ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೆಗಳು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿ

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ
Last Updated 4 ಆಗಸ್ಟ್ 2018, 10:55 IST
ಅಕ್ಷರ ಗಾತ್ರ

ಬೀದರ್‌: ‘ಪತ್ರಿಕೆಗಳು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಹೇಳಿದರು.

ನಗರದ ಸಿ.ವಿ. ರಾಮನ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಕಾರದೊಂದಿಗೆ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪತ್ರಿಕೆಯ ಧ್ಯೇಯ ಹಾಗೂ ಉದ್ದೇಶಗಳು ಬದಲಾಗಿಲ್ಲ. ಕೆಲವರ ವೈಯಕ್ತಿಕ ಹಿತಾಸಕ್ತಿ ಪತ್ರಿಕೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತಿರಬಹುದು. ಆದರೆ, ಸಮಗ್ರವಾಗಿ ಅವಲೋಕನ ಮಾಡಿದರೆ ಇವತ್ತಿಗೂ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಉಳಿಸಿಕೊಂಡು ಬಂದಿವೆ’ ಎಂದು ನುಡಿದರು.

‘ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಖಚಿತವಾದ ಸುದ್ದಿಗಳನ್ನು ಪ್ರಕಟಿಸುವಲ್ಲಿ ‘ಪ್ರಜಾವಾಣಿ’ ಇಂದಿಗೂ ಮುಂಚೂಣಿಯಲ್ಲಿದೆ. ಅಂತೆಯೇ ಓದುಗರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳು ಇದ್ದರೂ ಕೆಲವೊಮ್ಮೆ ಪರಿಣಾಮಕಾರಿ ಕೆಲಸ ಮಾಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮಾಧ್ಯಮಗಳೇ ಜೀವಂತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಗಂಧರ್ವ ಸೇನಾ ಮಾತನಾಡಿ, ‘ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಮಟ್ಟಹೆಚ್ಚಿಸಿಕೊಳ್ಳಬೇಕು. ಕೇವಲ ಪಠ್ಯ ಜ್ಞಾನದಿಂದ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಾಲೇಜು ದಿನಗಳಲ್ಲೇ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಾಮಾಜಿಕ ಜಾಲ ತಾಣಗಳ ಬಳಕೆಯ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ವಿದ್ಯುತ್‌ ಬಳಸಿಕೊಳ್ಳಲು ಬಟನ್‌ ಮಾತ್ರ ಬಳಸಬೇಕು. ಅದನ್ನು ಬಿಟ್ಟು ಪ್ಲಗ್‌ನಲ್ಲಿ ಬೆರಳು ಹಾಕಿದರೆ ಶಾಕ್‌ ಕೊಡುತ್ತದೆ. ಅಂತರ್ಜಾಲ ಬಳಕೆ ವಿಷಯದಲ್ಲೂ ಇದು ಅನ್ವಯವಾಗುತ್ತದೆ’ ಎಂದು ಹೇಳಿದರು.

ಪತ್ರಕರ್ತ ಮಲ್ಲಿಕಾರ್ಜುನ ನಾಗರಾಳ ಮಾತನಾಡಿ, ‘ದೃಶ್ಯ ಮಾಧ್ಯಮಗಳು ಟಿಆರ್‌ಪಿಗೆ ಮಹತ್ವ ಕೊಟ್ಟು ಸುದ್ದಿಗಳ ಪ್ರಸಾರ ಮಾಡುತ್ತಿವೆ. ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಸುದ್ದಿಗಳನ್ನು ಬಿತ್ತರಿಸುವ ಪ್ರವೃತ್ತಿ ಹೆಚ್ಚಾಗಿದೆ. ಹೀಗಾಗಿ ಗಂಡ ಹೆಂಡಿರ ಜಗಳವೂ ಸುದ್ದಿಯಾಗುತ್ತಿದೆ’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಚಂದ್ರಕಾಂತ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ದೇವೇಂದ್ರ ಕರಂಜೆ ಇದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಪಿ.ಮುದಾಳೆ ಸ್ವಾಗತಿಸಿದರು. ಪ್ರವೀಣ ನಿರೂಪಿಸಿದರು. ವೀರಶೆಟ್ಟಿ ಚನಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT