ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮನೆಯಲ್ಲೇ ಇರಲು ಜಿಲ್ಲಾ ಉಸ್ತುವಾರಿ ಪ್ರಭು ಚವಾಣ್ ಮನವಿ

ನಗರ ಪ್ರದಕ್ಷಿಣೆ ಹಾಕಿ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಕೈಜೋಡಿಸಿದ ಸಚಿವ
Last Updated 30 ಏಪ್ರಿಲ್ 2021, 3:49 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಲಾದ ಕಟ್ಟುನಿಟ್ಟಿನ ಕರ್ಫ್ಯೂ ಪಾಲನೆ ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಪ್ರಭು ಚವಾಣ್ ಗುರುವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರದಕ್ಷಿಣೆ ಹಾಕಿದರು.

ಬೆಳಿಗ್ಗೆ ಮುಖ್ಯಮಂತ್ರಿ ಅವರೊಂದಿಗೆ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡ ನಂತರ ಅಂಬೇಡ್ಕರ್ ವೃತ್ತ, ಭಗತ್‍ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ರೋಟರಿ ಕನ್ನಡಾಂಬೆ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ ಮಾರ್ಗದಲ್ಲಿ ಸಂಚರಿಸಿದರು.

ದ್ವಿಚಕ್ರ ವಾಹನ, ಆಟೊ, ಕಾರುಗಳಲ್ಲಿ ಸಂಚರಿಸುತ್ತಿದ್ದವರನ್ನು ತಡೆದು, ಎಲ್ಲಿಗೆ ಹೋಗುತ್ತಿದ್ದೀರಿ, ಕರ್ಫ್ಯೂ ಇರುವುದು ನಿಮಗೆ ತಿಳಿದಿಲ್ಲವೆ, ಅನವಶ್ಯಕವಾಗಿ ಏಕೆ ತಿರುಗಾಡುತ್ತೀರಿ ಎಂದು ಪ್ರಶ್ನಿಸಿ ಕರ್ಫ್ಯೂ ನಿಯಮಗಳನ್ನು ಪಾಲನೆ ಮಾಡಿ ಸಹಕರಿಸಿ ಎಂದು ಕೈಮುಗಿದು ಮನವಿ ಮಾಡಿದರು.

ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಸುತ್ತಾಡಬಾರದು. ಕೋವಿಡ್ ಸೋಂಕು ಹರಡುತ್ತಿರುವ ಕಾರಣ ಎಚ್ಚರ ವಹಿಸಬೇಕು. ಬಹಳ ಅವಶ್ಯವಿದ್ದರೆ ಮಾತ್ರ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಹೊರಗಡೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಲ್ಲಿ ಅಲ್ಲಲ್ಲಿ ನಿಂತಿದ್ದ ಜನರ ಹತ್ತಿರ ಖುದ್ದು ತೆರಳಿ ಇಲ್ಲೇಕೆ ನಿಂತಿದ್ದೀರಿ, ಕರ್ಫ್ಯೂ ನಿಯಮಗಳು ನಿಮಗೆ ಅನ್ವಯವಾಗುವುದಿಲ್ಲವೆ, ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಏರಿಕೆಯಾಗುತ್ತಿರುವುದು ನಿಮಗೆ ತಿಳಿದಿಲ್ಲವೆ, ಅನವಶ್ಯಕವಾಗಿ ಹೊರಗಡೆ ಇರುವುದು ಸರಿಯಲ್ಲ. ಮೊದಲು ನಿಯಮ ಪಾಲನೆ ಮಾಡಿ ಎಂದು ಹೇಳಿದರು.

ಕೇಂದ್ರ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನಗಳ ಸವಾರರು, ಆಟೊ ಸವಾರರನ್ನು ತಡೆದು ತಿಳಿ ಹೇಳಿ, ಕರ್ಫ್ಯೂವಿಗೆ ಸಹಕರಿಸುವಂತೆ ವಿನಂತಿಸಿದರು.

ಇದೇ ವೇಳೆ ಕೋವಿಡ್ ಸೋಂಕಿಗೆ ನಗರದ ವಾಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಭು ಬಿರಾದಾರ ಅವರ ಸಂಬಂಧಿಕರೊಬ್ಬರು ರೆಮ್‍ಡಿಸಿವಿರ್ ಚುಚ್ಚುಮದ್ದು ಸಿಗುತ್ತಿಲ್ಲ ಎಂದು ಸಚಿವರ ಗಮನ ಸೆಳೆದರು.

ಸಚಿವರು ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತನಾಡಿ, ತಕ್ಷಣ ಚುಚ್ಚುಮದ್ದು ನೀಡಲು ಸೂಚಿಸಿದರು.

ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಸಂಚಾರ ಪೊಲೀಸರು ನಿಂತಿರುವುದು ಕಂಡು ಬಂದಿತು. ಬಹುತೇಕ ರಸ್ತೆಗಳಲ್ಲಿ ಜನ ಸಂಚಾರ ತೀರಾ ವಿರಳವಾಗಿತ್ತು. ಕೆಲ ರಸ್ತೆಗಳು ವಾಹನ ಮತ್ತು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಸಾರ್ವಜನಿಕರಲ್ಲಿ ಮನವಿ: ರಾಜ್ಯ ಸರ್ಕಾರ 14 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದೆ. ಜನರು ಮನೆಯಲ್ಲಿಯೇ ಇದ್ದು, ಕರ್ಫ್ಯೂಗೆ ಸಹಕರಿಸಬೇಕು ಎಂದು ಸಚಿವ ಚವಾಣ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT