ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಪೂರ್ವ ತರಬೇತಿ ಶಿಬಿರ; ರಕ್ಷಣಾ ಇಲಾಖೆಗೆ ಸೇರಲು ನೆರವು: ಖೂಬಾ

Last Updated 9 ನವೆಂಬರ್ 2021, 5:38 IST
ಅಕ್ಷರ ಗಾತ್ರ

ಬೀದರ್: ‘ಕಲ್ಯಾಣ ಕರ್ನಾಟಕ ಭಾಗದ ಯುವಕರು ರಕ್ಷಣಾ ಇಲಾಖೆಯಲ್ಲಿನ ಉದ್ಯೋಗ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಲಹೆ ಮಾಡಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ನಡೆಯುತ್ತಿರುವ ಸೇನಾ ಪೂರ್ವ ತರಬೇತಿ ಶಿಬಿರಕ್ಕೆ ಸೋಮವಾರ ಭೇಟಿ ನೀಡಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಸೇನಾ ಪೂರ್ವ ತರಬೇತಿಯು ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ನೆರವಾಗಲಿದೆ. ಶಿಸ್ತು, ಸಂಯಮ, ಸಮಯ ಪ್ರಜ್ಞೆಯೊಂದಿಗೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದರು.

‘ಈ ಭಾಗದ 250 ಅಭ್ಯರ್ಥಿಗಳನ್ನು ಸೇನೆಗೆ ಸೇರಿಸುವ ಸಂಕಲ್ಪದೊಂದಿಗೆ ಸೇನಾ ಪೂರ್ವ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಅವರ ಶ್ರಮ ಫಲ ಕೊಡಲಿದೆ’ ಎಂದು ಆಶಿಸಿದರು.

‘ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು 2025ರ ವೇಳೆಗೆ ಈ ಭಾಗವನ್ನು ಮಾದರಿಯನ್ನಾಗಿ ಮಾಡುವ ದಿಸೆಯಲ್ಲಿ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಎಲ್ಲ ಕ್ಷೇತ್ರಗಳ ಪ್ರಗತಿಗೂ ಅವರು ಶ್ರಮಿಸುತ್ತಿದ್ದಾರೆ’ ಎಂದು ಪ್ರಶಂಸಿಸಿದರು.

ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ‘ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರಬೇಕು ಎಂಬುವುದು ಸಂಘದ ಆಕಾಂಕ್ಷೆ’ ಎಂದರು.

ಅಕಾಡೆಮಿಯ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಗೆ ಸೇರುವವರ ಕನಸು ನನಸಾಗಿಸಲು ಸೈನಿಕ ಅಕಾಡೆಮಿ ತೆರೆಯಲಾಗಿದೆ ಎಂದು ಹೇಳಿದರು.

ಶಿಬಿರಾರ್ಥಿಗಳು ಪಥ ಸಂಚಲನ ನಡೆಸಿಕೊಟ್ಟರು. ಹುತಾತ್ಮ ಯೋಧರಿಗೆ ಗೌರನ ನಮನ ಸಲ್ಲಿಸಲಾಯಿತು.

ವಿಮಲಾ ಸಿಕೇನಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಅಕಾಡೆಮಿಯ ನಿರ್ದೇಶಕ ಡಾ. ರಘು ಕೃಷ್ಣಮೂರ್ತಿ, ಆರ್.ಜಿ. ಹಿರೇಮಠ, ಸುಮೀತ್ ಸಿಂದೋಲ್, ಪ್ರಕಾಶ ಟೊಣ್ಣೆ, ನಾಗರಾಜ ಕರ್ಪೂರ ಇದ್ದರು.

ಅಕಾಡೆಮಿ ಪ್ರಾಚಾರ್ಯೆ ಕಾರಂಜಾ ನಿರೂಪಿಸಿದರು. ಶಿಕ್ಷಕ ಬಸವರಾಜ ವಂದಿಸಿದರು.

ಕಬ್ಬಿನ ಬಾಕಿ ಹಣ ಪಾವತಿಗೆ ಕೇಂದ್ರ ಸಚಿವ ಒತ್ತಾಯ

ಬೀದರ್: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಕೊಟ್ಟ ಮಾತಿಗೆ ತಪ್ಪಿ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿವೆ ಎಂದು ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಸಮಾಧಾನ ವ್ಯಕಪಡಿಸಿದರು.

ಕಾರ್ಖಾನೆಗಳು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಮುಂದೆ ಬೆಳೆಗಾರರಿಗೆ 2019-20ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹ 2,250 ಹಾಗೂ 2020-21ನೇ ಸಾಲಿಗೆ ₹2,400 ನೀಡುವುದಾಗಿ ಒಪ್ಪಿಕೊಂಡಿದ್ದವು. ಆದರೆ, ಬೆಳೆಗಾರರಿಂದ ಕಬ್ಬು ಪಡೆದು ಇಲ್ಲಿಯವರೆಗೆ ಹಣ ಪಾವತಿಸಿಲ್ಲ. ಇದು ಸರಿಯಾದ ನಡೆಯಲ್ಲ. ರೈತರಿಂದ ಬೆಳೆದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಇಂದು ಅವರ ಜತೆ ಈ ತರಹದ ವ್ಯವಹಾರ ಮಾಡುವುದು ಸೂಕ್ತವಲ್ಲ. ಇದು ತೀರಾ ಕೆಳ ಮಟ್ಟದ ಕೆಲಸ. ಕೂಡಲೇ ಬೆಳೆಗಾರರಿಗೆ ಕಬ್ಬಿನ ಬಾಕಿ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ಅವರು ಒತ್ತಾಯಿಸಿದ್ದಾರೆ.

ಈ ವರ್ಷ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳು ನೀಡುವ ಬೆಲೆ ಘೊಷಿಸಬೇಕು. ಇಲ್ಲವಾದಲ್ಲಿ ರೈತರು ಬೇರೆ ದಾರಿ ನೋಡಿಕೊಳ್ಳುತ್ತಾರೆ. ಹೆಚ್ಚು ಬೆಲೆ ನೀಡುವ ಕಾರ್ಖಾನೆಗಳಿಗೆ ಕಬ್ಬು ಪೂರೈಸುವರು. ಬೆಳೆಗಾರರಿಗೆ ತೊಂದರೆ ಕೊಡದೆ ಕಬ್ಬಿನ ಬಾಕಿ ಹಣ ನೀಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT