ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆ ಸಂಪೂರ್ಣ ಸ್ತಬ್ಧ

ಸೋಂಕಿನ ಸರಪಳಿ ಮುರಿಯಲು ಲಾಕ್‌ಡೌನ್‌ಗೆ ಸ್ಪಂದಿಸಿದ ಜನ
Last Updated 12 ಜುಲೈ 2020, 13:27 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆ ನಗರ, ಪಟ್ಟಣ ಹಾಗೂ ಗಡಿ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕು ತಡೆಯುವ ದಿಸೆಯಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕರ್ತವ್ಯ ನಿರತ ಪೊಲೀಸರ ಸಂಖ್ಯೆ ಬೆರಳೆಣಿಯಷ್ಟಿದ್ದರೂ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿತ್ತು.

ಆಸ್ಪತ್ರೆ, ಮೆಡಿಕಲ್‌ ಹಾಗೂ ರಕ್ತ ತಪಾಸಣೆ ಕೇಂದ್ರಗಳನ್ನು ಹೊರತು ಪಡಿಸಿ, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್ ಸಾಮಗ್ರಿಗಳ ಮಾರಾಟ ಮಳಿಗೆ, ಪಾತ್ರೆ ಅಂಗಡಿಗಳು, ಹೋಟೆಲ್‌, ಖಾನಾವಳಿ, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬೀದಿ ಬದಿಯ ತರಕಾರಿ ಮಾರಾಟಗಾರರು ಕಂಡು ಬರಲಿಲ್ಲ.

ಪತ್ರಿಕೆಗಳ ವಿತರಕರು ಹಾಗೂ ಹಾಲು ಮಾರುವವರು ಬೆಳಗಿನ ಜಾವ ಬೈಕ್‌ ಹಾಗೂ ಸೈಕಲ್‌ಗಳ ಮೇಲೆ ಮನೆ ಮನೆಗೆ ತೆರಳಿ ಪತ್ರಿಕೆ, ಹಾಲಿನ ಪಾಕೆಟ್‌ಗಳನ್ನು ತಲುಪಿಸಿದರು.

ನಗರದ ಕೇಂದ್ರ ಬಸ್‌ ನಿಲ್ದಾಣ, ಗ್ರಾಮೀಣ ಸಾರಿಗೆ ಹಾಗೂ ನಗರ ಸಾರಿಗೆ ಬಸ್‌ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ದೂರದ ಊರುಗಳಿಂದ ಬೆಳಿಗ್ಗೆ ನಗರಕ್ಕೆ ಬಂದ ಪ್ರಯಾಣಿಕರು ಆಟೊರಿಕ್ಷಾಗಳಿಲ್ಲದೆ ತೊಂದರೆ ಅನುಭವಿಸಬೇಕಾಯಿತು. ಕೆಲವರು ತಮ್ಮ ಬ್ಯಾಗ್, ಕೈಚೀಲಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ತೆರಳಿದರೆ, ಇನ್ನು ಕೆಲವರು ಸಂಬಂಧಿಗಳಿಗೆ ಮೊಬೈಲ್‌ನಲ್ಲಿ ಕರೆ ಮಾಡಿ ಬೈಕ್‌ ಮೇಲೆ ಮನೆಗಳಿಗೆ ಹೋದರು.

ನಗರ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಟ್ಯಾಕ್ಸಿ, ಕಾರು, ಕ್ರೂಸರ್‌, ಜೀಪ್‌ ಹಾಗೂ ಆಟೊರಿಕ್ಷಾಗಳ ರಸ್ತೆಗೆ ಇಳಿಯಲಿಲ್ಲ. ಜನರು ಮನೆಯಲ್ಲೇ ಉಳಿದ ಕಾರಣ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT