ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತೀಕ್‌ ಚವಾಣ್ ಜಾತಿ ಪ್ರಮಾಣ ಪತ್ರದ ತನಿಖೆ ನಡೆಯಲಿ: ಮೀನಾಕ್ಷಿ ಸಂಗ್ರಾಮ

ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ
Last Updated 5 ಆಗಸ್ಟ್ 2021, 14:49 IST
ಅಕ್ಷರ ಗಾತ್ರ

ಬೀದರ್‌: ಸಚಿವ ಪ್ರಭು ಚವಾಣ್‌ ಅವರ ಪುತ್ರ ಪ್ರತೀಕ್‌ ಚವಾಣ್ ಅವರಿಗೆ ನೀಡಲಾದ ಜಾತಿ ಪ್ರಮಾಣಪತ್ರದ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಆಗ್ರಹಿಸಿದ್ದಾರೆ.

ಪ್ರತೀಕ್‌ ಮಹಾರಾಷ್ಟ್ರದಲ್ಲಿ ಜನಿಸಿ ಅಲ್ಲಿಯೇ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪಡಿತರ ಚೀಟಿ ಸಹ ಹೊಂದಿದ್ದಾರೆ. ಔರಾದ್ ತಹಶೀಲ್ದಾರ್ ಸರಿಯಾದ ದಾಖಲೆಗಳನ್ನು ಪಡೆದುಕೊಳ್ಳದೆ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದ್ದಾರೆ. ಪ್ರತೀಕ್‌ ಪ್ರಸ್ತುತ ಬೆಂಗಳೂರಿನ ರಾಮಯ್ಯ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಂಜಾರಾ ಸಮುದಾಯ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಮಲನಗರ ತಾಲ್ಲೂಕಿನ ಮುಧೋಳ ಗ್ರಾಮದ ಧನರಾಜ್ ಬಾಪು ಹಾಗೂ ಹಾಲಹಳ್ಳಿಯ ನಾಮದೇವ ಜಯವಂತ 2021ರ ಮಾರ್ಚ್ 15ರಂದು ಔರಾದ್ ತಹಶೀಲ್ದಾರ್‌ ಹಾಗೂ ಪ್ರತೀಕ್‌ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿ ಕ್ರಮ ಜರುಗಿಸದ ಕಾರಣ ಏಪ್ರಿಲ್‌ 6 ರಂದು ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಯಿಂದ ಸ್ಪಷ್ಟೀಕರಣ ಕೇಳಿದರೂ ಉತ್ತರಿಸಿಲ್ಲ. ಹೀಗಾಗಿ ಏಪ್ರಿಲ್ 15ರಂದು
ಮುಖ್ಯ ಕಾರ್ಯದರ್ಶಿಗೆ ದೂರು ಕೊಡಲಾಗಿದೆ. ಜುಲೈ 24ರಂದು ದೆಹಲಿಯಲ್ಲಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು ಸಲ್ಲಿಸಿದ ನಂತರ ಆಯೋಗ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಹೀಗಾಗಿ ಜಿಲ್ಲಾಧಿಕಾರಿ ಆಗಸ್ಟ್ 6ರಂದು ವಿಚಾರಣೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು. ಲೋಪ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕೈಗೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT