಪಟ್ಟವರು ತಕ್ಷಣ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು

-ಲಕ್ಷ್ಮೀಕಾಂತ ಹಿಂದೋಡ್ಡಿ ನಿವಾಸಿ

ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಟೆಂಡರ್‌ ಶೀಘ್ರ ಕರೆಯಲಾಗುವುದು. ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಕಾರ್ಯ ಆರಂಭಿಸಿ ಕ್ರಮಕೈಗೊಳ್ಳಲಾಗುವುದು

-ಶಿವಕುಮಾರ್ ರಾಗಾ ಮುಖ್ಯಾಧಿಕಾರಿ ಪುರಸಭೆ ಹುಮನಾಬಾದ್

ಅಂಕಿ ಅಂಶಗಳು ನಾಯಿ ಕಚ್ಚಿರುವ ಪ್ರಕರಣಗಳು 2021-22;573 2023; 294

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT