ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ

Published 6 ಆಗಸ್ಟ್ 2023, 9:03 IST
Last Updated 6 ಆಗಸ್ಟ್ 2023, 9:03 IST
ಅಕ್ಷರ ಗಾತ್ರ

ಬೀದರ್‌: ‘ಅಮೃತ ಭಾರತ ನಿಲ್ದಾಣ’ ಯೋಜನೆಯಡಿ ಬೀದರ್‌ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಮೂಲಕ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಿಯವರು ಏಕಕಾಲಕ್ಕೆ ದೇಶದ 508 ರೈಲು ನಿಲ್ದಾಣಗಳ ನವೀಕರಣ ಕಾಮಗಾರಿಗೆ ಚಾಲನೆ ಕೊಟ್ಟರು. ಬೀದರ್‌ ರೈಲು ನಿಲ್ದಾಣಕ್ಕೆ ಒಟ್ಟು ₹24.40 ಕೋಟಿ ಅನುದಾನ ಮಂಜೂರಾಗಿದೆ. ನಿಲ್ದಾಣದ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ನಿಲ್ದಾಣದ ಮುಂಭಾಗ ಸಂಪೂರ್ಣ ಬದಲಾಗಲಿದೆ. ಪ್ರವೇಶ ದ್ವಾರದಲ್ಲಿ ವಿಶಾಲವಾದ ಪೋರ್ಟಿಕೊ ಬರಲಿದೆ. ಆಯಾ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ, ವಾಹನ ದಟ್ಟಣೆ ಉಂಟಾಗದ ರೀತಿಯಲ್ಲಿ ಇಡೀ ಪ್ರದೇಶದ ಅಭಿವೃದ್ಧಿ, 12 ಮೀಟರ್‌ ಅಗಲವಾದ ಮೇಲ್ಸೇತುವೆ, ಪ್ಲಾಟ್‌ಫಾರಂಗಳು ಸುಧಾರಣೆ ಕಾಣಲಿವೆ.

ಹಾಲಿ ಶೌಚಾಲಯಗಳನ್ನು ಅಭಿವೃದ್ಧಿ ಪಡಿಸಿ, ಇನ್ನಷ್ಟು ಹೊಸ ಶೌಚಾಲಯ ಬ್ಲಾಕ್‌ಗಳು ನಿರ್ಮಾಣವಾಗಲಿವೆ. ನಿರೀಕ್ಷಣಾ (ವೇಟಿಂಗ್‌) ಕೊಠಡಿಗಳ ಸುಧಾರಣೆ, ಎರಡು ಹೊಸ ಲಿಫ್ಟ್‌, ಮೂರು ಎಸ್ಕಲೇಟರ್‌ಗಳು ನಿರ್ಮಾಣಗೊಳ್ಳಲಿವೆ. ಇದರಿಂದಾಗಿ ಇಡೀ ನಿಲ್ದಾಣಕ್ಕೆ ಹೊಸ ಮೆರುಗು ಸಿಗಲಿದೆ. ಪ್ರಯಾಣಿಕರ ಸುಗಮ ಓಡಾಟಕ್ಕೂ ಸಹಕಾರಿಯಾಗಲಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ಈ ಹಿಂದೆ ರೈಲು ಪ್ರಯಾಣವೆಂದರೆ ಬಡವರಿಗೆ ಎಂಬ ಮಾತಿತ್ತು. ಆ ಹಣೆಪಟ್ಟಿ ಕಳಚಿದೆ. ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸೌಲಭ್ಯ ಹೊಂದಿರುವ 50 ‘ವಂದೇ ಭಾರತ್‌’ ರೈಲು ದೇಶದಾದ್ಯಂತ ಸಂಚರಿಸುತ್ತಿವೆ. ಮುಂದಿನ ವರ್ಷ 400 ‘ವಂದೇ ಭಾರತ್‌’ ರೈಲುಗಳು ಸಂಚರಿಸಲಿವೆ. ಮುಂಬೈ–ನವದೆಹಲಿ, ಅಹಮದಾಬಾದ್‌–ಮುಂಬೈ, ಬೆಂಗಳೂರು–ಚೆನ್ನೈ ನಡುವೆ ಬುಲೆಟ್‌ ಟ್ರೈನ್‌ ಕಾಮಗಾರಿ ಭರದಿಂದ ಸಾಗುತ್ತಿದೆ. ಹೀಗಾಗಿ ರೈಲು ಬಡವರಿಗೆ ಸೀಮಿತವಾಗಿಲ್ಲ. ಶ್ರೀಮಂತರು ಕೂಡ ರೈಲುಗಳಲ್ಲಿ ಸಂಚರಿಸುತ್ತಿದ್ದಾರೆ ಎಂದರು.

ಈ ಹಿಂದೆ ರೈಲು ನಿಲ್ದಾಣಗಳು, ಅಲ್ಲಿನ ನಿರೀಕ್ಷಣಾ ಕೊಠಡಿಗಳು, ಶೌಚಾಲಯಗಳು, ಪ್ಲಾಟ್‌ಫಾರಂಗಳು, ರೈಲುಗಳು, ಅದರ ಬೋಗಿಗಳಲ್ಲಿ ಹೊಲಸು ಇರುತ್ತಿತ್ತು. ಎಲ್ಲೆಡೆ ಅಸ್ವಚ್ಛತೆ ಕಾಣಿಸುತ್ತಿತ್ತು. ಶ್ರೀಮಂತರು ರೈಲುಗಳಲ್ಲಿ ಪ್ರಯಾಣಿಸುತ್ತಿರಲಿಲ್ಲ. ಯಾವುದೇ ರೈಲು ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ  ಅಂತರರಾಷ್ಟ್ರೀಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ‘ಸ್ವಚ್ಛ ಭಾರತ್‌’ ಅಭಿಯಾನದ ಮೂಲಕ ಸ್ವಚ್ಛತೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಮೋದಿ ಸರ್ಕಾರ ಬಂದ ನಂತರ ದೇಶದಲ್ಲಿ ಹಿಂದಿಗಿಂತ ಎರಡು ಪಟ್ಟು ಅಧಿಕ ಹೊಸ ರೈಲು ಮಾರ್ಗಗಳಾಗಿವೆ. 2024–25ರೊಳಗೆ ದೇಶದ ಎಲ್ಲಾ ರೈಲು ಮಾರ್ಗಗಳ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ. ಆಗ ದೇಶದಲ್ಲಿ ಯಾವುದೇ ಡೀಸೆಲ್‌ ಚಾಲಿತ ರೈಲು ಹಳಿ ಮೇಲೆ ಕಾಣಿಸುವುದಿಲ್ಲ. ‘ಉಡಾನ್‌’ ಯೋಜನೆಯಡಿ 148 ವಿಮಾನ ನಿಲ್ದಾಣಗಳನ್ನು ದೇಶದಲ್ಲಿ ಆರಂಭಿಸಿ, ಪ್ರತಿಯೊಬ್ಬರ ವಿಮಾನ ಪ್ರಯಾಣದ ಕನಸು ನನಸು ಮಾಡಲಾಗಿದೆ ಎಂದರು.

ನಾನು ಸಂಸದನಾಗಿ ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ 12 ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸಿರುವೆ. ಇದರಲ್ಲಿ ಕೆಲವು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ. ಬೀದರ್‌ನಿಂದ ವಿವಿಧ ಕಡೆಗಳಿಗೆ 13 ಹೊಸ ರೈಲುಗಳನ್ನು ಆರಂಭಿಸಿದ್ದೇನೆ. ನನೆಗುದಿಗೆ ಬಿದ್ದಿದ್ದ ಬೀದರ್‌–ಕಲಬುರಗಿ ರೈಲು ಮಾರ್ಗ ಪೂರ್ಣಗೊಳಿಸಿ, ಡೆಮು ರೈಲು ಆರಂಭಿಸಲಾಗಿದ್ದು, ನೂರಾರು ಜನರಿಗೆ ಅನುಕೂಲವಾಗಿದೆ. ದಶಕದ ಬೇಡಿಕೆಯಾಗಿದ್ದ ವಿಮಾನ ಸೇವೆ ಆರಂಭಿಸಿರುವೆ. ಬೆಳೆ ವಿಮೆ, ಕೃಷಿ ಸಮ್ಮಾನ್‌, ಕೃಷಿ ಸಿಂಚಾಯಿ ಯೋಜನೆ ಮೂಲಕ ಜಿಲ್ಲೆಯ 4 ಲಕ್ಷ ರೈತರಿಗೆ ಪ್ರಯೋಜನವಾಗಿದೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರದಿಂದ 50 ಸಾವಿರ ಜನ ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದಾರೆ. 7 ಲಕ್ಷ ಶೌಚಾಲಯ, ಜೆಜೆಎಂ ಅಡಿ ಪ್ರತಿಯೊಬ್ಬರಿಗೂ ಕುಡಿಯುವ ನೀರು ಪೂರೈಸುವ ಕೆಲಸ ಮಾಡಿದ್ದೇನೆ ಎಂದು ತಮ್ಮ ಸಾಧನೆ ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ ಮಲ್ಕಾಪುರೆ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಜನ ಸಂಸದರು ಆಗಿ ಹೋಗಿದ್ದಾರೆ. ಆದರೆ, ವಿದ್ಯಾವಂತರಾದ ಭಗವಂತ ಖೂಬಾ ಅವರು ಕೇಂದ್ರ ಸಚಿವರಾಗಿ ಅನೇಕ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮೋದಿ ಸರ್ಕಾರದಲ್ಲಿ ಅನೇಕ ಜನಪರ ಕೆಲಸಗಳಾಗಿವೆ. ನಮ್ಮ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ ಎಂದರು. 

ಬಸವಕಲ್ಯಾಣ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು, ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ದಕ್ಷಿಣ ಮಧ್ಯ ರೈಲ್ವೆ ಡಿಆರ್‌ಎಂ ರಾಜೀವ್‌ ಕಾಂಗಳೆ, ಕಲಾವಿದ ರಶೀದ್‌ ಅಹಮ್ಮದ್‌ ಖಾದ್ರಿ, ರೌಫೋದ್ದೀನ್‌ ಕಚೇರಿವಾಲೆ, ಶಿವರಾಜ ಗಂದಗೆ ಇತರರಿದ್ದರು.

‘ಭಾಲ್ಕಿಯಲ್ಲಿ ಕ್ರೀಡಾಂಗಣ, ನೀರಾವರಿ ಕೆಲಸ ಮಾಡಲಿ’

‘ಸ್ವಾತಂತ್ರ್ಯ ಬಂದು 75 ವರ್ಷಗಳು ಗತಿಸಿವೆ. ಇದುವರೆಗೆ ಭಾಲ್ಕಿಯಲ್ಲಿ ಕ್ರೀಡಾಂಗಣ ಇಲ್ಲ. ಆ ಕ್ಷೇತ್ರದ ಶಾಸಕರು, ಸಚಿವರು ತಕ್ಷಣವೇ ಆ ಕೆಲಸ ಮಾಡಬೇಕು. ಭಾಲ್ಕಿಯಲ್ಲಿ ₹1500 ಕೋಟಿ ನೀರಾವರಿ ಯೋಜನೆಗಳಿಗೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್‌ ಕರೆದು, ಕಾಮಗಾರಿ ಪೂರ್ಣಗೊಳಿಸಬೇಕು. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾಮಗಾರಿಗೆ ಚುರುಕು ಕೊಡಬೇಕು. ಅಲ್ಲಿ ₹100 ಕೋಟಿಯಲ್ಲಿ ಯಾತ್ರಿಕರಿಗೆ ಪ್ರವಾಸಿ ಯಾತ್ರಿ ಭವನ ನಿರ್ಮಿಸಬೇಕು. ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಬೇಕು. ಇನ್ನು, ಸಚಿವ ರಹೀಂ ಖಾನ್‌ ಅವರು ವರ್ತುಲ ರಸ್ತೆ ಕಾಮಗಾರಿ ಮುಗಿಸಬೇಕು’ ಎಂದು ಸಚಿವ ಭಗವಂತ ಖೂಬಾ ಹೇಳಿದರು.

ಓದಿ... ಬೀದರ್: ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ, ₹24 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT