ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಹೊಸ ಪಡಿತರ ಚೀಟಿಗೆ ತಪ್ಪದ ಪರದಾಟ: ಸರ್ಕಾರದ ಸವಲತ್ತುಗಳಿಂದ ಜನರು ವಂಚಿತ

Published 20 ನವೆಂಬರ್ 2023, 4:53 IST
Last Updated 20 ನವೆಂಬರ್ 2023, 4:53 IST
ಅಕ್ಷರ ಗಾತ್ರ

ಬೀದರ್‌: ಮಾರ್ಚ್‌ನಲ್ಲಿ ಸ್ಥಗಿತಗೊಂಡಿರುವ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದುವರೆಗೆ ಆರಂಭಗೊಂಡಿಲ್ಲ. ಇದರಿಂದಾಗಿ ಅನೇಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಅನೇಕ ಸವಲತ್ತುಗಳಿಂದ ವಂಚಿತರಾಗುತ್ತಿದ್ಧಾರೆ.

ಹಿಂದಿನ ಬಿಜೆಪಿ ಸರ್ಕಾರವು ಕೆಲವು ತಾಂತ್ರಿಕ ಕಾರಣಗಳನ್ನು ಕೊಟ್ಟು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಿತು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದೆ. ಹೀಗಿದ್ದರೂ ಸಮಸ್ಯೆ ಬಗೆಹರಿಸಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ.

ರಾಜ್ಯ ಸರ್ಕಾರವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೆ ತಂದ ನಂತರ ಕಾರ್ಡುಗಳನ್ನು ಹೊಂದಿಲ್ಲದವರು ಕೂಡ ಅರ್ಜಿ ಸಲ್ಲಿಸಿ ಹೊಸದಾಗಿ ಮಾಡಿಸಿಕೊಳ್ಳಲು ಮುಂದಾಗಿದ್ಧಾರೆ. ಆದರೆ, ಅರ್ಜಿ ಸಲ್ಲಿಕೆಯೇ ಸ್ಥಗಿತಗೊಂಡಿರುವುದರಿಂದ ಅವರೆಲ್ಲ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂಪ್ಯೂಟರ್‌ ಕೇಂದ್ರಗಳಿಗೆ ಸುತ್ತಾಡಿ ಸುಸ್ತಾಗುತ್ತಿದ್ದಾರೆ. ಹೆಚ್ಚಿನವರಿಗೆ ಹೊಸ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ವಿಷಯವೇ ಗೊತ್ತಿಲ್ಲ. ಮಧ್ಯವರ್ತಿಗಳಿಗೆ ಹಣ ಕೊಟ್ಟು ಪಡಿತರ ಪಡೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ಯಾರಂಟಿ ಸೇರಿದಂತೆ ಸರ್ಕಾರದ ಇತರೆ ಯೋಜನೆಗಳ ಸದುಪಯೋಗ ಪಡೆಯಬೇಕಾದರೆ ಪಡಿತರ ಹೊಂದಿರಬೇಕಾದದ್ದು ಬಹಳ ಅತ್ಯಗತ್ಯ. ಆದರೆ, ಅರ್ಜಿಗಳನ್ನೇ ಸ್ವೀಕರಿಸದ ಕಾರಣ ಜನ ದಿಕ್ಕು ತೋಚದೆ ಸುಮ್ಮನಾಗಿದ್ದಾರೆ. ತಮ್ಮೆದುರೇ ಹಲವರು ಸರ್ಕಾರದ ನಗದು ಯೋಜನೆಗಳ ಲಾಭ ಪಡೆಯುತ್ತಿರುವುದನ್ನು ನೋಡಿ ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾರೆ.

‘ನಾನು ಹೋದ ವರ್ಷ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೆ. ಏನೇನೋ ಕಾರಣಗಳನ್ನು ಕೊಟ್ಟು ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದ್ದರು. ಅಷ್ಟರಲ್ಲಿ ಅರ್ಜಿಗಳನ್ನು ಸದ್ಯ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದರು. ಸುಮಾರು ಏಳೆಂಟು ತಿಂಗಳಾದರೂ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಇದುವರೆಗೆ ಕಾರ್ಡ್‌ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ಪತ್ರೆ, ಶಾಲೆಗಳಿಗೆ ಹೆಚ್ಚಿನ ಹಣ ಪಾವತಿಸುವಂತಾಗಿದೆ. ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ನಮ್ಮಂತಹ ಬಡವರಿಗ ಸರ್ಕಾರ ಏನಾದರೂ ವ್ಯವಸ್ಥೆ ಮಾಡಬೇಕು’ ಎಂದು ಮೈಲೂರಿನ ನಿವಾಸಿ ರಾಧಾ ಹೇಳಿದರು.

‘ಸರ್ಕಾರ ಚುನಾವಣೆಗೂ ಮುನ್ನ ಅನೇಕ ಗ್ಯಾರಂಟಿಗಳನ್ನು ಘೋಷಿಸಿದೆ. ಅದನ್ನೀಗ ಈಡೇರಿಸಲೇಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ. ಹೊಸ ಅರ್ಜಿಗಳು ಬಂದರೆ ಮತ್ತಷ್ಟು ಹಣ ಬೇಕಾಗುತ್ತದೆ. ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರಿತು ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ಮಂಗಲಪೇಟ್‌ ನಿವಾಸಿ ರಾಜು ಆರೋಪಿಸಿದರು.

ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸುರೇಖಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಈ ಹಿಂದೆ ಅರ್ಜಿ ಸಲ್ಲಿಸಿದವರ ದಾಖಲೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಒಂದೇ ಕುಟುಂಬದಿಂದ ಪ್ರತ್ಯೇಕವಾದವರು ಇದರಲ್ಲಿ ಹೆಚ್ಚಿನವರಿದ್ದಾರೆ ಎಂದು ತಿಳಿಸಿದರು.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸದ್ಯ ನಡೆಯುತ್ತಿಲ್ಲ. ಆದರೆ, ಮೆಡಿಕಲ್‌ ಎಮರ್ಜೆನ್ಸಿ ಇದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಕೊಟ್ಟರೆ ಅದನ್ನು ಪರಿಶೀಲಿಸಿ ಮಾಡಿಕೊಡಲಾಗುತ್ತದೆ. ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಕೆಲಸ ಎಂದಿನಂತೆ ನಡೆಯುತ್ತಿದೆ ಎಂದು ಹೇಳಿದರು.


ಪೂರಕ ಮಾಹಿತಿ: ಗುಂಡು ಅತಿವಾಳ, ವೀರೇಶ್‌ ಎನ್‌. ಮಠಪತಿ, ಬಸವರಾಜ ಪ್ರಭಾ, ಮನ್ಮಥಪ್ಪ ಸ್ವಾಮಿ

ಬಾಕಿ ಇರುವ 10 ಸಾವಿರ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿಗೆ ಸೂಚನೆ ಬಂದಿದೆ. ಶೀಘ್ರ ಕೆಲಸ ಆರಂಭವಾಗಲಿದೆ.
–ಸುರೇಖಾ ಉಪನಿರ್ದೇಶಕಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ರೇಷನ್‌ ಕಾರ್ಡುದಾರರ ಮಾಹಿತಿ
153391 ಅಂತ್ಯೋದಯ 1091887 ಬಿಪಿಎಲ್‌ 178766 ಎಪಿಎಲ್‌ 1424044 ಒಟ್ಟು
2 ಸಾವಿರ ಬಿಪಿಎಲ್‌ ಕಾರ್ಡ್‌ ರದ್ದು
ಔರಾದ್: ಹೊಸದಾಗಿ ಪಡಿತರ ಚೀಟಿ ಪಡೆಯಲು ತಾಲ್ಲೂಕಿನ ಜನ ಪರದಾಡುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಹೊಸದಾಗಿ ಪಡಿತರ ಚೀಟಿ ವಿತರಣೆ ಆಗುತ್ತಿಲ್ಲ. ಅರ್ಜಿ ಹಾಕಲು ಆಗುತ್ತಿಲ್ಲ. ಪಡಿತರ ಚೀಟಿ ವಿಷಯದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ.‌ ಎಲ್ಲವೂ ವೆಬ್‌ಸೈಟ್ ಮೂಲಕ ನಡೆಯುತ್ತಿರುವುದರಿಂದ ಅದು ಕೆಲಸ ಮಾಡುತ್ತಿಲ್ಲ. ಹೀಗಾಗಿ ಅನೇಕ ಪಡಿತರ ಗ್ರಾಹಕರಿಗೆ ತಿಂಗಳ ಆಹಾರ ಧಾನ್ಯ ಸಿಗುತ್ತಿಲ್ಲ. ಅವರು ನಮ್ಮ ಬಳಿ ಬಂದು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು‌ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ಪಡಿತರ ಚೀಟಿ ವಿತರಣೆ ಒಂದೆಡೆ ಇರಲಿ ಇರುವ ಚೀಟಿ ರದ್ದಾಗುತ್ತಿವೆ. ತಾಲ್ಲೂಕಿನಲ್ಲಿ ಈ ವರ್ಷ 2 ಸಾವಿರಕ್ಕೂ ಹೆಚ್ಚು ಬಿಪಿಎಲ್  ಪಡಿತರ ಚೀಟಿ ರದ್ದಾಗಿವೆ ಎಂದು ಇಲಾಖೆ  ಮೂಲಗಳು ತಿಳಿಸಿವೆ.
ಹೊಸತಲ್ಲ ತಿದ್ದುಪಡಿಯಷ್ಟೇ
ಭಾಲ್ಕಿ: ತಾಲ್ಲೂಕಿನಲ್ಲಿ ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ ಕೆಲಸವಷ್ಟೇ ನಡೆಯುತ್ತಿದೆ. ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಜಾರಿಗೊಂಡ ಬಳಿಕ ಪಡಿತರ ಚೀಟಿಗೆ ಬೇಡಿಕೆ ಹೆಚ್ಚಾಗಿದೆ. ಗಂಡನ ಬದಲು ಹೆಂಡತಿ ಮನೆಯ ಯಜಮಾನಿ ಎಂದು ಶೇ 30ರಷ್ಟು ಮಂದಿ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ. ಪ್ರತಿ ತಿಂಗಳಲ್ಲಿ ಒಂದು ವಾರ ಹೊಸ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ವೆಂಕಟ್ 'ಪ್ರಜಾವಾಣಿ'ಗೆ ತಿಳಿಸಿದರು.
ಸಾರ್ವಜನಿಕರ ಪರದಾಟ
ಚಿಟಗುಪ್ಪ: ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿರುವುದರಿಂದ ತಾಲ್ಲೂಕಿನಲ್ಲಿ ಜನ ಪರದಾಟ ನಡೆಸುವಂತಾಗಿದೆ. ಜನ ನಿತ್ಯ ತಹಶೀಲ್ದಾರ್‌ ಕಚೇರಿಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ. ಕಂಪ್ಯೂಟರ್‌ ಕೇಂದ್ರಗಳು ಬಿಕೋ ಎನ್ನುತ್ತಿವೆ. ಇತ್ತೀಚೆಗೆ ಪಟ್ಟಣದಲ್ಲಿ ಜಿಲ್ಲಾಧಿಕಾರಿ ನಡೆಸಿದ ಜನತಾ ದರ್ಶನದಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಜನ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
2 ಸಾವಿರಕ್ಕೂ ಹೆಚ್ಚು ಜನರಿಂದ ಅರ್ಜಿ
ಹುಮನಾಬಾದ್: ವಿಧಾನಸಭಾ ಚುನಾವಣೆಗೂ ಮುನ್ನ ನಿಂತು ಹೋಗಿರುವ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿಯತನಕ ಶುರುವಾಗಿಲ್ಲ. ತಾಲ್ಲೂಕಿನಲ್ಲಿ ಎರಡು ಸಾವಿರಕ್ಕೂ ಅಧಿಕ ಜನ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಗಳನ್ನು ವಿಲೇವಾರಿಗೊಳಿಸಿಲ್ಲ. ಹೊಸ ಅರ್ಜಿ ಕೂಡ ಸ್ವೀಕರಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಪಡಿತರ ಚೀಟಿ ಮಾಡುವ ಪ್ರಕ್ರಿಯೆ ಬಂದ ಆಗಿರುವುದು ಇಲ್ಲಿಯವರೆಗೆ ಮರು ಆರಂಭಗೊಂಡಿಲ್ಲ. ಹೊಸ ಪಡಿತರ ಚೀಟಿ ಪಡೆಯಬೇಕು ಎಂದು ಜನರು ಕಚೇರಿಗೆ ಬಂದು ಮನವಿ ಸಲ್ಲಿಸಿ ಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಜನರು ಹೊಸ ಪಡಿತರ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT