ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ರೈತ ಸ್ನೇಹಿ’ ಯೋಜನೆ ಕೈಬಿಡಬೇಡಿ: ಪಶು ಸಂಗೋಪನಾ ಸಚಿವರಿಗೆ ಶಾಸಕ ಪ್ರಭು ಚವಾಣ್

Published : 18 ಸೆಪ್ಟೆಂಬರ್ 2024, 12:55 IST
Last Updated : 18 ಸೆಪ್ಟೆಂಬರ್ 2024, 12:55 IST
ಫಾಲೋ ಮಾಡಿ
Comments

ಹೆಡಗಾಪೂರ (ಬೀದರ್‌): ‘ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಗೋ ಹತ್ಯೆ ನಿಷೇಧ ಸೇರಿದಂತೆ ಅನೇಕ ರೈತ ಸ್ನೇಹಿ ಯೋಜನೆಗಳು ಈ ಸರ್ಕಾರ ಮುಂದುವರೆಸಿಕೊಂಡು ಹೋಗಬೇಕು’ ಎಂದು ಶಾಸಕ ಪ್ರಭು ಚವಾಣ್ ಒತ್ತಾಯಿಸಿದರು.

ಪಶು ಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಬುಧವಾರ ಇಲ್ಲಿ ಆಯೋಜಿಸಿದ್ದ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿಲ್ಲ. ಅಕ್ರಮ ಗೋ ಸಾಗಾಟಕ್ಕೆ ಯಾವುದೇ ನಿಯಂತ್ರಣ ಇಲ್ಲವಾಗಿದೆ. ರಾಜ್ಯದಲ್ಲಿ 100 ಗೋಶಾಲೆ ತೆರೆಯುವ ಯೋಜನೆ ನಿಂತು ಹೋಗಿದೆ. ಇರುವ ಗೋಶಾಲೆಗಳಿಗೆ ಸೂಕ್ತ ನೆರವು ಸಿಗದೆ ಅವುಗಳ ಸ್ಥಿತಿಯೂ ಚಿಂತಾಜನವಾಗಿದೆ. 108 ಅಂಬುಲೆನ್ಸ್ ಮಾದರಿಯಲ್ಲಿ ಜಾನುವಾರುಗಳಿಗೂ ತ್ವರಿತ ಆರೋಗ್ಯ ಸೇವೆ ನೀಡಲು ಪಶು ಸಂಜೀವಿನಿ ಯೋಜನೆಯಲ್ಲಿ 275 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಈಗ ಈ ಯೋಜನೆಯೂ ಸರಿಯಾಗಿ ಜಾರಿಯಾಗುತ್ತಿಲ್ಲ. ಪುಣ್ಯಕೋಟಿ ಯೋಜನೆಯಡಿ ದಾನಿಗಳಿಂದ ₹30 ಕೋಟಿ ಹಣ ಸಂಗ್ರಹಿಸಿ ಆ ಹಣ ನೇರವಾಗಿ ಗೋಶಾಲೆಗೆ ನೀಡಲಾಗಿದೆ. ಈ ಯೋಜನೆ ಕೂಡ ನಿಂತು ಹೋಗಿದೆ. ಇನ್ನು ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಸೇರಿದಂತೆ ರೈತರ ಅನುಕೂಲಕ್ಕೆ ಮಾಡಿದ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಿಸದೆ ಅವು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಈಗ ಶಂಕುಸ್ಥಾಪನೆ ಆಗುತ್ತಿರುವ ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪನೆಗೆ ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ರೈತರನ್ನು ಮನವೊಲಿಸಿ 33 ಎಕರೆ ಜಮೀನು ಕೊಡಿಸಿದ್ದೇನೆ. ಈ ಕಟ್ಟಡ ನಿಗದಿತ ಅವಧಿಯಲ್ಲಿ ಹಾಗೂ ಗುಣಮಟ್ಟದಿಂದ ಆಗಬೇಕು. ಈ ವಿಷಯದಲ್ಲಿ ದೋಷ ಆದರೆ ನಾನು ಸಹಿಸುವುದಿಲ್ಲ ಎಂದು ಹೇಳಿದರು.

ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ತಾಲ್ಲೂಕಿಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಈಗಾಗಲೇ ಮಂಜೂರಾಗಿರುವ 33 ಕೆರೆ ತುಂಬಿಸುವ ಯೋಜನೆಗಾದರೂ ಹಣ ಬಿಡುಗಡೆ ಮಾಡಬೇಕಿತ್ತು ಎಂದು ಹೇಳಿದರು.

ವರ್ಷದಲ್ಲಿ ಕಟ್ಟಡ ‌ಪೂರ್ಣ: ಸಚಿವ ವೆಂಕಟೇಶ

ಹೆಡಗಾಪೂರ (ಬೀದರ್‌): ‘₹35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಇಲ್ಲಿಯ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಕಟ್ಟಡ ಒಂದು ವರ್ಷದಲ್ಲಿ ಪೂರ್ಣ ಆಗಲಿದೆ’ ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ ಹೇಳಿದರು.

ಪಶು ಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಬುಧವಾರ ಇಲ್ಲಿ ಆಯೋಜಿಸಿದ್ದ ಜಾನುವಾರು ತಿಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸರ್ಕಾರ ನಬಾರ್ಡ್‌ನಿಂದ ಸಾಲ ಪಡೆದು ಈ ಕಟ್ಟಡ ನಿರ್ಮಿಸುತ್ತಿದೆ. ಹಿಂದೆ ಪ್ರಭು ಚವಾಣ್ ಅವರು ಪಶು ಸಂಗೋಪನಾ ಇಲಾಖೆ ಸಚಿವರಿದ್ದಾಗ ಮಂಜೂರಾತಿ ಸಿಕ್ಕಿದೆ. ಈಗ ನಾವು ಕೆಲಸ ಶುರು ಮಾಡುತ್ತಿದ್ದೇವೆ. ಈಗಾಗಲೇ ₹5 ಕೋಟಿ ಬಿಡುಗಡೆ ಆಗಿದೆ. ಉಳಿದ ಹಣ ಕೂಡ ಶೀಘ್ರದಲ್ಲಿ ಬಿಡುಗಡೆ ಆಗಲಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಹೆಸರಘಟ್ಟ ನಂತರ ರಾಜ್ಯದಲ್ಲಿ ಇದು ಎರಡನೇ ಜಾನುವಾರು ತಳಿ ಸಂವರ್ಧನಾ ಕೇಂದ್ರವಾಗಿದೆ. ಇದು ಹಿಂದುಳಿದ ಜಿಲ್ಲೆ ಹಾಗೂ ಇಲ್ಲಿಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಕೆಲಸ ಆಗುತ್ತಿದೆ. ದೇವಣಿ, ಮುರ‍್ರಾ ಸೇರಿದಂತೆ ಕೆಲ ವಿಶೇಷ ಜಾನುವಾರು ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಆಗಬೇಕು. ಇಲ್ಲಿ ಇನ್ನು ಜಾಸ್ತಿ ಹಾಲು ಉತ್ಪಾದನೆಯಾಗಬೇಕು. ಇದಕ್ಕಾಗಿ ರೈತರಿಗೆ ತರಬೇತಿ ಹಾಗೂ ನೆರವು ಅಗತ್ಯವಾಗಿದೆ. ಈ ಕೆಲಸ ಹೊಸದಾಗಿ ಆಗಲಿರುವ ಸಂವರ್ಧನಾ ಕೇಂದ್ರ ಮಾಡಲಿದೆ. ಒಂದು ವರ್ಷದಲ್ಲಿ ನೂತನ ಕಟ್ಟಡದ ಉದ್ಘಾಟನೆಯೂ ಆಗುತ್ತದೆ. ಅದಕ್ಕೆ ಬೇಕಾಗುವ ಅಗತ್ಯ ಸಿಬ್ಬಂದಿಯೂ ಒದಗಿಸಿಕೊಡುವುದಾಗಿ ಹೇಳಿದರು.

‘ನಾವು ಉತ್ತಮ ಕೆಲಸ ಮಾಡಿದಾಗ ಹೇಳಿಲ್ಲ’

‘ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವುದಕ್ಕೆ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಅಭಿನಂದಿಸುತ್ತೇನೆ. ಅವರು ಉತ್ತಮ ಕೆಲಸ ಮಾಡಿದ್ದಾರೆ. ಅದಕ್ಕೆ ಅಭಿನಂದನೆ ತಿಳಿಸುವೆ. ಆದರೆ, ನಾವು ಉತ್ತಮ ಕೆಲಸ ಮಾಡಿದಾಗ ಅವರು ನನ್ನಂತೆ ಈ ತರಹದ ಮಾತುಗಳನ್ನು ಹೇಳಿಲ್ಲ’ ಎಂದು ಶಾಸಕ ಪ್ರಭು ಚವಾಣ್‌ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

‘ನಮ್ಮ ಔರಾದ್‌ ತಾಲ್ಲೂಕಿಗೂ ಹೆಚ್ಚಿನ ಅನುದಾನ ಕೊಡಬೇಕು. ಕೆರೆ ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ಕೊಡಬೇಕು. ನೀವು ಕೆಲಸ ಆರಂಭಿಸುವವರೆಗೆ ನಾನು ಬಿಡುವುದಿಲ್ಲ. ಕಾರಂಜಾದಿಂದ ಔರಾದ್‌ಗೆ ನೀರು ತರುವ ಯೋಜನೆಗೂ ಚಾಲನೆ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ನಾನು ಸಚಿವನಿದ್ದಾಗ ಖಂಡ್ರೆ ವಿರೋಧಿಸಿದ್ರು’

‘ಬೀದರ್‌ ಹೊರವಲಯದ ಕೊಳಾರ ಸಮೀಪ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ನಾನು ಸಚಿವನಿದ್ದಾಗ ಪ್ರಯತ್ನಿಸುವಾಗ ಸಚಿವ ಈಶ್ವರ ಬಿ. ಖಂಡ್ರೆಯವರು ವಿರೋಧಿಸಿದ್ರು. ಡಿಸಿ ಕಚೇರಿ ಊರ ಹೊರಗೆ ಇದ್ದರೆ ಎಲ್ಲ ಭಾಗದವರಿಗೆ ಅನುಕೂಲವಾಗುತ್ತಿತ್ತು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಎಲ್ಲಾದರೂ ಮಾಡಿ ಆದರೆ, ಬೇಗ ಮಾಡಿ’ ಎಂದು ಶಾಸಕ ಪ್ರಭು ಚವಾಣ್‌ ಒತ್ತಾಯಿಸಿದರು. ಅದಕ್ಕೆ ಈಶ್ವರ ಬಿ. ಖಂಡ್ರೆ ಅವರು ಅವರಿದ್ದ ಸ್ಥಳದಿಂದಲೇ ಪ್ರತಿಕ್ರಿಯಿಸಿ, ‘ಜನರ ಅಭಿಪ್ರಾಯ ಆಧರಿಸಿ ಮಾಡಿದ್ದೇವೆ’ ಎಂದರು.

ಜಿಲ್ಲಾ ಉಸ್ತುವಾರಿ, ಸಂಸದ ಹೀಗೆ ಎಲ್ಲ ಜವಾಬ್ದಾರಿ ನಿಮ್ಮ (ಖಂಡ್ರೆಯವರಿಗೆ) ಮನೆಯವರಿಗೆ ಸಿಕ್ಕಿದೆ. ಈಗಲಾದರೂ ಬೀದರ್‌ನಿಂದ ವಿಮಾನ ಸಂಚಾರ ಆರಂಭಿಸಬೇಕು ಎಂದು ಚವಾಣ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT